ಜನಸಾಮಾನ್ಯರ ಸೇವೆಯೇ ನಿಜವಾದ ರಾಜಕಾರಣ; ಕಾಂಗ್ರೆಸ್ ಸಿದ್ಧಾಂತ ಅನುಷ್ಠಾನಗೊಳಿಸುತ್ತಿರುವ ಅಶೋಕ್ ರೈ: ಬಿ.ಕೆ. ಹರಿಪ್ರಸಾದ್ ಶ್ಲಾಘನೆ

ಪುತ್ತೂರು: ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೇ ನಿಜವಾದ ರಾಜಕಾರಣವಾಗಿದೆ. ಕೆಲವು ಸಂಘಟನೆಗಳು ರಾಜಕಾರಣ ಎಂಬ ಶಬ್ದವನ್ನು ಕೆಟ್ಟದಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದರೂ, ನಿಷ್ಠಾವಂತ ಜನಪ್ರತಿನಿಧಿಯಾಗಿ ಶಾಸಕ ಅಶೋಕ್ ಕುಮಾರ್ ರೈ ಅವರು ಎಲ್ಲರನ್ನೂ ಒಳಗೊಂಡು ಕಾಂಗ್ರೆಸ್ ಸಿದ್ಧಾಂತವನ್ನು ಅತ್ಯಂತ ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ಸ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಜನಸೇವಾ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಅಶೋಕ ಜನಮನ’ ಉಡುಗೊರೆ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಧರ್ಮಾಧಾರಿತ ರಾಜಕಾರಣ ಎಂದಿಗೂ ಶಾಶ್ವತವಲ್ಲ; ನಾವು ರಾಜಕಾರಣದಲ್ಲಿ ಇರುವುದು ಜನರ ಸೇವೆಗಾಗಿಯೇ ಹೊರತು ನಮ್ಮ ಸ್ವಂತ ಜೀವನಕ್ಕಲ್ಲ. ಹಿಂದೆ ಭೂಸುಧಾರಣಾ ಕಾಯ್ದೆಯಡಿ ಬಡವರಿಗೆ ಭೂಮಿ ನೀಡಿದ ಸುಬ್ಬಯ್ಯ ಶೆಟ್ಟಿ ಹಾಗೂ ಬಡವರಿಗಾಗಿ ಬ್ಯಾಂಕ್ ಸ್ಥಾಪಿಸಿದ ಸುಂದರರಾಮ್ ಶೆಟ್ಟಿ ಅವರ ಹಾದಿಯಲ್ಲೇ ಅಶೋಕ್ ರೈ ಸಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದೆ ಎಂದರು.
ಪ್ರಾಮಾಣಿಕ ಸೇವೆಯ ಮೂಲಕ ಜನರ ಋಣ ತೀರಿಸುವೆ: ಶಾಸಕ ಅಶೋಕ್ ರೈ
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, “ಎಷ್ಟು ಜನ ಬಡವರಿಗೆ ಸಹಾಯ ಮಾಡಲು ಸಾಧ್ಯವೋ ಅಷ್ಟು ನೆರವು ನೀಡುತ್ತೇವೆ. ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಯೋಜನೆ ಜಾರಿಗೆ ತಂದಿದ್ದೇವೆ. ಜನರ ಋಣವನ್ನು ತೀರಿಸಲು ಬೇರೆ ಯಾವುದೇ ಯೋಜನೆಗಳಿಲ್ಲ; ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ನಿಮ್ಮೆಲ್ಲರ ಋಣವನ್ನು ತೀರಿಸುತ್ತೇನೆ” ಎಂದು ಭರವಸೆ ನೀಡಿದರು.
ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಉಡುಗೊರೆ ನೀಡುವ ಸಂಪ್ರದಾಯ ಈಗ 1 ಲಕ್ಷ ಜನರಿಗೆ ಉಡುಗೊರೆ ನೀಡುವ ಮಟ್ಟಕ್ಕೆ ಬೆಳೆದಿದೆ. ಇಲ್ಲಿ ಉಡುಗೊರೆಗಿಂತಲೂ ಜನರು ತೋರುವ ಪ್ರೀತಿ-ವಿಶ್ವಾಸವೇ ಮುಖ್ಯವಾಗಿದೆ. ರೈ ಎಸ್ಟೇಟ್ಸ್ ಟ್ರಸ್ಟ್ ಮೂಲಕ ಈವರೆಗೆ ಸುಮಾರು 25 ಸಾವಿರ ಮಂದಿಗೆ ನೆರವು ನೀಡಲಾಗಿದ್ದು, ಈ ಬಾರಿಯ ‘ಅಶೋಕ ಜನಮನ’ ಕಾರ್ಯಕ್ರಮಕ್ಕೆ ₹4 ಕೋಟಿ ವೆಚ್ಚ ಮಾಡಲಾಗುತ್ತಿದೆ. ಶಾಸಕನಾಗಿ ಕ್ಷೇತ್ರಕ್ಕೆ ₹2,000 ಕೋಟಿಗೂ ಅಧಿಕ ಅನುದಾನದ ಯೋಜನೆಗಳನ್ನು ತಂದಿದ್ದು, ಮೆಡಿಕಲ್ ಕಾಲೇಜು, ಕ್ರೀಡಾಂಗಣ, ಆರ್‌ಟಿಒ ಟ್ರ್ಯಾಕ್ ಹಾಗೂ ಕುಡಿಯುವ ನೀರಿನಂತಹ ಯೋಜನೆಗಳು ಪುತ್ತೂರಿನ ಅಭಿವೃದ್ಧಿಗೆ ಹೊಸ ಮೈಲಿಗಲ್ಲಾಗಲಿವೆ ಎಂದು ತಿಳಿಸಿದರು.
ಪುತ್ತೂರಿನ ಆಧುನಿಕ ಭಗೀರಥ:
ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಮಾತನಾಡಿ, ಕುಡಿಯುವ ನೀರು, ರಸ್ತೆ, ಕ್ರೀಡಾಂಗಣ ಹಾಗೂ ಮೆಡಿಕಲ್ ಕಾಲೇಜು ತರುವ ಮೂಲಕ ಅಶೋಕ್ ರೈ ಪುತ್ತೂರಿನ ‘ಆಧುನಿಕ ಭಗೀರಥ’ರಾಗಿದ್ದಾರೆ; ಅವರ ಸೇವೆ ಇಡೀ ಜಿಲ್ಲೆಗೆ ವಿಸ್ತರಿಸಲಿ ಎಂದು ಹಾರೈಸಿದರು.
ಶಾಸಕರ ಮಾತೃಶ್ರೀ ಗಿರಿಜಾ ಎಸ್. ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಪುತ್ತೂರು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಜೆ.ಬಿ. ಸಾಲ್ಡಾನಾ ಹಾಗೂ ಮುಸ್ಲಿಂ ಧರ್ಮಗುರು ಮೆಹರೂಫ್ ಸುಲ್ತಾನ್ ಅಲ್ ಫಾರೂಖಾನಿ ಆಶೀರ್ವಚನ ನೀಡಿದರು.
ಗಮನ ಸೆಳೆದ ಉಡುಗೊರೆ ವಿತರಣೆ ಮತ್ತು ಲೈವ್ ದೋಸೆ:
ಸಮಾರಂಭದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಗೆ ಸೀರೆ, ಬೆಡ್‌ಶೀಟ್, ಟವೆಲ್ ಹಾಗೂ ತಟ್ಟೆ-ಲೋಟಗಳ ಉಡುಗೊರೆ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಲಕ್ಷಾಂತರ ಜನರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಲೈವ್ ದೋಸೆ, ಊಟೋಪಹಾರ ಹಾಗೂ ಗೂಡುದೀಪ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿತ್ತು.

. . . . . . . . .


ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಪುತ್ತೂರು ಆದರ್ಶ ವಿ.ಸ. ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಟ್ರಸ್ಟ್ ನಿರ್ದೇಶಕಿ ಸುಮಾ ಎ. ರೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಆರ್. ಶೆಟ್ಟಿ ಸ್ವಾಗತಿಸಿ, ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading