ಸುಳ್ಯ ತಾಲೂಕಿನ ಸಾಹಿತಿಗಳು, ಸಾಧಕರ ಪರಿಚಯ ಮಾಲಿಕೆ ಕೃತಿಗಳ ಬಿಡುಗಡೆ | ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಸಾಹಿತಿಗಳು ಪ್ರೇರಣೆ ನೀಡಬೇಕು: ಡಾ. ಕೆ.ವಿ. ಚಿದಾನಂದ

ಉತ್ತಮ ಸಾಹಿತಿಗಳು ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯದ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹೇಳಿದರು.

. . . . . . . . .

ನ. 23ರಂದು ಅಂಬೆಟಡ್ಕದಲ್ಲಿರುವ ಕನ್ನಡ ಭವನದಲ್ಲಿ ನಡೆದ ಸುಳ್ಯ ತಾಲೂಕಿನ ಸಾಹಿತಿಗಳು ಮತ್ತು ಸಾಧಕರ ಪರಿಚಯ ಮಾಲಿಕೆಯಲ್ಲಿ ಪ್ರಕಟಗೊಂಡ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ ಸಾಧಕರ ಪರಿಚಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಶ್ಲಾಘನೀಯ. ಇಂತಹ ಕೃತಿಗಳು ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಮೂಡಿಸುವುದರ ಜೊತೆಗೆ ಸ್ಥಳೀಯ ಸಾಹಿತಿಗಳ ಸಾಹಿತ್ಯಿಕ ಸಾಧನೆಗಳನ್ನು ಅರಿಯಲು ಸಹಕಾರಿಯಾಗಲಿವೆ ಎಂದರು.

. . . . . . .

ಕ.ಸಾ.ಪ. ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಳ್ಯ ತಾಲೂಕಿನಲ್ಲಿ ಅನೇಕ ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ರಚಿಸಿರುವ ಕೃತಿಗಳು ವಿದ್ಯಾರ್ಥಿಗಳಿಗೆ ಹಾಗೂ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು. ಇಂತಹ ಪರಿಚಯ ಮಾಲಿಕೆಗಳ ಮೂಲಕ ಮಕ್ಕಳಿಗೆ ಸ್ಥಳೀಯ ಸಾಹಿತಿಗಳು ಮತ್ತು ಸಾಧಕರ ಪರಿಚಯ ಮಾಡಿಕೊಡಲು ಸಾಧ್ಯವಾಗುತ್ತದೆ ಎಂದರು.

ಪರಿಚಯ ಮಾಲಿಕೆಯಲ್ಲಿ ನಂದಾಕುಮಾರ ಸ್ವಾಮಿ ಅವರ ಪ್ರಗತಿಶೀಲ ಬರಹಗಾರ ನಿರಂಜನ, ದುರ್ಗಾಕುಮಾರ್ ನಾಯರ್ಕೆರೆ ಅವರ ಸಾಹಿತ್ಯ ಲೋಕದ ಸವ್ಯಸಾಚಿ ಟಿ.ಜಿ. ಮುಡೂರು, ಕುಮಾರಸ್ವಾಮಿ ತೆಕ್ಕುಂಜ ಅವರ ಸುಮನಸ್ಸಿನ ಪರಿಸರ ಕವಿ ಜಿ.ಎಸ್. ಉಬರಡ್ಕ, ಚಂದ್ರಾವತಿ ಬಡ್ಡಡ್ಕ ಅವರ ಚೊಕ್ಕಾಡಿಯ ಸಿರಿ ಪಾರಿಜಾತ ಸುಬ್ರಾಯ ಚೊಕ್ಕಾಡಿ, ರಾಮಚಂದ್ರ ಪಲ್ಲತ್ತಡ್ಕ ಅವರ ಪರಿಸರ ಕವಿ ಕುತ್ಯಾಳ ನಾಗಪ್ಪ ಗೌಡ (ಕಿರಣ), ಸ್ಮಿತಾ ಅಮೃತರಾಜ್ ಸಂಪಾಜೆ ಅವರ ಬಹುಮುಖ ಪ್ರತಿಭೆಯ ವಿಶಿಷ್ಟ ಚಿಂತಕ ಡಾ. ಪ್ರಭಾಕರ ಶಿಶಿಲ, ಲೀಲಾ ದಾಮೋದರ ಅವರ ಜೀವನ್ಮುಖಿ ಅಮ್ಮ ಎಂ.ಜಿ. ಕಾವೇರಮ್ಮ ಹಾಗೂ ಯಶ್ವಿತ್ ಕಾಳಮ್ಮನೆ ಅವರ ಹಳಬರ ಜೋಳಿಗೆಯ ಜಯಮ್ಮ ಚೆಟ್ಟಿಮಾಡ, ಲಾತಾಶ್ರೀ ಸುಪ್ರೀತ್ ಮೊಂಟಡ್ಕ ಅವರ ವೈದ್ಯಕೀಯ ಕ್ಷೇತ್ರದ ಮೇರು ಸಾಧಕ: ಡಾ| ಕೆ.ವಿ. ಚಿದಾನಂದ, ತೇಜಸ್ವಿ ಕಡಪಳ ಅವರ ತೂಗು ಸೇತುವೆಗಳ ಸರದಾರ: ಗಿರೀಶ್ ಭಾರಧ್ವಾಜ್, ಚಂದ್ರಮತಿ ಕೆ. ಅವರ ಸಾಹಿತ್ಯದ ಸಾರಥಿ: ಶ್ರೀಮತಿ ಮೀನಾಕ್ಷಿ ಗೌಡ ಎಂ. ಕೃತಿಗಳು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರ ಡಾ| ಕೆ.ವಿ. ಚಿದಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಪೇರಾಲು ಅವರನ್ನು ಕಸಾಪ ಸದಸ್ಯರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಮೀನಾಕ್ಷಿ ಗೌಡ, ಹಿರಿಯ ಸಾಹಿತಿ ಜಯಮ್ಮ ಚೆಟ್ಟಿಮಾಡ, ಡಾ. ಪ್ರಭಾಕರ ಶಿಶಿಲ, ಕುತ್ಯಾಳ ನಾಗಪ್ಪ ಗೌಡ, ಕೋಶಾಧಿಕಾರಿ ದಯಾನಂದ ಅಳ್ವ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಪೂರ್ವಾಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ವಂದಿಸಿ, ಗೌರವ ಕಾರ್ಯದರ್ಶಿ ಚಂದ್ರಮತಿ ಕೆ. ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading