ಕರಾವಳಿ ನಗರ ಪ್ರಾಧಿಕಾರಗಳ ಒಕ್ಕೂಟದ ಮನವಿಗೆ ಸರ್ಕಾರದ ಸ್ಪಂದನೆ | 25 ಸೆಂಟ್ಸ್ ವರೆಗೆ ವಿನ್ಯಾಸ ಅನುಮೋದನೆ, 9/11 ಹಾಗೂ ಖಾತಾ ಅನುಮೋದನೆಗೆ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ

ಕರಾವಳಿ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿಯನ್ನು ಪರಿಗಣಿಸಿ ಪ್ರತ್ಯೇಕ ವಲಯ ನಿಯಮಾವಳಿ ರೂಪಿಸುವಂತೆ ಕರಾವಳಿ ನಗರ ಪ್ರಾಧಿಕಾರಗಳ ಒಕ್ಕೂಟ ಸಲ್ಲಿಸಿದ್ದ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿರುವುದು ಸಂತಸ ತಂದಿದೆ ಎಂದು ಒಕ್ಕೂಟದ ಸಂಚಾಲಕ ಹಾಗೂ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾ ತಿಳಿಸಿದ್ದಾರೆ.

. . . . . . . . .

ಸುಳ್ಯದ ನ.ಪಂ.ನ ಪ್ರಾಧಿಕಾರದ ಕಚೇರಿಯಲ್ಲಿ ಸೆ. 25ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿ ರಾಜ್ಯದ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿದೆ. ಕರಾವಳಿ ಪ್ರದೇಶಗಳಲ್ಲಿ ಸಣ್ಣ ವಿಸ್ತೀರ್ಣದ ತುಂಡು ಭೂಮಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ತೋಡು, ನದಿ, ಸಮುದ್ರ ಫೋರಂಬೊಕು, ಕಾಡು, ಗುಡ್ಡ, ಬೆಟ್ಟ ಹಾಗೂ ಅರಣ್ಯ ಪ್ರದೇಶಗಳು ಹೆಚ್ಚಾಗಿವೆ. ಕೆಲವೆಡೆ ಒಂದು ಸೆಂಟ್ನಿಂದಲೇ ಭೂಮಿಗಳು ಆರಂಭವಾಗುತ್ತವೆ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ವಲಯ ನಿಯಮಾವಳಿ ಅಗತ್ಯವಿದೆ ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು ಎಂದರು.

. . . . . . .

ನಿಯಮಾವಳಿ ಜಾರಿಗೆ ಬರುವ ಮುನ್ನ ಗ್ರಾಮಾಂತರ ಪ್ರದೇಶಗಳಲ್ಲಿ ಸಣ್ಣ ವಿಸ್ತೀರ್ಣದ ನಿವೇಶನಗಳಿಗೆ 9/11, ವಿನ್ಯಾಸ ಅನುಮೋದನೆ ಹಾಗೂ ಕಟ್ಟಡ ನಿರ್ಮಾಣ ಪರವಾನಗಿ ಪಡೆಯಲು ಹಲವು ತೊಂದರೆಗಳಿದ್ದವು. 25 ಸೆಂಟ್ಸ್ವರೆಗೆ ಬಹು-ನಿವೇಶನ ಅನುಮೋದನೆ ಸಂದರ್ಭದಲ್ಲಿ ಪಾರ್ಕ್ ಮತ್ತು ಪಾರ್ಕಿಂಗ್ಗಾಗಿ ಜಾಗ ಮೀಸಲಿಡುವ ನಿಯಮದಿಂದಲೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜಾಗವನ್ನು ಬಿಟ್ಟುಕೊಡುವ ಬದಲು ದಂಡ ವಿಧಿಸಿ ಅನುಮೋದನೆ ನೀಡಬೇಕು ಹಾಗೂ ಹಿಂದಿನಂತೆ ಗ್ರಾಮ ಪಂಚಾಯಿತಿಗಳಿಗೆ ಅನುಮೋದನೆ ನೀಡುವ ಅಧಿಕಾರ ಕಲ್ಪಿಸಬೇಕು ಎಂದು ಒಕ್ಕೂಟದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.

ಒಕ್ಕೂಟ ರಚನೆಯಾದ ಬಳಿಕ ಸಾರ್ವಜನಿಕರಿಗೆ ಎದುರಾಗುತ್ತಿರುವ ಅನಾನುಕೂಲಗಳು ಹಾಗೂ ಅಧಿಕಾರಿಗಳು ಎದುರಿಸುತ್ತಿರುವ ಕಾನೂನು ತೊಡಕುಗಳ ಕುರಿತು ಸರ್ಕಾರಕ್ಕೆ ಕಾಲಕಾಲಕ್ಕೆ ಮಾಹಿತಿ ನೀಡಲಾಗಿತ್ತು. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಲಾಗಿತ್ತು ಎಂದರು.

ಇದೀಗ ಸರ್ಕಾರ 25 ಸೆಂಟ್ಸ್ (1000 ಚ.ಮೀ.) ವರೆಗಿನ ವಿನ್ಯಾಸ ಅನುಮೋದನೆ, 9/11 ಹಾಗೂ ಖಾತಾ ಅನುಮೋದನೆಗೆ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಪ್ರತ್ಯಾಯೋಜಿಸಿರುವುದು ಜನರಿಗೆ ಅನುಕೂಲವಾಗಲಿದೆ ಎಂದು ಕೆ.ಎಂ. ಮುಸ್ತಫಾ ಹೇಳಿದರು.

ಖಾಸಗಿ ರಸ್ತೆ ಹಾಗೂ ಸರ್ಕಾರಿ ಸಂಪರ್ಕ ರಸ್ತೆಗಳ ಕುರಿತ ಸಮಸ್ಯೆಗಳಿಗೆ ಈಗಾಗಲೇ ಸರ್ಕಾರ ಪರಿಹಾರ ಕಲ್ಪಿಸಿದ್ದು, ಈ ಕುರಿತು ರಾಜ್ಯ ಪತ್ರದಲ್ಲಿಯೂ ಅಧಿಸೂಚನೆ ಪ್ರಕಟವಾಗಿದೆ. ಕಟ್ ಕನ್ವರ್ಷನ್ ಕುರಿತ ನಿಯಮಗಳ ಸರಳೀಕರಣದ ಸುತ್ತೋಲೆ ಸಾರ್ವಜನಿಕ ಆಕ್ಷೇಪಣೆ ಹಂತದಲ್ಲಿದ್ದು, ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ. ಅಲ್ಲದೆ ಕರಾವಳಿ ಜಿಲ್ಲೆಗಳನ್ನು ಹಿಲ್ ಏರಿಯಾ ಎಂದು ಪರಿಗಣಿಸಿರುವುದರಿಂದ ಕನಿಷ್ಠ 3.65 ಮೀಟರ್ (ಸುಮಾರು 12 ಅಡಿ) ರಸ್ತೆ ಅಗಲದ ನಿಯಮದ ಪ್ರಯೋಜನ ಕರಾವಳಿ ಜಿಲ್ಲೆಗಳಿಗೂ ವಿಸ್ತರಿಸಲಿದೆ ಎಂದು ಅವರು ತಿಳಿಸಿದರು.

ಸರ್ಕಾರದ ಈ ಕ್ರಮದಿಂದ ಸಾರ್ವಜನಿಕರಿಗೆ ದಾಖಲೆಗಳನ್ನು ಸರಿಪಡಿಸಿಕೊಳ್ಳಲು, ಮನೆ ನಿರ್ಮಾಣಕ್ಕೆ ಅನುಮೋದನೆ ಪಡೆಯಲು, 9/11 ಹಾಗೂ ಖಾತೆ ಪಡೆಯಲು ಹೆಚ್ಚಿನ ಅನುಕೂಲವಾಗಲಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ನಿಯಮಗಳನ್ನು ಸರಳೀಕರಣಗೊಳಿಸಿರುವ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಕರಾವಳಿ ನಗರ ಪ್ರಾಧಿಕಾರಗಳ ಒಕ್ಕೂಟದ ಪರವಾಗಿ ಕೆ.ಎಂ. ಮುಸ್ತಫಾ ಕೃತಜ್ಞತೆ ಹಾಗೂ ಅಭಿನಂದನೆ ಸಲ್ಲಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading