ಅ.9ರಿಂದ 11ರವರೆಗೆ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ‘ಸಂಕಲ್ಪ ಮಕ್ಕಳ ಹಬ್ಬ–2026’ ; 10ರಿಂದ 12 ಸಾವಿರ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ; ತಾರಾಲಯ, ರೋಬೋಟ್ ಶೋ ವಿಶೇಷ ಆಕರ್ಷಣೆ

ಸುಳ್ಯ: ರಂಗಮಯೂರಿ ಕಲಾಶಾಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ‘ವಿಕಸಿತ ಭಾರತದ ಕಡೆ ಮಕ್ಕಳ ನಡೆ’ ಎಂಬ ಧ್ಯೇಯದೊಂದಿಗೆ ಪ್ರಪ್ರಥಮ ಬಾರಿಗೆ ‘ಸಂಕಲ್ಪ ಮಕ್ಕಳ ಹಬ್ಬ–2026’ ಅ.9ರಿಂದ 11ರವರೆಗೆ ಮೂರು ದಿನಗಳ ಕಾಲ ಸುಳ್ಯದ ಅಮರ ಶ್ರೀಭಾಗ್‌ನ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ ಎಂದು ರಂಗಮಯೂರಿ ಕಲಾಶಾಲೆಯ ಸಂಚಾಲಕ ಲೋಕೇಶ್ ಊರುಬೈಲ್ ತಿಳಿಸಿದ್ದಾರೆ.
ಸುಳ್ಯ ಪತ್ರಿಕಾಭವನದಲ್ಲಿ ಸೆ.25ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಯ ತಾಲೂಕು ಹಾಗೂ ಗಡಿಭಾಗದ ಗ್ರಾಮಗಳ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಅವರ ಪ್ರತಿಭೆಗಳಿಗೆ ಮುಕ್ತ ಅವಕಾಶ ಕಲ್ಪಿಸುವ ಉದ್ದೇಶದಿಂದ ಮಕ್ಕಳ ಹಬ್ಬ ಆಯೋಜಿಸಲಾಗಿದೆ ಎಂದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಿಂದ ಗುಣಮಟ್ಟದ ವಿಚಾರ ಸಂಕಿರಣ, ಮಾರ್ಗದರ್ಶನ ಕಾರ್ಯಕ್ರಮಗಳು ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ. ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಹಾಗೂ ಸಾಹಿತ್ಯ ಸ್ಪರ್ಧೆಗಳು, ವೇದಿಕೆ ಪ್ರದರ್ಶನಗಳು ಮತ್ತು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

. . . . . . . . .

ಹಲವು ವೈವಿಧ್ಯಮಯ ಕಾರ್ಯಕ್ರಮಗಳು
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಮನೆಗೊಂದು ಗಿಡ’ ಅಭಿಯಾನ, ಆರೋಗ್ಯಕರ ಆಹಾರ ಮೇಳ, ಪುಸ್ತಕ ಮೇಳ, ಹೂ ಹಾಗೂ ಹಣ್ಣಿನ ಗಿಡಗಳ ಮಾರಾಟ ಮಳಿಗೆ, ಆರೋಗ್ಯ ತಪಾಸಣಾ ಶಿಬಿರ, ಮಕ್ಕಳ ಆಧಾರ್ ತಿದ್ದುಪಡಿ ಹಾಗೂ ನೋಂದಣಿ ವ್ಯವಸ್ಥೆ, ಉಳಿತಾಯದ ಕುರಿತು ಬ್ಯಾಂಕಿಂಗ್ ಸೇವಾ ಮಾಹಿತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಮಾವು, ಹಲಸು ಹಾಗೂ ಅನನಾಸು ಹಣ್ಣಿನ ಹೋಳಿಗೆ ತಯಾರಿಸುವ ಪ್ರಾತ್ಯಕ್ಷಿಕೆಯೂ ಇರಲಿದೆ. ಪೋಷಕರಿಗಾಗಿ ‘ಮಾತೃ ಸಂಗಮ’ ಎಂಬ ವಿನೂತನ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

. . . . . . .

ತಾರಾಲಯ, ರೋಬೋಟ್ ಶೋ ವಿಶೇಷ ಆಕರ್ಷಣೆ
ಮಕ್ಕಳ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಆಧುನಿಕ ತಾರಾಲಯ ಪ್ರದರ್ಶನ, ಕೃತಕ ಬುದ್ಧಿಮತ್ತೆ ಆಧಾರಿತ ಯಾಂತ್ರಿಕ ಮಾನವ ಹಾಗೂ ಶ್ವಾನದ ಚಟುವಟಿಕೆಗಳು ಮತ್ತು ವರ್ಚುವಲ್ ರಿಯಾಲಿಟಿ ಶೋ ಇರಲಿದೆ. ಮಕ್ಕಳಿಗೆ ರಿಯಾಯಿತಿ ದರದಲ್ಲಿ ತಾರಾಲಯ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಇದರೊಂದಿಗೆ ಪಾರಂಪರಿಕ ವಸ್ತುಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಕೂಡ ನಡೆಯಲಿದೆ.

ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಸ್ಪರ್ಧೆಗಳು
ಮೂರು ದಿನಗಳ ಕಾರ್ಯಕ್ರಮದಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ವಿವಿಧ ವಿಭಾಗಗಳಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯ ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವದಲ್ಲಿಯೂ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮೂರು ದಿನಗಳ ಮಕ್ಕಳ ಹಬ್ಬದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಅಂದಾಜು 10ರಿಂದ 12 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಲೋಕೇಶ್ ಊರುಬೈಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಣವ ಸೌಹಾರ್ದ ಸಹಕಾರಿ ಸಂಘದ ಸಿಇಒ ರಂಜಿತ್ ಅಡ್ತಲೆ, ನವರಾಜ್ ಕಿರ್ಲಾಯ, ವೀರಪ್ಪ ಗೌಡ ಕಣ್ಕಲ್, ಶಿವಪ್ರಸಾದ್ ಆಲೆಟ್ಟಿ ಹಾಗೂ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading