ಮೂತ್ರ ಕೋಶದ ಸೋಂಕು: ಕಾರಣಗಳು ಮತ್ತು ಚಿಕಿತ್ಸೆ

   ಮೂತ್ರ ಕೋಶದ ಸೋಂಕು ಒಂದು ಮುಜುಗರ ತರುವ ಸಾಮಾನ್ಯ ಖಾಯಿಲೆಯಾಗಿದ್ದು, ಸರಿಸುಮಾರು 10 ಮಿಲಿಯನ್ ಮಂದಿ ಭಾರತ ದೇಶವೊಂದರಲ್ಲಿಯೇ ವಾರ್ಷಿಕವಾಗಿ ಬಳಲುತ್ತಾರೆ.  ವಿಶ್ವದಾದ್ಯಂತ ಸುಮಾರು 150 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ಮೂತ್ರಕೋಶದ ಸೋಂಕಿನಿಂದ ಬಳಲುತ್ತಾರೆ. ಮೂತ್ರಕೋಶದ ಸೋಂಕು ಎನ್ನುವುದು ಮೂತ್ರನಾಳ, ಮೂತ್ರ ಚೀಲ ಮತ್ತು ಮೂತ್ರಪಿಂಡದ ಭಾಗಗಳನ್ನು ಕಾಡುತ್ತದೆ. ಹೆಚ್ಚಾಗಿ ಮೂತ್ರಕೋಶದ ಸೋಂಕು ಮೂತ್ರನಾಳ ಮತ್ತು ಮೂತ್ರಚೀಲವನ್ನು ಕಾಡುತ್ತದೆ. ಮೂತ್ರಪಿಂಡದ ಸೋಂಕು ಬಹಳ ವಿರಳವಾಗಿರುತ್ತದೆ ಮತ್ತು  ಮೂತ್ರ ಪಿಂಡದ ಸೋಂಕು  ಹೆಚ್ಚು ತೀವ್ರ  ಸ್ವರೂಪದ್ದಾಗಿರುತ್ತದೆ. ಮಹಿಳೆಯರಲ್ಲಿ  ಹೆಚ್ಚು ಕಾಡುವ  ಈ ಕಾಯಿಲೆ  ಪುರುಷರಲ್ಲಿ ವಿರಳವಾಗಿರುತ್ತದೆ. ಮೂತ್ರಚೀಲದ ಸೋಂಕಿರುವವರಲ್ಲಿ ಹೆಚ್ಚು ಸೊಂಟದ ಭಾಗದಲ್ಲಿ ನೋವು, ಪದೇ ಪದೇ ಮೂತ್ರ ವಿಸರ್ಜಿಸಬೇಕೆಂಬ ತುಡಿತ, ಮೂತ್ರ ವಿಸರ್ಜಿಸುವಾಗ ನೋವು ಮತ್ತು  ರಕ್ತದೊಂದಿಗೆ ಇರುತ್ತದೆ. ಮೂತ್ರ  ಪಿಂಡದ ಸೋಂಕು ಇರುವವರಲ್ಲಿ ಬೆನ್ನುನೋವು, ವಾಂತಿ, ವಾಕರಿಕೆ, ಜ್ವರ ಹೆಚ್ಚು ಕಂಡುಬರುತ್ತದೆ. ಮೂತ್ರನಾಳದ ಸೋಂಕು ಇರುವವರಲ್ಲಿ ಮೂತ್ರ ವಿಸರ್ಜಿಸುವಾಗ ನೋವು ಮತ್ತು ಅಸಹನೀಯ ಉರಿಯೂತ ಇರುತ್ತದೆ. ಒಟ್ಟಿನಲ್ಲಿ ಎಲ್ಲ ಮೂರು ರೀತಿಯ ಸೋಂಕು, ಆಂಟಿಬಯೋಟಿಕ್ ಔಷಧಿಗೆ  ಚೆನ್ನಾಗಿ ಸ್ಪಂದಿಸುತ್ತದೆ. ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಮೂತ್ರಕೋಶದ  ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ವಯಸ್ಕರಲ್ಲಿ ಮತ್ತು ಮಧುಮೇಹಿ ರೋಗಿಗಳಲ್ಲಿ  ವಿಶೇಷ  ಮುತುವರ್ಜಿ ಮತ್ತು ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇರುತ್ತದೆ.

ಯಾಕಾಗಿ ಬರುತ್ತದೆ?
ಮೂತ್ರಕೋಶದ ಸೋಂಕು ಎನ್ನುವುದು ಹೆಚ್ಚಾಗಿ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಆದರೆ ಫಂಗಸ್ ಮತ್ತು ವೈರಾಣುಗಳಿಂದಲೂ ಸೋಂಕು ಬರುವ ಸಾಧ್ಯತೆ ಇರುತ್ತದೆ. ಇಕೊಲೈ ಎಂಬ ಬ್ಯಾಕ್ಟೀರಿಯಾ ಹೆಚ್ಚಾಗಿ ಮೂತ್ರಕೋಶದ ಸೋಂಕಿಗೆ ಕಾರಣವಾಗುತ್ತದೆ. ಕಾರಣಾಂತರಗಳಿಂದ ಮೂತ್ರ ವಿಸರ್ಜನೆಗೆ ತಡೆಯಿಂದಾಗಿ ಮೂತ್ರ, ಮೂತ್ರಚೀಲದಲ್ಲಿ ಜಾಸ್ತಿ ಶೇಖರಣೆಯಾದಲ್ಲಿ ಮೂತ್ರಕೋಶದ ಸೋಂಕು ಸಾಧÀ್ಯತೆ ಹೆಚ್ಚಾಗಿರುತ್ತದೆ. ಮಲಗಿದಲ್ಲಿಯೇ ಇರುವ ರೋಗಿಗಳು ಮತ್ತು ದೀರ್ಘಕಾಲದ ಸರ್ಜರಿ ಬಳಿಕ ಈ ಸಾಧ್ಯತೆ ಜಾಸ್ತಿ ಇರುತ್ತದೆ. ಸರಾಗವಾಗಿ ಮೂತ್ರ ಚಲನೆ ಮತ್ತು ಮೂತ್ರ ವಿಸರ್ಜನೆ ಅಡ್ಡಿಪಡಿಸುವ ಖಾಯಿಲೆಗಳು, ಕಿಡ್ನಿ ಕಲ್ಲುಗಳು, ದೊಡ್ಡದಾದ ಪ್ರೊಸ್ಪೇಟ್ ಗ್ರಂಥಿಗಳು ಅಥವಾ ಇನ್ನಾವುದೇ ಗಡ್ಡೆಗಳು ಬೆಳೆದಿದ್ದಲ್ಲಿ ಮೂತ್ರಕೋಶದ ಸೋಂಕು ಜಾಸ್ತಿಯಾಗುವ ಸಾಧÀ್ಯತೆ ಇರುತ್ತದೆ. ಮಧುಮೇಹ ರೋಗಿಗಳು, ವೃದ್ಧರು, ಗರ್ಭಿಣಿಯರು, ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆಯುವವರಲ್ಲಿಯೂ ಮೂತ್ರಕೋಶದ ಸೋಂಕು ಜಾಸ್ತಿ ಉಂಟಾಗುವ ಸಾಧ್ಯತೆ ಇರುತ್ತದೆ.
ಮೂತ್ರಕೋಶದ ಸೋಂಕಿನ ಲಕ್ಷಣಗಳು
ಮೇಲ್ಭಾಗದ ಮೂತ್ರಕೋಶದ ಸೋಂಕು ಮತ್ತು ಕೆಳಭಾಗದ ಮೂತ್ರಕೋಶದ ಸೋಂಕು ಎಂದು ಎರಡು ವಿಧಗಳಿದ್ದು, ಮೇಲ್ಬಾಗದ ಮೂತ್ರÀಕೋಶದ ಸೋಂಕು ಕಿಡ್ನಿ (ಮೂತ್ರಪಿಂಡ) ಯನ್ನು ಬಾಧಿಸುತ್ತದೆ. ಕೆಳಭಾಗದ ಸೋಂಕು ಮೂತ್ರ ಚೀಲ ಮತ್ತು ಮೂತ್ರನಾಳಗಳನ್ನು ಬಾಧಿಸುತ್ತದೆ.
ಕೆಳಭಾಗದ ಮೂತ್ರಕೋಶದ ಸೋಂಕಿನ ಲಕ್ಷಣಗಳು

. . . . . . . . .
  1. ಮೂತ್ರ ವಿಸರ್ಜಿಸುವಾಗ ಉರಿಯೂತ ಮತ್ತು ತುರಿಕೆ
  2. ಪದೇಪದೇ ಮೂತ್ರ ವಿಸರ್ಜಿಸಬೇಕೆನ್ನುವ ತುಡಿತ ಇರುತ್ತದೆ, ಆದರೆ ಮೂತ್ರ ವಿಸರ್ಜನೆ ಆಗುವುದಿಲ್ಲ.
  3. ಮೂತ್ರದಲ್ಲಿ ರಕ್ತ ಒಸರಬಹುದು. ಮೂತ್ರದ ಬಣ್ಣ ಕಂದಾಗಿರುತ್ತದೆ. ಕೆಲವೊಮ್ಮೆ ಚಹಾದ ಬಣ್ಣ ಅಥವಾ ಕೋಲಾ ದ್ರಾವಣದ ಬಣ್ಣದಂತೆ ಕಂಡುಬರುತ್ತದೆ.
  4. ಅಸಹನೀಯವಾದ ವಾಸನಾಯುಕ್ತ ಮೂತ್ರ ಇರುತ್ತದೆ.
  5. ಮಹಿಳೆಯರಲ್ಲಿ ಸೊಂಟದ ಭಾಗದಲ್ಲಿ ನೋವು ಮತ್ತು ಪುರುಷರಲ್ಲಿ ಗುದದ್ವಾರದ ಬಳಿ ನೋವು ಕಂಡು ಬರುತ್ತದೆ.
    ಮೇಲ್ಬಾಗದ ಮೂತ್ರಕೋಶದ ಸೋಂಕಿನ ಲಕ್ಷಣಗಳು
    ಇದು ಬಹಳ ಅಪಾಯಕಾರಿಯಾದ ಸೋಂಕು ಆಗಿರುತ್ತದೆ. ಕಿಡ್ನಿಗಳಿಂದ ರಕ್ತಕ್ಕೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ.
  6. ಚಳಿ, ಜ್ವರ ಮತ್ತು ನಡುಕ ಇರುತ್ತದೆ.
  7. ವಾಂತಿ ವಾಕರಿಕೆ ಕೂಡಾ ಇರುತ್ತದೆ.
  8. ಹೊಟ್ಟೆಯ ತಳ ಭಾಗದಲ್ಲಿ ಎರಡೂ ಬದಿಗಳಲ್ಲಿ ಹಿಂಬದಿಯ ಬೆನ್ನಿನ ಕೆಳಭಾಗದಲ್ಲಿ ನೋವು ಮತ್ತು ಯಾತನೆ ಇರುತ್ತದೆ.
  9. ಆಲಸ್ಯ, ಕೆಲಸದಲ್ಲಿ ನಿರಾಸಕ್ತಿ, ಅಜೀರ್ಣ, ಹಸಿವಿಲ್ಲದಿರುವುದು ಕಂಡುಬರುತ್ತದೆ.

ಪತ್ತೆ ಹಚ್ಚುವುದು ಹೇಗೆ?

. . . . . . .
  ಮೂತ್ರಕೋಶದ ಸೋಂಕು ಬಹಳ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಅತ್ಯಾಧುನಿಕ ಪರೀಕ್ಷೆಗಳ ಅಗತ್ಯ ಇರುವುದಿಲ್ಲ. ಯೂರಿನ್ ಅನಾಲಿಸಿಸ್ ಎಂಬ ಪರೀಕ್ಷೆ  ಮುಖಾಂತರ ಮೂತ್ರದ ಸಾಂದ್ರತೆ, ಬಣ್ಣ, ಅದರಲ್ಲಿರುವ  ರಕ್ತಕಣಗಳ  ಸಂಖ್ಯೆ, ಸತ್ತು ಹೋದ ಜೀವಕೋಶಗಳ ಸಂಖ್ಯೆ ಮತ್ತು ಪ್ರೋಟಿನ್ ಪತ್ತೆ ಮಾಡಿ ಯಾಕಾಗಿ  ಬಂದಿದೆ ಮತ್ತು ಮೂತ್ರಕೋಶದ ಸೋಂಕಿನ ತೀವ್ರತೆಯನ್ನು ಪತ್ತೆ ಹಚ್ಚಲಾಗುತ್ತದೆ. ಇದರ  ಜೊತೆಗೆ ರಕ್ತ ಪರೀಕ್ಷೆ ಮಾಡಿ ಬಿಳಿ ರಕ್ತಕಣ, ಕೆಂಪು ರಕ್ತಕಣ, ಪ್ಲೆಟ್‍ಲೆಟ್ ಸಂಖ್ಯೆಯನ್ನು ಪತ್ತೆಹಚ್ಚುತ್ತಾರೆ. ರಕ್ತದಲ್ಲಿನ ಯೂರಿಯಾ, ನೈಟ್ರೋಜಿನ್, ಕ್ರಿಯಾಟಿನಿನ್ ಸಾಂದ್ರತೆಯನ್ನು ತಿಳಿಯುತ್ತಾರೆ. ಮೂತ್ರದಲ್ಲಿರುವ  ವಿವಿಧ  ರಾಸಾಯನಿಕಗಳನ್ನು ಪತ್ತೆ ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ‘ಯೂರಿನ್ ಕಲ್ಚರ್’ ಎಂಬ ಪರೀಕ್ಷೆ ಮಾಡಿ ಯಾಕಾಗಿ ಮತ್ತು ಯಾವುದರಿಂದಾಗಿ ಮೂತ್ರ ಕೋಶದ ಸೋಂಕು ಉಂಟಾಗಿದೆ ಎಂದು ತಿಳಿಯಲಾಗುತ್ತದೆ. ಅಗತ್ಯವಿದ್ದಲ್ಲಿ ಕಿಡ್ನಿಯ ಸ್ಕ್ಯಾನ್ ಮಾಡಲಾಗುತ್ತದೆ

ಚಿಕಿತ್ಸೆ ಹೇಗೆ?
ಸಾಮಾನ್ಯವಾಗಿ ಮೂತ್ರಕೋಶದ ಸೋಂಕು ಆಂಟಿಬಯೋಟಿಕ್ ಔಷಧಿಗೆ ಚೆನ್ನಾಗಿ ಸ್ಪಂದಿಸುತ್ತದೆ. ಪಂಗಲ್ ಸೋಂಕು ಇದ್ದಲ್ಲಿ ಆಂಟಿಫಂಗಲ್ ಔಷಧಿ ಮತ್ತು ವೈರಾಣು ಸೋಂಕು ಇದ್ದಲ್ಲಿ ಆಂಟಿ ವೈರಾಣು ಔಷಧಿ ನೀಡಿ ರೋಗವನ್ನು ನಿಯಂತ್ರಿಸಲಾಗುತ್ತದೆ. ಒಳರೋಗಿಯಾಗಿ ದಾಖಲು ಮಾಡಿ ಸಾಕಷ್ಟು ನೀರು, ದ್ರಾವಣ ಮತ್ತು ಇತರ ಔಷಧಿ ನೀಡಿ ರೋಗಿಯನ್ನು ಚೇತರಿಸುವಂತೆ ಮಾಡಲಾಗುತ್ತದೆ. ರೋಗದ ತೀವ್ರತೆ ಮತ್ತು ಕಾರಣಗಳ ಮೇಲೆ ಚಿಕಿತ್ಸೆ ಅವಲಂಬಿತವಾಗಿರುತ್ತದೆ.
ತಡೆಗಟ್ಟುವುದು ಹೇಗೆ?
1) ದಿನವೊಂದಕ್ಕೆ 6 ರಿಂದ 8 ಗ್ಲಾಸ್ ನೀರು ಸೇವಿಸಬೇಕು. ಜಾಸ್ತಿ ನೀರು ಸೇವಿಸುವುದರಿಂದ ದೇಹದಲ್ಲಿನ ಮೂತ್ರದ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಾಧ್ಯವಾಗುತ್ತದೆ. ಮತ್ತು ಕಿಡ್ನಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
2) ಮೂತ್ರವನ್ನು ತಡೆಹಿಡಿಯಲೇ ಬಾರದು. ಮೂತ್ರ ಮಾಡಬೇಕೆಂದೆನಿಸಿದಾಗ ತಕ್ಷಣವೇ ಮೂತ್ರ ವಿಸರ್ಜಿಸಬೇಕು. ಮೂತ್ರವನ್ನು ತಡೆಹಿಡಿಯುವುದರಿಂದ ಬ್ಯಾಕ್ಟೀರಿಯಾಗಳು ಮೂತ್ರದಲ್ಲಿ ವಿಜೃಂಭಿಸಲು ಆರಂಭಿಸುತ್ತದೆ.
3) ವಿಟಮಿನ್ ‘ಸಿ’ ಇರುವ ಹಣ್ಣು ಹಂಪಲು ಸೇವಿಸಬೇಕು.
4) ಮೂತ್ರನಾಳದ ಸ್ವಚ್ಛತೆಯ ಕಡೆಗೆ ಹಚ್ಚು ಆದ್ಯತೆ ನೀಡಬೇಕು. ಜನನಾಂಗವನ್ನು ದಿನಕ್ಕೆರಡು ಬಾರಿ ಸರಿಯಾಗಿ ಶುಚಿಗೊಳಿಸಬೇಕು.
5) ಮಹಿಳೆಯರಲ್ಲಿ ಮೂತ್ರ ಚೀಲ ಹಾಗೂ ಮೂತ್ರನಾಳದ ಉರಿಯೂತ ಮತ್ತು ಸೋಂಕು ಹೆಚ್ಚು ಕಂಡು ಬರುತ್ತದೆ. ಗರ್ಭನಿರೋಧಕಗಳನ್ನು ಅಳವಡಿಸುವಾಗ ಮತ್ತು ಋತು ಚಕ್ರದ ಅವಧಿಯಲ್ಲಿ ಜನನಾಂಗದ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಮಹಿಳೆಯರಲ್ಲಿ ಪುರುಷರಿಗಿಂತ 8 ಪಟ್ಟು ಹೆಚ್ಚು ಮೂತ್ರನಾಳದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.
6) ದೇಹದ ರಕ್ಷಣಾ ವ್ಯವಸ್ಥೆ ಹಾನಿಗೊಳಗಾದ ಮಧುಮೇಹಿಗಳ ಮತ್ತು ಸ್ಟೀರಾಯ್ಡು ಸೇವಿಸುವವರು, ಕಿಮೋಥೆರಪಿ ಔಷಧಿ ಸೇವಿಸುವವರು ಅತ್ಯಂತ ಹೆಚ್ಚು ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಇರುತ್ತದೆ.
ಕೊನೆಮಾತು
ಮೂತ್ರಕೋಶದ ಸೋಂಕು ಎನ್ನುವುದು ಮಾರಣಾಂತಿಕ ಖಾಯಿಲೆ ಅಲ್ಲದಿದ್ದರೂ ನಿರ್ಲಕ್ಷ್ಯ ವಹಿಸಲೇ ಬಾರದು. ಇದೊಂದು ತುರ್ತು ಚಿಕಿತ್ಸೆಯ ಅಗತ್ಯವಿಲ್ಲದ ರೋಗವಾಗಿದ್ದರೂ ಗರ್ಭಿಣಿ ಸ್ತ್ರೀಯರು, ವಯಸ್ಕರು, ಮಧುಮೇಹ ರೋಗಿಗಳು, ಕಿಡ್ನಿ ತೊಂದರೆ ಇರುವ ರೋಗಿಗಳು ಅಥವಾ ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟ ರೋಗಿಗಳು ಮೂತ್ರಕೋಶದ ಸೋಂಕು ಉಂಟಾದಾಗ ತಕ್ಷಣವೇ ವೈದ್ಯರ ಸಲಹೆ ಪಡೆಯತಕ್ಕದ್ದು. ಹನಿಮೂನ್ ಸಿಸ್ಟೈಟಿಸ್ ಎನ್ನುವುದು ಒಂದು ವಿಶೇಷ ರೀತಿಯ ಮೂತ್ರಕೋಶದ ಸೋಂಕು ರೋಗವಾಗಿದ್ದು, ನವದಂಪತಿಗಳಲ್ಲಿ ಹನಿಮೂನ್ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮಹಿಳೆ ಮತ್ತು ಪುರುಷರಲ್ಲಿ ದೈಹಿಕ ಸಂಪರ್ಕವಾದ ಬಳಿಕ ಈ ರೀತಿ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಜನನಾಂಗಗಳ ಸ್ವಚ್ಛತೆಗೆ ಹೆಚ್ಚಿನ ಗಮನಕೊಟ್ಟಲ್ಲಿ ಈ ರೀತಿಯ ಮುಜುಗರ ತಪ್ಪಿಸಬಹುದು. ಇದರ ಜೊತೆಗೆ ಪ್ರತಿದಿನ ಹೆಚ್ಚು ಹೆಚ್ಚು ದ್ರವಾಹಾರ ಮತ್ತು ನೀರು ಸೇವಿಸುವುದರಿಂದ ಮೂತ್ರಕೋಶದ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ಕ್ರಾನ್‍ಬೆರ್ರಿ ಜ್ಯೂಸ್‍ನಲ್ಲಿರುವ ಒಂದು ವಸ್ತು ಇಕೊಲೈ ಬ್ಯಾಕ್ಟೀರಿಯಾ ಮೂತ್ರಚೀಲದ ಗೋಡೆಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತಾರೆ ಮತ್ತು ಮೂತ್ರಕೋಶದ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ ಎಂದೂ ತಿಳಿದುಬಂದಿದೆ. ದೈಹಿಕ ಸಂಪರ್ಕ ಮಾಡುವ ಮೊದಲು ಪತಿ-ಪತ್ನಿ ಅಥವಾ ಮಹಿಳೆ ಮತ್ತು ಪುರುಷರು ಜನನಾಂಗವನ್ನು ಚೆನ್ನಾಗಿ ಶುಚಿಗೊಳಿಸುವುದರಿಂದಲೂ ಮೂತ್ರಕೋಶದ ಸೋಂಕನ್ನು ತಡೆಯಬಹುದು ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.

ಡಾ| ಮುರಲೀ ಮೋಹನ ಚೂಂತಾರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading