ವಿಧಿವಿಜ್ಞಾನ ದಂತಶಾಸ್ತ್ರ(ಫೊರೆನ್ಸಿಕ್ ಡೆಂಟಿಸ್ಟ್ರಿ) – ಡಾ.ಮುರಲೀ ಮೋಹನ್ ಚೂಂತಾರು

ಫೊರೆನ್ಸಿಕ್ ದಂತಶಾಸ್ತ್ರ ಅಥವಾ ಡೆಂಟಿಸ್ಟ್ರಿ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ದಂತಶಾಸ್ತದ ಒಂದು ಅಂಗವಾಗಿದೆ. ದಂತ ವೈದ್ಯಕೀಯ ಶಾಸ್ತ್ರ ಎನ್ನುವುದು ಬರೀ ದಂತ ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ದಿನೇದಿನೇ ದಂತವೈದ್ಯಕೀಯ ಶಾಸ್ತ್ರ ಬೆಳೆಯುತ್ತಲೇ ಇದೆ. ಈ ಹಿಂದೆ ಬರೀ ಹಲ್ಲು ಕೀಳುವುದು ಮತ್ತು ಹಲ್ಲು ತುಂಬಿಸುವುದಕ್ಕಷ್ಟೇ ಸೀಮಿತವಾಗಿದ್ದ ದಂತವೈದ್ಯಕೀಯ ಶಾಸ್ತ್ರ ಈಗ ಬಹಳ ವೇಗವಾಗಿ ಬೆಳೆಯುತ್ತಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯುತ್ತಿದ್ದಂತೆ ತನ್ನ ಸಾಮ್ರಾಜ್ಯವನ್ನು ಎಲ್ಲೆಡೆ ವಿಸ್ತರಿಸುತ್ತಲೇ ಇದೆ. ಇದಕ್ಕೆ ಇತ್ತೀಚಿನ ದಶಕಗಳಲ್ಲಿ ಸೇರ್ಪಡೆಯಾದ ಹೊಸದಾದ ವಿಭಾಗ ಎಂದರೆ ವಿಧಿವಿಜ್ಞಾನ ದಂತಶಾಸ್ತ್ರ ಅಥವಾ ಫೊರೆನ್ಸಿಕ್ ಡೆಂಟಿಸ್ಟ್ರಿ. ಈ ಹಿಂದೆ ರೋಗಗಳ ಪತ್ತೆಗೆ ಮತ್ತು ದಂತ ರೋಗಗಳ ಚಿಕಿತ್ಸೆಗೆ ಸೀಮಿತವಾಗಿದ್ದ ದಂತ ವೈದ್ಯಕೀಯ ಶಾಸ್ತ್ರ ಈಗ ಕ್ರಿಮಿನಲ್ ಆರೋಪಿಗಳ ಪತ್ತೆಗೆ, ಮೃತಪಟ್ಟ ವ್ಯಕ್ತಿಯನ್ನು ಗುರುತಿಸುವಿಕೆ, ಮೃತಪಟ್ಟ ವ್ಯಕ್ತಿಯ ವಯಸ್ಸು ಮತ್ತು ಲಿಂಗಪತ್ತೆ ಹೀಗೆ ಹತ್ತು ಹಲವು ದಿಶೆಗಳಲ್ಲಿ ತನ್ನ ವಿಸ್ತಾರವನ್ನು ಹರಡುತ್ತಿದೆ. 

. . . . . . . . .

ಹೇಗೆ ಬಳಸಲಾಗುತ್ತದೆ ಮತ್ತು ಎಲ್ಲಿ ಬಳಸಲಾಗುತ್ತದೆ..? ಪ್ರತಿಯೊಬ್ಬ ವ್ಯಕ್ತಿಯ ಹಲ್ಲಿನ ರಚನೆ, ಗಾತ್ರ ಮತ್ತು ಬಣ್ಣ ಇನ್ನೊಬ್ಬರ ಹಲ್ಲಿಗಿಂತ ವಿಭಿನ್ನವಾಗಿರುತ್ತದೆ. ಒಬ್ಬರ ಹಲ್ಲಿನಂತೆ ಇನ್ನೊಬ್ಬರ ಹಲ್ಲು ಇರುವುದಿಲ್ಲ. ಅದೇ ರೀತಿ ವ್ಯಕ್ತಿಯ ದವಡೆಯೂ ಕೂಡಾ ವಿಭಿನ್ನವಾಗಿರುತ್ತದೆ ಮತ್ತು ವಿಶಿಷ್ಟವಾದ ಆಕಾರ ಹೊಂದಿರುತ್ತದೆ. ಹಲ್ಲಿನ ದವಡೆಗಳ ಆಕೃತಿ, ಗಾತ್ರ ಮತ್ತು ರಚನೆಯಿಂದ ವ್ಯಕ್ತಿಯ ಲಿಂಗವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. 

. . . . . . .

ಕ್ರಿಮಿನಲ್ ವ್ಯಾಜ್ಯ ಮತ್ತು ದಂತ ಸಾಕ್ಷ್ಯಗಳ ನಿರ್ವಹಣೆಯಲ್ಲಿ ಹಲ್ಲು ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಅತ್ಯಾಚಾರ, ಕೊಲೆ ಮುಂತಾದ ಸಂದರ್ಭಗಳಲ್ಲಿ ಆರೋಪಿಯ ಹಲ್ಲಿನ ಅಚ್ಚು, ಹಲ್ಲಿನಿಂದ ಆದ ಗಾಯಗಳ ಪರೀಕ್ಷೆಯನ್ನ ತಾಳೆ ಹಾಕಿ, ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಬೇರೆ ಯಾವುದೇ ಸಾಕ್ಷ್ಯ ದೊರಕದೇ ಇದ್ದಾಗ, ಸಂತ್ರಸ್ತ ವ್ಯಕ್ತಿ ಅಥವಾ ಮಹಿಳೆಯ ದೇಹದ ಮೇಲಿನ ಹಲ್ಲಿನ ಗಾಯದ ಗುರುತನ್ನು ಪತ್ತೆ ಹಚ್ಚಿ ಆರೋಪಿಯ ಹಲ್ಲಿನ ಅಚ್ಚಿನ ಜೊತೆ ತಾಳೆ ಹಾಕಿ, ಆರೋಪಿಯನ್ನ ಗುರುತಿಸಲಾಗುತ್ತದೆ. ಹಲವು ವರುಷಗಳ ಹಿಂದೆ ಡೆಲ್ಲಿಯ ನಿರ್ಭಯಾ ಹತ್ಯೆ ಮತ್ತು ಅತ್ಯಾಚಾರದ ಕೇಸಿನಲ್ಲಿ ಆರೋಪಿಯ ಹಲ್ಲಿನ ಅಚ್ಚಿನ ಗುರುತಿನಿಂದಲೇ ಆರೋಪಿಯನ್ನು ಗುರುತಿಸಲಾಗಿತ್ತು.

ಸುಟ್ಟಗಾಯಗಳು ಅಥವಾ ಅಪಘಾತಗಳಿಂದ ಸುಟ್ಟುಹೋದ ವ್ಯಕ್ತಿಗಳನ್ನು ಗುರುತಿಸುವಲ್ಲಿ ಹಲ್ಲು ಬಹು ಮುಖ್ಯ ಭೂಮಿಕೆ ವಹಿಸುತ್ತೆ. ಸತ್ತ ವ್ಯಕ್ತಿಯ ಹಲ್ಲಿನ ಚಿಕಿತ್ಸಾ ದಾಖಲೆಗಳಿಂದ ಹಲ್ಲಿನ ಬಗೆಗಿನ ಮಾಹಿತಿ ಪಡೆದು, ಅಪರಿಚಿತ ವ್ಯಕ್ತಿಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಮೃತ ವ್ಯಕ್ತಿ ಬಾಯಿಯೊಳಗಿನ ಹಲ್ಲಿನ ಕ್ರೌನ್, ಹಲ್ಲಿನ ಸಿಮೆಂಟ್‌ಗಳ ಮಾಹಿತಿ ಪಡೆದು ಮೃತವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗುತ್ತದೆ. 

ಬೆಂಕಿ ಆಕಸ್ಮಿಕಗಳಿಂದ ಸುಟ್ಟು ಕರಕಲಾದ ವ್ಯಕ್ತಿಗಳ ವಯಸ್ಸು, ಲಿಂಗ ಮತ್ತು ಜನಾಂಗ ಹಾಗೂ ಚಹರೆ ಪತ್ತೆಹಚ್ಚಲು ಹಲ್ಲಿನ ದಾಖಲೆಗಳಿಂದ ಸಾಧ್ಯವಿದೆ. ಅದೇ ರೀತಿ ವ್ಯಕ್ತಿಯ ದವಡೆಗಳ ಗಾತ್ರ ಮತ್ತು ರಚನೆಯಿಂದಲೂ ವ್ಯಕ್ತಿಯ ಲಿಂಗ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ವ್ಯಕ್ತಿಯ ಜೀನ್ ಪತ್ತೆ ಹಚ್ಚಲು ಹಲ್ಲು ಬಹಳ ಉಪಯುಕ್ತ. ಹಲ್ಲು ಬಹಳ ಶಕ್ತಿಶಾಲಿಯಾದ ಅಂಗವಾಗಿರುತ್ತದೆ. ಬೆಂಕಿಗಾಯದಿಂದಲೂ ಹಲ್ಲು ಹಾಳಾಗುವುದಿಲ್ಲ. ಹಲ್ಲಿನ ಒಳಭಾಗದಲ್ಲಿನ ಆಕರಕೋಶಗಳ ಸಹಾಯದಿಂದ ವ್ಯಕ್ತಿಯ ಡಿ ಎನ್ ಎ ಪತ್ತೆಹಚ್ಚಲು ಸಾಧ್ಯವಿದೆ.

ವಯಸ್ಸಿನ ಅಂದಾಜು: ಹಲ್ಲುಗಳ ಸಂಖ್ಯೆ, ರಚನೆ ಮತ್ತು ಬೆಳವಣಿ ಗೆಯನ್ನು ನೋಡಿ ಜೀವಂತ ಅಥವಾ ಮೃತ ವ್ಯಕ್ತಿಯ ಅಂದಾಜು ವಯಸ್ಸನ್ನು ಪತ್ತೆ ಹಚ್ಚಲು ಸಾಧ್ಯವಿದೆ.  ಕಡಿತದ ಗುರುತುಗಳು: ಅಪರಾಧ ಸ್ಥಳದಲ್ಲಿ ಸಂತ್ರಸ್ತ ವ್ಯಕ್ತಿಗಳ ದೇಹದಲ್ಲಿನ ಹಲ್ಲಿನ ಕಡಿತದ ಗುರುತನ್ನು ತಾಳೆಹಾಕಿ ಅಪರಾಧಿಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

ಕೊನೆಮಾತು : ದೇಹದ ಇತರ ಎಲ್ಲಾ ಅಂಗಾಂಗಗಳಿಗೆ ಹೋಲಿಸಿದ್ದಲ್ಲಿ ಹಲ್ಲು ನಮ್ಮ ದೇಹದ ಅತ್ಯಂತ ಶಕ್ತಿಶಾಲಿ ಅಂಗವಾಗಿರುತ್ತದೆ. ಅಪಾರವಾದ ಉಷ್ಣತೆ, ಬೆಂಕಿಗೂ ಬಗ್ಗದ ಹಲ್ಲು ಹೆಚ್ಚಿನ ಸಂದರ್ಭಗಳಲ್ಲಿ ಸಾಂದರ್ಭಿಕ ಸಾಕ್ಷ್ಯ ನೀಡಲು ಸದಾ ಸಿದ್ಧವಿರುತ್ತದೆ. ಪ್ರತಿ ವ್ಯಕ್ತಿಯ ಬಾಯಿಯೊಳಗೆ ಹಲ್ಲು ತನ್ನ ಆಕಾರ, ಆಕೃತಿ, ಗಾತ್ರ ಮತ್ತು ಬಣ್ಣಗಳಲ್ಲಿ ತನ್ನದೇ ಆದ ನೈಜತೆಯನ್ನು ಹೊಂದಿರುತ್ತದೆ ಮತ್ತು ಇತರರಿಗಿಂತ ಭಿನ್ನವಾಗಿರುತ್ತದೆ. ಅದೇ ರೀತಿ ವ್ಯಕ್ತಿಯ ಬಾಯಿಯೊಳಗೆ ಹಲ್ಲಿನಲ್ಲಿ ತುಂಬಿಸಿದ ಸಿಮೆಂಟ್ ಅಥವಾ ಹಲ್ಲಿನ ಕ್ರೌನ್‌ಗಳು ಕೂಡಾ ಅಗತ್ಯ ಬಿದ್ದಾಗ ದಂತ ದಾಖಲೆಗಳ ಮುಖಾಂತರ ಸಾಕ್ಷ್ಯ ನುಡಿಯುತ್ತದೆ. ಈ ಹಿನ್ನೆಲೆಯಲ್ಲಿ ಹಲ್ಲು ಜೀವವಿರುವಾಗ ಹೇಗೆ ಅಗತ್ಯವೋ ಹಾಗೆ ಜೀವ ಹೋದ ಬಳಿಕವೂ ಅಗತ್ಯಬಿದ್ದಲ್ಲಿ ಸಾಕ್ಷ್ಯ ನುಡಿಯಲು ಮತ್ತು ಅಪರಾಧ ಪತ್ತೆ ಹಚ್ಚಲು ಅತೀ ಅಗತ್ಯ. ಅದೇನೆ ಇರಲಿ ನಮ್ಮ ಹಲ್ಲುಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಲ್ಲಿ, ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. 

ಡಾ.ಮುರಲೀ ಮೋಹನ ಚೂಂತಾರು
BDS,MDS,DNB,
MBA,MOSRCSEd
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಮಂಗಳೂರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading