ಸುಬ್ರಹ್ಮಣ್ಯ : ಮಳೆ ಅಬ್ಬರಕ್ಕೆ 60 ವರ್ಷಗಳ ಹಳೆ ಮನೆಯ ಗೋಡೆ ಕುಸಿತ ; ಆತಂಕದಲ್ಲಿ ಬಡ ಕುಟುಂಬ

ತೀವ್ರ ಮಳೆಯಿಂದಾಗಿ ಸುಮಾರು 60 ವರ್ಷಗಳಷ್ಟು ಹಳೆ ಮನೆಯ ಗೋಡೆ ಕುಸಿದು, ಮನೆ ಹಾನಿಗೊಳಗಾದ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಬಿಲಾದ್ವಾರದಲ್ಲಿ ಆಗಸ್ಟ್ 07ರ ರಾತ್ರಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮನೆಯ ಒಂದು ಭಾಗ ಕುಸಿದಿರುವುದರಿಂದ ಕುಟುಂಬದ ವಾಸಕ್ಕೂ ಆತಂಕ ಎದುರಾಗಿದೆ.

. . . . . . . . .

ಎಸ್‌.ಸಿ ಸಮುದಾಯಕ್ಕೆ ಸೇರಿದ ಈ ಕುಟುಂಬವು ಸುಮಾರು ಆರು ದಶಕಗಳಿಂದ ಇದೇ ಪ್ರದೇಶದಲ್ಲಿ ವಾಸಿಸುತ್ತಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಕುಟುಂಬದ ಯಜಮಾನನ ನಿಧನದ ಬಳಿಕ, ಕ್ಯಾನ್ಸರ್ ಕಾಯಿಲೆಯಿಂದ ಒಬ್ಬ ಮಗನನ್ನೂ ಕಳೆದುಕೊಂಡಿರುವ ಕುಟುಂಬದಲ್ಲಿ ಸದ್ಯ ತಾಯಿ ಹಾಗೂ ಮಗಳು ಮಾತ್ರ ವಾಸಿಸುತ್ತಿದ್ದಾರೆ. ಮಗಳಿಗೂ ಆರೋಗ್ಯ ಸಮಸ್ಯೆ ಇದ್ದು, ತಾಯಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಮಗಳ ಆರೈಕೆಯ ಜತೆಗೆ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

. . . . . . .

ತೀವ್ರ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರಿಗೆ ತೀವ್ರ ಆತಂಕ ಉಂಟಾಗಿದೆ. ಸದ್ಯ ಮನೆ ಮತ್ತಷ್ಟು ಹಾನಿಗೊಳಗಾಗುವ ಸಾಧ್ಯತೆ ಇರುವುದರಿಂದ ಕುಟುಂಬದ ಸುರಕ್ಷತೆಯ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಹಿಂದೆಯೂ ಮನವಿ – ಸ್ಪಂದನೆ ಸಿಗಲಿಲ್ಲ ಎಂಬ ಆರೋಪ : ಇದೇ ಮನೆಯಲ್ಲಿ ಈ ಹಿಂದೆ ಮಳೆ ಹಾನಿ ಸಂಭವಿಸಿದ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಯ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಪಿಡಿಒ ಅವರ ಗಮನಕ್ಕೆ ತಂದಿದ್ದರೂ, ತಮ್ಮ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಮತ್ತೆ ನೆರವಿಗೆ ಬಂದ ಸಮಾಜ ಸೇವಕ : ಕಳೆದ ಬಾರಿ ಮನೆ ಹಾನಿಗೊಳಗಾದ ಸಂದರ್ಭದಲ್ಲಿ ಸಮಾಜ ಸೇವಕ ರವಿ ಕಕ್ಕೆಪದವು ಅವರು ನೆರವಿಗೆ ಧಾವಿಸಿ ಮನೆಯ ದುರಸ್ತಿ ಕಾರ್ಯ ಮಾಡಿಕೊಟ್ಟಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಬಾರಿಯೂ ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಅವರು, ಕುಸಿದು ಬಿದ್ದ ಗೋಡೆಯ ಅವಶೇಷಗಳನ್ನು ತೆರವುಗೊಳಿಸಲು ನೆರವಾಗಿದ್ದಾರೆ.

ಚುನಾವಣೆಯಲ್ಲಿ ಮತ, ಸಂಕಷ್ಟದಲ್ಲಿ ನೆರವು ಯಾವಾಗ? : ಚುನಾವಣೆ ಸಂದರ್ಭದಲ್ಲಿ ಮತಯಾಚನೆಗಾಗಿ ಮನೆಮನೆಗೆ ತೆರಳುವ ಜನಪ್ರತಿನಿಧಿಗಳು, ಸಂಕಷ್ಟದ ಸಂದರ್ಭದಲ್ಲಿ ಕೂಡ ಇಂತಹ ಕುಟುಂಬಗಳ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸುವ ಅಗತ್ಯವಿದೆ ಎಂಬ ಮಾತು ಸ್ಥಳೀಯರಿಂದ ಕೇಳಿಬಂದಿದೆ.

ಪ್ರಕೃತಿ ವಿಕೋಪದಿಂದ ಮನೆ ಹಾನಿಗೊಳಗಾದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದ ನಿಯಮಗಳಡಿ ದೊರೆಯಬಹುದಾದ ಪರಿಹಾರ ಹಾಗೂ ಅಗತ್ಯ ನೆರವು ತಲುಪಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕುಟುಂಬದ ಸುರಕ್ಷತೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಗಳು ಮತ್ತು ಕುಟುಂಬದ ಜವಾಬ್ದಾರಿ ಹೊತ್ತಿರುವ ತಾಯಿಗೆ ಇದೀಗ ಮನೆಯ ಸುರಕ್ಷತೆಯೂ ಪ್ರಶ್ನೆಯಾಗಿದೆ. ಮತ್ತೊಂದು ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಟುಂಬಕ್ಕೆ ಅಗತ್ಯ ನೆರವು ಒದಗಿಸಬೇಕಿದೆ ಎಂಬುದು ಸ್ಥಳೀಯರ ಆಶಯ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading