ಅಮರ ಸುದ್ದಿ ವಿಶೇಷ ವರದಿ ; ಗುತ್ತಿಗಾರು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ವಿನೂತನ ಕಾರ್ಯಕ್ರಮ ; ಸ್ವಾವಲಂಬಿ ಮಹಿಳೆಯರಿಗೆ ಸ್ಫೂರ್ತಿ ತುಂಬಿದ “ಸಂಜೀವಿನಿ ಮಾಸಿಕ ಸಂತೆ”

ಬರಹ : ಉಲ್ಲಾಸ್ ಕಜ್ಜೋಡಿ
ಗ್ರಾಮೀಣ ಪ್ರದೇಶಗಳಲ್ಲಿ “ಸಂತೆ ಮಾರುಕಟ್ಟೆ” ಎನ್ನುವುದು ತುಂಬಾ ಪ್ರಸಿದ್ಧ. ವಾರದಲ್ಲಿ ಒಂದು ದಿವಸ ಅಥವಾ ಕೆಲವು ಕಡೆಗಳಲ್ಲಿ ವಾರಪೂರ್ತಿ ನಡೆಯುವಂತಹ ಈ ಸಂತೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ತರಕಾರಿಗಳು, ವಿವಿಧ ರೀತಿಯ ಹಣ್ಣುಗಳು, ಬಟ್ಟೆಗಳು, ಬೇಳೆ-ಕಾಳುಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದಂತಹ ಎಲ್ಲಾ ರೀತಿಯ ವಸ್ತುಗಳು ಒಂದೇ ಸ್ಥಳದಲ್ಲಿ ಸಿಗುತ್ತವೆ. ಈ ಸಂತೆ ಮಾರುಕಟ್ಟೆಯನ್ನೇ ಉದಾಹರಣೆಯಾಗಿ ತೆಗೆದುಕೊಂಡು ಗುತ್ತಿಗಾರಿನ ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ ಹಾಗೂ ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಂಯುಕ್ತ ಆಶ್ರಯದೊಂದಿಗೆ ಏ.04 ಶನಿವಾರದಂದು “ಸಂಜೀವಿನಿ ಮಾಸಿಕ ಸಂತೆ” ಎನ್ನುವಂತಹ ವಿನೂತನವಾದ ಕಾರ್ಯಕ್ರಮವನ್ನು ಗುತ್ತಿಗಾರಿನಲ್ಲಿ ನಡೆಸಿದ್ದು, ಇಲ್ಲಿ ಗುತ್ತಿಗಾರು ಸಂಜೀವಿನಿ ಒಕ್ಕೂಟದ ಪುಣ್ಯೋದಯ, ಹಸಿರು, ಸಿದ್ಧಿದಾತ್ರಿ, ನಾಗಶ್ರೀ, ಪುಣ್ಯ, ದೀಪ, ಸ್ವರ್ಣ, ಸ್ವಸ್ತಿಕ್, ಚಿಗುರು, ಶಿವ ಶಕ್ತಿ, ಸ್ತ್ರೀ ಶಕ್ತಿ, ಶ್ರೀನಿಧಿ, ಸ್ತ್ರೀ ಶಕ್ತಿ, ಭಾಗ್ಯಲಕ್ಷ್ಮೀ, ಬ್ರಾಹ್ಮರಿ, ಇಂಚರ ಹಾಗೂ ವನಧನ ವಿಕಾಸ ಕೇಂದ್ರ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚಿನ ಸ್ವ-ಸಹಾಯ ಸಂಘದ ಮಹಿಳೆಯರು ತಾವು ಮನೆಯಲ್ಲಿಯೇ ತಯಾರಿಸಿದ ಪೊರಕೆ, ತುಪ್ಪ, ಜೇನುತುಪ್ಪ, ಬುಟ್ಟಿ, ಗೆರಟೆ ಸೌಟು, ವಿವಿಧ ಬಗೆಯ ಉಪ್ಪಿನಕಾಯಿಗಳು, ತರಕಾರಿಗಳು, ಗೆಡ್ಡೆ-ಗೆಣಸು, ಅಲಂಕಾರಿಕ ವಸ್ತುಗಳು, ಮಲ್ಲಿಗೆ, ಹೂವಿನ ಗಿಡಗಳು, ಹಣ್ಣಿನ ರಸ, ಜ್ಯೂಸ್, ತಿಂಡಿ-ತಿನಿಸುಗಳು, ವಿವಿಧ ಬಗೆಯ ಹಣ್ಣುಗಳು, ಹೊಲಿದ ಬಟ್ಟೆ, ಕಸೂತಿ ವಸ್ತುಗಳು, ಮೊಟ್ಟೆ ಕೋಳಿ, ಕೆತ್ತೆಹುಳಿ, ಹುಳಿ ಪುಡಿ, ಆರ್ಗ್ಯಾನಿಕ್ ಸ್ಯಾನಿಟರಿ ಪ್ಯಾಡ್, ತೆಂಗಿನಕಾಯಿ, ಮಂತ್‌ಪುಳಿ ನೀರು, ಮಜ್ಜಿಗೆ, ವೀಳ್ಯದೆಲೆ, ವಿ.ಡಿ.ವಿ.ಕೆ ಉತ್ಪನ್ನಗಳು ಸೇರಿದಂತೆ ಹಲವಾರು ರೀತಿಯ ಗೃಹೋಪಯೋಗಿ ಹಾಗೂ ಆಹಾರೋತ್ಪನ್ನಗಳನ್ನು ಮಾರಾಟ ಮಾಡಿ ಸುಮಾರು 20 ಸಾವಿರ ರೂಪಾಯಿಗೂ ಅಧಿಕ ವ್ಯಾಪಾರ ನಡೆಸಿದರು. 

ಗುತ್ತಿಗಾರು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಹಕಾರದೊಂದಿಗೆ ಮಹಿಳೆಯರು ಸ್ವಾವಲಂಬನೆಯ ಬದುಕಿನೆಡೆಗೆ ಹೆಜ್ಜೆ ಹಾಕಲು ಅವಕಾಶ ಕಲ್ಪಿಸಿದ ಈ ಕಾರ್ಯಕ್ರಮವನ್ನು ಒಕ್ಕೂಟದ ಉಪಾಧ್ಯಕ್ಷರಾದ ಶಿಶಿಮಾ ಜಾಕೆ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷರಾದ ಶಿವರಾಮ ಕರುವಾಜೆ ದೀಪ ಬೆಳಗಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅಜಿತ್ ಹಾಗೂ ಆಡಳಿತಾಧಿಕಾರಿಗಳಾದ ದೇವರಾಜ್ ಮುತ್ಲಾಜೆ ಈ ವಿನೂತನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾ ರಾಜೇಶ್, ಬ್ಲಾಕ್ ಮ್ಯಾನೇಜರ್ ಮೇರಿ, ವಲಯ ಮೇಲ್ವಿಚಾರಕರಾದ ಅವಿನಾಶ್, ಬಿ.ಆರ್.ಪಿ ವಿಜಯಲಕ್ಷ್ಮಿ, ಕೃಷಿ ವಲಯ ಮೇಲ್ವಿಚಾರಕರಾದ ಹೃತಿಕ್, ಕೌಶಲ್ಯ ಉದ್ಯಮ ಮೇಲ್ವಿಚಾರಕರಾದ ರೂಪ ಹಾಗೂ ಎಂ.ಬಿ.ಕೆ, ಎಲ್.ಸಿ.ಆರ್.ಪಿ, ಪಶುಸಖಿ, ಕೃಷಿ ಸಖಿ, ಎಫ್.ಎಲ್.ಸಿ.ಆರ್.ಪಿ, ಒಕ್ಕೂಟದ ಪದಾಧಿಕಾರಿಗಳು, ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರಾದ ಅಭಿಲಾಷಾ ಮೋಟ್ನೂರು ನಿರೂಪಿಸಿದರು.
ಇನ್ನು ಈ ಮಾಸಿಕ ಸಂತೆ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆ ಎಂಬಂತೆ ಜನಮೆಚ್ಚುಗೆ ಪಡೆದದ್ದೆಂದರೆ ಅದು ‘ಕ್ಯಾಶ್ಯೂ ಆಪಲ್ ಜ್ಯೂಸ್’ ಅಥವಾ ‘ಗೇರು ಹಣ್ಣಿನ ಜ್ಯೂಸ್.’ ಹೌದು, ದೇಶದ ಹಲವು ಕಡೆಗಳಲ್ಲಿ ಇದೀಗ ಗೇರು ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿದ್ದು, ದೇಶದಾದ್ಯಂತ ಗಮನ ಸೆಳೆಯುತ್ತಿರುವಂತಹ ಈ ಗೇರು ಮೌಲ್ಯವರ್ಧಿತ ಉತ್ಪನ್ನಗಳತ್ತ ಗ್ರಾಮೀಣ ಭಾಗದಲ್ಲೂ ಹೆಜ್ಜೆ ಇಡಬೇಕು, ಗ್ರಾಮೀಣ ಪ್ರದೇಶಗಳಲ್ಲಿಯೂ ಇಂತಹ ಉತ್ಪನ್ನಗಳು ತಯಾರಾಗಬೇಕು ಎನ್ನುವ ಸದುದ್ದೇಶದಿಂದ ಈ ಮಾಸಿಕ ಸಂತೆಯಲ್ಲಿ ಇರಿಸಿದ ಈ ‘ಕ್ಯಾಶ್ಯೂ ಆಪಲ್ ಜ್ಯೂಸ್’ ಗ್ರಾಹಕರ ಮೆಚ್ಚುಗೆಯನ್ನು ಪಡೆದದ್ದಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಈ ಗೇರು ಹಣ್ಣಿನ ಜ್ಯೂಸ್ ಅನ್ನು ಒಂದು ಉದ್ಯಮವನ್ನಾಗಿ ನಡೆಸಬಹುದು ಎನ್ನುವ ನಂಬಿಕೆಯೊಂದಿಗೆ ಪ್ರೋತ್ಸಾಹವೂ ದೊರಕಿತು.
ಅಂತಿಮವಾಗಿ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಮಹಿಳೆಯರು ತಾವು ಮನೆಯಲ್ಲಿಯೇ ಗೃಹೋಪಯೋಗಿ ವಸ್ತುಗಳನ್ನು ಅಥವಾ ಆಹಾರೋತ್ಪನ್ನಗಳನ್ನು ತಯಾರಿಸಿ ತಮ್ಮೂರಿನಲ್ಲೇ ಮಾರಾಟ ಮಾಡಿ ಸ್ವಾವಲಂಬನೆಯ ಬದುಕಿನೆಡೆಗೆ ಹೆಜ್ಜೆ ಇರಿಸಬೇಕು ಎನ್ನುವ ಸದುದ್ದೇಶದೊಂದಿಗೆ ನಡೆದಂತಹ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದ್ದು, ಈ ರೀತಿಯ ಕಾರ್ಯಕ್ರಮಗಳಿಗೆ ಗ್ರಾಮೀಣ ಪ್ರದೇಶಗಳ ಪ್ರತೀ ಗ್ರಾಮಗಳಲ್ಲಿಯೂ ಕೂಡ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕಿದರೆ ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಇದೊಂದು ಉತ್ತಮ ವೇದಿಕೆ ಆಗುವುದರೊಂದಿಗೆ “ಲೋಕಲ್ ಫಾರ್ ವೋಕಲ್” ಎನ್ನುವಂತೆ ಪ್ರತೀ ಊರಿನ ಜನರಿಗೂ ಕೂಡ ತಮ್ಮೂರಿನಲ್ಲೇ ಬೆಳೆದಂತಹ ಆರೋಗ್ಯಕರ ಆಹಾರೋತ್ಪನ್ನಗಳನ್ನು ಕಡಿಮೆ ದರದಲ್ಲಿ ಖರೀದಿಸಿ ಸೇವಿಸುವ ಅವಕಾಶ ದೊರೆಯುತ್ತದೆ.

ವಿನೂತನವಾದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾಸಿಕ ಸಂತೆಯಲ್ಲಿ ವಸ್ತುಗಳನ್ನು ಖರೀದಿಸಿದವರ ಅಭಿಪ್ರಾಯಗಳು ಇಲ್ಲಿವೆ
“ಊರಿನಲ್ಲಿ ಬೆಳೆದಂತಹ ಆಹಾರ ಪದಾರ್ಥಗಳನ್ನು ಹಾಗೂ ತರಕಾರಿಗಳನ್ನು ಊರಿನಲ್ಲೇ ಮಾರಾಟ ಮಾಡುವ ಮುಖಾಂತರ ಅಮರ ಸಂಜೀವಿನಿ ಒಕ್ಕೂಟದ ಮಹಿಳೆಯರು ಒಳ್ಳೆಯ ಕಾರ್ಯ ಮಾಡಿದ್ದಾರೆ” : ದೇವರಾಜ್ ಮುತ್ಲಾಜೆ, ಆಡಳಿತಾಧಿಕಾರಿಗಳು, ಗುತ್ತಿಗಾರು ಗ್ರಾಮ ಪಂಚಾಯತ್

“ಗೇರು ಹಣ್ಣಿನ ಜ್ಯೂಸ್ ರುಚಿಯಾಗಿದ್ದು, ಆರೋಗ್ಯಕರವೂ ಆಗಿದೆ. ಈ ಸಂತೆಯು ಪ್ರತೀ ತಿಂಗಳು ಯಶಸ್ವಿಯಾಗಿ ನಡೆಯಲಿ, ನಮ್ಮ ಸಹಕಾರವಿದೆ” : ಅಜಿತ್, ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು

“ಅಮರ ಸಂಜೀವಿನಿ ಒಕ್ಕೂಟವು ಉತ್ತಮ ಕಾರ್ಯವನ್ನು ಮಾಡುತ್ತಾ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸ್ವಚ್ಚತಾ ಅಭಿಯಾನದಲ್ಲೂ ಯಶಸ್ವಿಯಾದ ಈ ಒಕ್ಕೂಟ ಇದೀಗ ಹೊಸತನದೊಂದಿಗೆ ಹೆಜ್ಜೆ ಇರಿಸಿದ್ದು, ಮಹಿಳೆಯರಿಗೆ ತುಂಬಾ ಉಪಯುಕ್ತವಾಗಿದೆ” : ಶಿವರಾಮ ಕರುವಾಜೆ, ವರ್ತಕರ ಸಂಘದ ಅಧ್ಯಕ್ಷರು, ಗುತ್ತಿಗಾರು

“ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸ್ವಾಭಾವಿಕವಾಗಿ ನೀರಿಲ್ಲದೇ ಬೆಳೆಯುವ ಗೇರು ಹಣ್ಣಿನ ಪಾನೀಯ ತುಂಬಾ ರುಚಿಕರವಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ವಿಷಮಯ ಪಾನೀಯಗಳಿಗಿಂತ ಇದು ಉತ್ತಮವಾಗಿದೆ” : ಡಾ. ಅನಂತಕೃಷ್ಣ ಕಾಮತ್, ಚರ್ಮರೋಗ ತಜ್ಞರು, ಗುತ್ತಿಗಾರು

“ಕೊಳೆತು ಹಾಳಾಗುವ ಹಣ್ಣಿನಿಂದ ಇಂತಹ ಪಾನೀಯ ತಯಾರಿಸಿ ಜನರಿಗೆ ಪರಿಚಯಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ, ನಮ್ಮ ಸಹಕಾರವಿದೆ, ಶುಭವಾಗಲಿ” : ಪರಮೇಶ್ವರ ಕೆಂಬಾರೆ, ಗ್ರಾಹಕರು

“ಮಹಿಳೆಯರು ಬೆಳೆದ ಆಹಾರೋತ್ಪನ್ನಗಳನ್ನು ತಾವೇ ಮಾರಾಟ ಮಾಡಿ ಹೆಚ್ಚು ಆದಾಯ ಗಳಿಸಬಹುದು ಎಂಬುದಾಗಿ ಮಹಿಳೆಯರಿಗೆ ಪ್ರೇರಣೆ ನೀಡಿದ್ದೆವು” : ಮಿತ್ರಕುಮಾರಿ ಚಿಕ್ಮುಳಿ, ಎಂ.ಬಿ.ಕೆ ಅಮರ ಸಂಜೀವಿನಿ ಒಕ್ಕೂಟ ಗುತ್ತಿಗಾರು

“ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಉತ್ಪನ್ನಗಳು ಶುದ್ಧ ಹಾಗೂ ದೇಸೀಯವಾಗಿರುವುದರಿಂದ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ” : ಅಭಿಲಾಷಾ ಮೋಟ್ನೂರು, ಗ್ರಂಥಾಲಯ ಮೇಲ್ವಿಚಾರಕರು, ಅರಿವು ಕೇಂದ್ರ ಗುತ್ತಿಗಾರು

“ಇವತ್ತಿನ ಮಾಸಿಕ ಸಂತೆಯಲ್ಲಿ ನಾನು ಪ್ರಾಯೋಗಿಕವಾಗಿ ಕ್ಯಾಶ್ಯೂ ಆಪಲ್ ಜ್ಯೂಸ್ ಅನ್ನು ಜನರಿಗೆ ಪರಿಚಯಿಸಲು ಒಂದು ವೇದಿಕೆ ದೊರಕಿತು. ಜನರಿಂದ ಉತ್ತಮ ಸ್ಪಂದನೆ ಹಾಗೂ ಪ್ರೋತ್ಸಾಹವೂ ದೊರಕಿತು. ಮುಂದಿನ ದಿನಗಳಲ್ಲಿ ಇದನ್ನು ಒಂದು ಉದ್ಯಮವನ್ನಾಗಿ ನಡೆಸಲು ನಾನು ಸಿದ್ಧಳಿದ್ದೇನೆ, ವ್ಯಾಪಾರದ ಬಗೆಗಿನ ಕೀಳರಿಮೆ ದೂರವಾಯಿತು” : ಲತಾಕುಮಾರಿ ಅಜಡ್ಕ, ಎಫ್.ಎಲ್.ಸಿ.ಆರ್.ಪಿ ಅಮರ ಸಂಜೀವಿನಿ ಒಕ್ಕೂಟ ಹಾಗೂ ಶ್ರೀನಿಧಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಸದಸ್ಯರು

“ಮೊದಲಿಗೆ ನಾನು ತಂದ ಕೋಳಿಗಳು ಮಾರಾಟ ಆಗದೇ ಇರುವಾಗ ಭಯವಾಯಿತು. ಮದ್ಯಾಹ್ನದ ಹೊತ್ತಿಗೆ ಎಲ್ಲಾ ಕೋಳಿಗಳು ಮಾರಾಟಗೊಂಡವು. ತುಂಬಾ ಸಂತೋಷವಾಯಿತು, ಮುಂದೆಯೂ ಈ ಮಾಸಿಕ ಸಂತೆಯಲ್ಲಿ ನಾವು ಭಾಗವಹಿಸುತ್ತೇವೆ” : ಪ್ರೇಮಲತಾ ಚಿಕ್ಮುಳಿ, ಇಂಚರ ಸ್ವ-ಸಹಾಯ ಸಂಘದ ಸದಸ್ಯರು

“ಇಂದಿನ ಈ ಸಂಜೀವಿನಿ ಸಂತೆ ತುಂಬಾ ಖುಷಿ ನೀಡಿತು. ಮುಂದೆಯೂ ಈ ರೀತಿಯ ಸಂತೆಗಳು ನಡೆಯಬೇಕು. ಇದರಿಂದಾಗಿ ಹೇಗೆ ವ್ಯಾಪಾರ ನಡೆಸಬೇಕು ಎನ್ನುವ ಅರಿವು ಸಿಕ್ಕಿತು” : ಮೃದುಲಾ, ಕಾರ್ಯದರ್ಶಿಗಳು, ಅಮರ ಸಂಜೀವಿನಿ ಒಕ್ಕೂಟ

“ಮಹಿಳೆಯರು ತುಂಬಾ ಸಂತೋಷದಿಂದ ವ್ಯಾಪಾರ ನಡೆಸಿದರು. ನನಗೂ ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸಲು ಸ್ಪೂರ್ತಿ ದೊರಕಿತು. ಗೇರು ಹಣ್ಣಿನ ಜ್ಯೂಸ್ ರುಚಿಯಾಗಿತ್ತು. ಇದನ್ನು ಒಂದು ಉದ್ಯಮವನ್ನಾಗಿ ನಡೆಸಬೇಕು” : ಶಿಶಿಮಾ ಜಾಕೆ, ಉಪಾಧ್ಯಕ್ಷರು, ಅಮರ ಸಂಜೀವಿನಿ ಒಕ್ಕೂಟ

“ಇವತ್ತಿನ ದಿನ ನನಗೆ ಕಡಿಮೆ ವ್ಯಾಪಾರವಾಗಿದೆ. ಆದರೆ ತಂದ ಉತ್ಪನ್ನಗಳೆಲ್ಲವೂ ಮಾರಾಟವಾಗಿವೆ. ಮನೆಯಲ್ಲಿ ಕುಳಿತಿದ್ದರೆ ಇದು ಸಾಧ್ಯವಿಲ್ಲ. ತುಂಬಾ ಅನುಭವ ದೊರಕಿತು” : ಕವಿತಾ ಪುಚ್ಚಪ್ಪಾಡಿ, ಸ್ವರ್ಣಶ್ರೀ ಸಂಘದ ಸದಸ್ಯರು, ಕಮಿಲ

“ಇಂದಿನ ಮಾಸಿಕ ಸಂತೆ ಮಹಿಳೆಯರ ಮೊಗದಲ್ಲೊಂದು ನಗು ತಂದಿತು. ವ್ಯಾಪಾರದ ಮನೋಭಾವನೆ ಬೆಳೆಯಲು ಇದು ಸ್ಫೂರ್ತಿಯಾಯಿತು. ಸಂಜೀವಿನಿ ಒಕ್ಕೂಟವು ಮಹಿಳೆಯರ ಸ್ವಾವಲಂಬನೆಗೆ ಹೆಚ್ಚಿನ ಮಹತ್ವ ನೀಡುತ್ತದೆ. ಮಹಿಳೆಯರು ಸ್ವ-ಉದ್ಯಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು. ಹೊಸ ಹೊಸ ಉದ್ಯಮಗಳನ್ನು ನಡೆಸಬೇಕು. ಈ ನಿಟ್ಟಿನಲ್ಲಿ ಕ್ಯಾಶ್ಯು ಆಪಲ್ ಜ್ಯೂಸ್ ನಮ್ಮದೊಂದು ಹೊಸ ಪ್ರಯತ್ನ. ಈ ಬಗ್ಗೆ ಮಾರ್ಗದರ್ಶನ ನೀಡಿದ ಅಡಿಕೆ ಪತ್ರಿಕೆಯ ಸಂಪಾದಕರಾದ ಶ್ರೀಪಡ್ರೆ ಅವರಿಗೆ ಕೃತಜ್ಞತೆಗಳು” : ದಿವ್ಯ ಸುಜನ್ ಗುಡ್ಡೆಮನೆ, ಕಾರ್ಯದರ್ಶಿಗಳು, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಸುಳ್ಯ

“ಇವತ್ತಿನ ಮಾಸಿಕ ಸಂತೆ ತುಂಬಾ ಸ್ಫೂರ್ತಿದಾಯಕ ಹಾಗೂ ಆಶಾದಾಯಕವಾಗಿತ್ತು. ಇನ್ನು ಮುಂದೆಯೂ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸಲು ಮತ್ತು ಮಹಿಳೆಯರು ಒಟ್ಟಾಗಿ ಸೇರಿ ವ್ಯಾಪಾರ ಮಾಡುವುದು ಖುಷಿ ತಂದಿತು” : ಪ್ರಶಾಂತಿ ನಡುಗಲ್ಲು, ನಾಗಶ್ರೀ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಪದಾಧಿಕಾರಿ

“ರಾಸಾಯನಿಕ ಮುಕ್ತ ಆಹಾರೋತ್ಪನ್ನಗಳು, ಹಣ್ಣು, ಸೊಪ್ಪು, ತರಕಾರಿ, ತಂಪು ಪಾನೀಯಗಳು ಹಾಗೂ ಕರಕುಶಲ ವಸ್ತುಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವುದೇ ಸಂಜೀವಿನಿ ಸಂತೆಯ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವುದು ಹಾಗೂ ಅವರ ವ್ಯವಹಾರ ಜ್ಞಾನವನ್ನು ಹೆಚ್ಚಿಸುವುದೂ ಪ್ರಮುಖ ಗುರಿಯಾಗಿದೆ. ಈ ಉದ್ದೇಶಗಳನ್ನು ಸಾಧಿಸುವ ದಿಶೆಯಲ್ಲಿ ಗುತ್ತಿಗಾರು ಸಂಜೀವಿನಿ ಸಂತೆ ಕೇವಲ ಒಂದೇ ದಿನದಲ್ಲಿ ಹೆಚ್ಚಿನ ಜನಮನ್ನಣೆ ಗಳಿಸಿದ್ದು, ಇದರ ಫಲವಾಗಿ ಹೆಚ್ಚಿನ ಆದಾಯವೂ ಗಳಿಸಿರುವುದು ವಿಶೇಷವಾಗಿದೆ” : ಶ್ವೇತಾ, ಸಂಜೀವಿನಿ ಎನ್.ಆರ್.ಎಲ್.ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಸುಳ್ಯ

“ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ. ಮದ್ಯಾಹ್ನದ ಹೊತ್ತಿಗೆ ಎಲ್ಲಾ ಉತ್ಪನ್ನಗಳು ಖಾಲಿಯಾಗಿದ್ದವು. ಪ್ರತೀ ತಿಂಗಳು ಈ ಸಂತೆಯನ್ನು ನಡೆಸಬೇಕು” : ಮೇರಿ, ಬ್ಲಾಕ್ ಮ್ಯಾನೇಜರ್, ತಾಲೂಕು ಸಂಜೀವಿನಿ ಒಕ್ಕೂಟ, ಸುಳ್ಯ

“ಸಂಜೀವಿನಿ ಯೋಜನೆಯ ಪರಿಕಲ್ಪನೆಯನ್ನು ಮಹಿಳೆಯರು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಉತ್ತಮ ಅವಕಾಶಗಳಿವೆ” : ಶ್ರೀದೇವಿ ಕೊಂಬೊಟ್ಟು, ಶಿಕ್ಷಕರು, ಪಿ.ಎಂ.ಶ್ರೀ ಶಾಲೆ ಗುತ್ತಿಗಾರು

ಬರಹ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading