Ad Widget

ವಿದ್ಯಾರ್ಥಿ ಎಂಬ ಶಿಲೆಯನ್ನು ಕಲೆಯಾಗಿಸುವ ಶಿಕ್ಷಕರು

ಜೀವನದಲ್ಲಿ ಯಾವುದೇ ಸಾಧನೆ ಮಾಡಲು ಬೆನ್ನ ಹಿಂದೆ ಒಂದು ಮಹತ್ತರವಾದ ಪ್ರೇರಕ ಶಕ್ತಿ ಇರಬೇಕು.ಅದರಲ್ಲೂ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ನಾವು ನಮ್ಮ ಶಿಕ್ಷಕರಿಂದ ಪಡೆಯುವ ಪ್ರೋತ್ಸಾಹ ಬೆಂಬಲ ಬದುಕಿನಲ್ಲಿ ಒಂದು ಗಟ್ಟಿ ನೆಲೆ ಪಡೆಯಲು, ಸಾಧನೆಯ ಹಾದಿಯಲ್ಲಿ ನಡೆಯಲು ಪ್ರೆರೇಪಿಸುತ್ತದೆ.

ಎಳೆಯ ವಯಸ್ಸಿನಲ್ಲಿ ಸರಿ ತಪ್ಪುಗಳ ಕಲ್ಪನೆ ಕೂಡ ಇಲ್ಲದೆ ಇರುವಾಗ ಒಬ್ಬ ಸಮರ್ಥ ಶಿಕ್ಷಕ ತನ್ನ ವಿದ್ಯಾರ್ಥಿಗಳ ಮೇಲೆ ಪರಿಣಾಮಕಾರಿಯಾದಂತಹ ಪ್ರಭಾವವನ್ನು ಬೀರುತ್ತಾನೆ.ಒರಟು ಕಲ್ಲಿನಂತೆ ಯದ್ವಾ ತದ್ವ ಬೆಳೆಯುವ ಬದುಕಿನ ರೀತಿಯನ್ನು ಸರಿ ದಾರಿಯಲ್ಲಿ ನಡೆಯುವಂತೆ ಮಾಡಿ, ಸಾರ್ಥಕ ಬದುಕನ್ನು ಬದುಕುವಂತೆ ಮಾಡುವಲ್ಲಿ ಶಿಕ್ಷಕನ ಪಾತ್ರ ಅತ್ಯಂತ ಮಹತ್ತರವಾದುದು.
ಪ್ರೀತಿ, ಮಮತೆ, ವಾತ್ಸಲ್ಯಭರಿತ ಹೃದಯವನ್ನು ಹೊಂದಿರುವ ಶಿಕ್ಷಕ ತನಗೇ ಅರಿವಿಲ್ಲದಂತೆ ತನ್ನ ವಿದ್ಯಾರ್ಥಿಗಳ ಮನದಲ್ಲಿ ನೆಲೆ ನಿಂತು ಬಿಡುತ್ತಾನೆ.

ಬಾಲ್ಯ ಎಂದರೆ ಯಾವುದೇ ಕಪ್ಪು ಚುಕ್ಕಿ ಇಲ್ಲದ ಬಿಳಿಯ ಸ್ವಚ್ಛ ಹಾಳೆಯದು. ಅಲ್ಲಿ ಶಿಕ್ಷಕನಾದವನು ಏನನ್ನು ಚಿತ್ರಿಸುತ್ತಾನೋ ಅದೇ ವರ್ಣಮಯವಾಗಿ ವಿದ್ಯಾರ್ಥಿಯ ಬದುಕಿನುದ್ದಕ್ಕೂ ಉಳಿದುಬಿಡುತ್ತದೆ.

ಬಾಲ್ಯದಲ್ಲಿ ಅಮ್ಮನೆ ಪ್ರಪಂಚವಾಗಿರುವ ಮಗುವನ್ನು,ಮತ್ತೊಂದು ಪ್ರಪಂಚಕ್ಕೆ ಕರೆದೊಯ್ದು, ಅಲ್ಲಿ ಕಲಿಕೆಯ ಜೊತೆಗೇ ಪ್ರೀತಿ ಮಮತೆಯ ತುತ್ತಿಟ್ಟು ಕಲಿಸುವ ಶಿಕ್ಷಕರು ವಿದ್ಯಾರ್ಥಿಗಳ ಮನದಲ್ಲಿ ಒಂದು ಅಮೂಲ್ಯವಾದ ಸ್ಥಾನವನ್ನು ಪಡೆದುಕೊಂಡು ಬಿಡುತ್ತಾರೆ.ಬಾಲ್ಯದಲ್ಲಿ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು. ಏಕೆಂದರೆ ಮೌಲ್ಯಗಳಿಲ್ಲದ ಬರಿಯ ಪುಸ್ತಕದ ಜ್ಞಾನವು ಅಂಕಗಳಿಗಷ್ಟೇ ಸೀಮಿತವಾಗಿಬಿಡುತ್ತದೆ.ಇಂತಹ ಮೌಲ್ಯಗಳನ್ನು ಶಿಕ್ಷಕನೇ ಸ್ವತಃ ಅಳವಡಿಸಿಕೊಂಡು,ವಿದ್ಯಾರ್ಥಿಗಳಿಗೆ ಪ್ರೇರೆಪಣೆ ನೀಡಿದಾಗ ಖಂಡಿತವಾಗಿಯೂ ಮೌಲ್ಯಗಳಿಗೊಂದು ಮೌಲ್ಯ ದಕ್ಕುತ್ತದೆ.
ಇಂತಹ ಮೌಲ್ಯಗಳನ್ನು ವಿದ್ಯಾರ್ಥಿಗಳ ಮನದಲ್ಲಿ ಬಿತ್ತುವ ಅದೆಷ್ಟೋ ಶಿಕ್ಷಕರು ಜೀವನದುದ್ದಕ್ಕೂ ತಮ್ಮ ವಿದ್ಯಾರ್ಥಿಗಳಿಂದ ನಿತ್ಯ ಪೂಜಿಸಲ್ಪಡುತ್ತಾರೆ. ಆರಾಧಿಸಲ್ಪಡುತ್ತಾರೆ.

ತಮ್ಮ ಸೇವಾ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಶಿಕ್ಷಕರು ಕಂಡು ವಿದ್ಯಾದಾನ ಮಾಡಿರುತ್ತಾರೆ. ಅವರ ಮನದಲ್ಲಿ ತಾವು ಯಾವ ಸ್ಥಾನ ಪಡೆದಿರುವೆವು ಎಂಬ ಕಲ್ಪನೆ ಆ ಶಿಕ್ಷಕರಿಗೆ ಇರದಿದ್ದರೂ ಮುಂದೊಂದು ದಿನ ತಾನು ಕಲಿಸಿದ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದು ಕಣ್ಮುಂದೆ ಬಂದು ನಿಂತಾಗ ನಿಜಕ್ಕೂ ತಮ್ಮ ವೃತ್ತಿ ಸಾರ್ಥಕವಾದಂತೆ ಭಾಸವಾಗುತ್ತದೆ.ನಿಸ್ವಾರ್ಥ ಮನಸಿನ,ನಿಜವಾದ ಶಿಕ್ಷಕ ಬಯಸುವುದು ಕೂಡ ಅದನ್ನೇ ಅಲ್ಲವೇ?

ಪ್ರಮೀಳಾ ರಾಜ್
ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ದೇವರಕಾನ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!