ಸುಬ್ರಹ್ಮಣ್ಯ: ನಾಗಾರಾಧನೆಯ ಮೂಲ ತಾಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ. 12 ರಂದು ಲಕ್ಷದೀಪೋತ್ಸವ ನೆರವೇರಲಿದೆ. ಲಕ್ಷದೀಪೋತ್ಸವದೊಂದಿಗೆ ರಥಬೀದಿಯಲ್ಲಿ ಶ್ರೀ ದೇವರ ರಥೋತ್ಸವ ಆರಂಭವಾಗಲಿದೆ. ರಾತ್ರಿ ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲೋತ್ಸವ ನೆರವೇರಲಿದೆ. ಬೆಳಗ್ಗೆ ದೈವಗಳ ಭಂಡಾರವು ದೇವರಗದ್ದೆಯ ದೈವಸ್ಥಾನದಿಂದ ಶ್ರೀ ದೇವಳಕ್ಕೆ ಆಗಮಿಸಲಿದೆ. ಸಂಜೆ ಶ್ರೀ ದೇವಳದಲ್ಲಿ ಅಂಕುರಪೂಜೆ ನಡೆದ ಬಳಿಕ ಆದಿ ಸುಬ್ರಹ್ಮಣ್ಯದಲ್ಲಿ ರಂಗಪೂಜೆ ನೆರವೇರಲಿದೆ. ಬಳಿಕ ಶ್ರೀ ದೇವರ ರಥೋತ್ಸವ ನೆರವೇರಲಿದೆ. ರಥದಲ್ಲಿ ಕಾಶಿಕಟ್ಟೆಗೆ ತೆರಳುವ ಶ್ರೀ ದೇರಿಗೆ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ಶ್ರೀ ದೇವರ ಗುರ್ಜಿಪೂಜೆ ನೆರವೇರಲಿದೆ. ರಥೋತ್ಸವದ ಸಂದರ್ಭ ಲಕ್ಷ ಹಣತೆ ಪ್ರಜ್ವಲಿಸಲಾಗುತ್ತದೆ.
ಲಕ್ಷದೀಪ ಬೆಳಗುವಿಕೆ:
ಶ್ರೀ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಕೆಲವು ಹಣತೆ ದೀಪಗಳನ್ನು ಹಚ್ಚಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಲಕ್ಷ ಹಣತೆ ದೀಪಗಳನ್ನು ಹಚ್ಚುವ ವ್ಯವಸ್ಥೆ ಮಾಡಿದೆ. ದೇವಳದ ಸಿಬ್ಬಂದಿಗಳ ಹಾಗೂ ಸಾರ್ವಜನಿಕ ಭಕ್ತರ ಸಹಕಾರದಿಂದ ಲಕ್ಷ ಹಣತೆಗಳನ್ನು ಹಚ್ಚಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಣ್ಣಿನ ಹಣತೆಯ ಲಕ್ಷ ದೀಪಗಳನ್ನು ರಥಬೀದಿಯಿಂದ ಕಾಶಿಕಟ್ಟೆ ಗಣಪತಿ ದೇವಸ್ಥಾನದ ತನಕ ಹಾಗೂ ಸವಾರಿ ಮಂಟಪದ ತನಕ, ಅಭಯ ಹನುಮಂತ ದೇವಸ್ಥಾನ, ಕುಮಾರಧಾರ ಮತ್ತು ಆದಿಸುಬ್ರಹ್ಮಣ್ಯದಲ್ಲಿ ಹಚ್ಚಲಾಗುವುದು. ಏಕ ಕಾಲದಲ್ಲಿ ಹಣತೆಯನ್ನು ಉರಿಸಲು ಸ್ಥಳಿಯ ಭಕ್ತ ವೃಂದದವರಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ವ್ಯವಸ್ಥೆ ನೋಡಿಕೊಳ್ಳಲು ಈಗಾಗಲೇ ಸಮಿತಿ ರಚಿಸಲಾಗಿದೆ. ಶ್ರೀ ಕ್ಷೇತ್ರದ ಪ್ರತಿಯೊಬ್ಬರಿಗೂ ಈ ಸೇವೆಯಲ್ಲಿ ಭಾಗವಹಿಸಲು ಶ್ರೀ ದೇವಳದಿಂದ ಅವಕಾಶ ಕಲ್ಪಿಸಿದೆ. ಶ್ರೀ ಕ್ಷೇತ್ರದ ರಥಬೀದಿ, ಸವಾರಿ ಮಂಟಪ, ಸ್ಕಂದ ವಸತಿ ಗೃಹದಿಂದ ಕಾಶಿಕಟ್ಟೆಯ ತನಕ, ರಥಬೀದಿಯಿಂದ ಸವಾರಿ ಮಂಟಪದ ತನಕ ಹಾಗೂ ಆದಿ ಸುಬ್ರಹ್ಮಣ್ಯ ಪರಿಸರದಲ್ಲಿ ಲಕ್ಷ ಹಣತೆಗಳು ಪ್ರಜ್ವಲಿಸಲಿದೆ. ಗುರ್ಜಿಪೂಜೆ:
ರಾತ್ರಿ ಮಹಾಪೂಜೆಯ ನಂತರ ಶ್ರೀ ದೇವರ ಹೊರಾಂಗಣ ಉತ್ಸವ ಆರಂಭವಾಗಲಿದ್ದು ಪ್ರಥಮವಾಗಿ ಕಾಚುಕುಜುಂಬ ದೈವ ಮತ್ತು ಮತ್ತು ಶ್ರೀ ದೇವರ ಭೇಟಿಯು ನೆರವೇರಲಿದೆ. ಬಳಿಕ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವಗಳು ನೆರವೇರಲಿದೆ. ನಂತರ ಶ್ರೀ ದೇವರು ಈ ಬಾರಿ ಪ್ರಪ್ರಥಮವಾಗಿ ರಥಬೀದಿ ಪ್ರವೇಶಿಸಿ ಚಂದ್ರಮಂಡಲ ರಥೋತ್ಸವ ನೆರವೇರಲಿದೆ. ಬಳಿಕ ಕಾಶಿಕಟ್ಟೆಯಲ್ಲಿ ಮಯೂರ ವಾಹನನಾಗಿ ಕುಕ್ಕೆ ಸುಬ್ರಹ್ಮಣ್ಯನಿಗೆ ಗುರ್ಜಿಪೂಜೆ ನಡೆಯಲಿದೆ.
ಬೀದಿ ಉರುಳು ಸೇವೆ ಆರಂಭ:
ಚಂದ್ರಮಂಡಲೋತ್ಸವದ ಬಳಿಕ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರೀಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸುತ್ತಾರೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠ ಸೇವೆಯಲ್ಲೊಂದಾದ ಬೀದಿಮಡೆಸ್ನಾನ ಸೇವೆಯನ್ನು ಸ್ವಯಂಸ್ಪೂರ್ತಿಯಿಂದ ಭಕ್ತರು ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವದ ತನಕ ನೆರವೇರಿಸುತ್ತಾರೆ.
ಶ್ವೇತವರ್ಣಮಯ ರಾಜಗೋಪುರ:
ಪ್ರಸಿದ್ಧ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸದ ಹಿನ್ನೆಲೆಯಲ್ಲಿ ಕುಕ್ಕೆಯ ರಾಜಗೋಪುರವು ಶ್ವೇತವರ್ಣದಿಂದ ಕಂಗೊಳಿಸುತ್ತಿದೆ. ರಾಜಗೋಪುರ, ಕಾಶಿಕಟ್ಟೆ ಸೇರಿದಂತೆ ಕ್ಷೇತ್ರಾದ್ಯಂತ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಸಜ್ಜುಗೊಳ್ಳುತ್ತಿದೆ. ಕುಮಾರಧಾರ, ರಾಜರಸ್ತೆ, ಆದಿಸುಬ್ರಹ್ಮಣ್ಯ, ನೂಚಿಲ, ಕುಲ್ಕುಂದ ರಸ್ತೆಗಳಲ್ಲಿ ವಿದ್ಯುತ್ ದೀಪ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯವಾಗುತ್ತಿದೆ. ಕ್ಷೇತ್ರದ ರಸ್ತೆಯ ಇಕ್ಕೆಲದಲ್ಲಿ ಕೇಸರಿ ಬಂಟಿಂಗ್ಸ್ ಗಳಿಂದ ಅಲಂಕಾರಗೊಳಿಸಲಾಗಿದೆ.