ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ನಡೆದ ನೈತಿಕ ಪೋಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಓರ್ವನನ್ನು ಬಂಧಿಸಿ, ಬಿಜೆಪಿ ಹಾಗೂ ಹಿಂದೂ ಮುಖಂಡರ ಆಗಮನದ ಬಳಿಕ ಹೈಡ್ರಾಮ ನಡೆದು ಬಿಡುಗಡೆಗೊಳಿಸಿದ ಘಟನೆ ಆ.12 ರಂದು ನಡೆದಿದೆ.
ನೈತಿಕ ಪೋಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಂತೋಡಿನ ಅರ್ಜುನ್ ಎಂಬ ಯುವಕನನ್ನು ಸುಳ್ಯ ಪೋಲೀಸರು ಬಂಧಿಸಿ,ಠಾಣೆಯಲ್ಲಿ ಕೂರಿಸಿದ್ದಾರೆಂಬ ವಿಷಯ ತಿಳಿದ ಹರೀಶ್ ಕಂಜಿಪಿಲಿ , ವಿನಯ ಕುಮಾರ್ ಕಂದಡ್ಕ ಮತ್ತು ಸಂಘಟನೆಯ ಪ್ರಮುಖರು ಠಾಣೆ ಬಳಿ ಜಮಾಯಿಸಿದ್ದರು. ತಡರಾತ್ರಿ ಪುತ್ತೂರಿನಿಂದ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಕೂಡಾ ಬಂದು ಪೋಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಎಸ್.ಐ.ಯವರು ಹರೀಶ್ ಕಂಜಿಪಿಲಿಯವರಿಂದ ಪತ್ರ ಬರೆಸಿಯಿಕೊಂಡು ಠಾಣಾ ಜಾಮೀನಿನ ಮೇಲೆ ಅರ್ಜುನ್ ಎಂಬ ಯುವಕನ್ನು ಕಂಜಿಪಿಲಿ ಜೊತೆಗೆ ಕಳುಹಿಸಿಕೊಟ್ಟರೆನ್ನಲಾಗಿದೆ.
ಘಟನೆಯ ವಿವರ.
ಸುಳ್ಯದ ಪ್ರತಿಷ್ಠಿತ ಲಾಡ್ಜ್ ಒಂದಕ್ಕೆ ಮಹಿಳೆ ಮತ್ತು ಓರ್ವ ಪುರುಷ ಬಂದು ಬಾಡಿಗೆ ಕೋಣೆ ಪಡೆದಿದ್ದರು. ಇದನ್ನು ನೋಡಿದವರು ಹಿಂದು ಪರ ಸಂಘಟನೆಗಳ ಗಮನಕ್ಕೆ ತಂದಿದ್ದರು ಎನ್ನಲಾಗಿದ್ದು ಆ ವ್ಯಕ್ತಿ ಸುಳ್ಯದಲ್ಲಿ ಮಹಿಳೆಯನ್ನು ಡ್ರಾಪ್ ಮಾಡಿ ತನ್ನ ಕೆಲಸದ ತೋಟದ ಕಡೆಗೆ ತೆರಳುತ್ತಿದ್ದರು. ಆತನನ್ನು ಹಿಂದು ಸಂಘಟನೆಯ ಕಾರ್ಯಕರ್ತರು ಹಿಂಬಾಲಿಸಿಕೊಂಡು ಹೋಗಿ ತೊಡಿಕಾನದ ಅಡ್ಯಡ್ಕ ಎಂಬಲ್ಲಿ ಅಡ್ಡಗಟ್ಟಿ ಪ್ರಶ್ನಿಸಿದ್ದಾರೆ. ಅಲ್ಲಿ ಮಾತಿನ ವಾಗ್ಯುದ್ಧ ನಡೆದು ಹಲ್ಲೆಗಳಾಗಿದೆ ಎಂದು ಹೇಳಲಾಗುತ್ತಿದೆ.
ಹಲ್ಲೆಗೊಳಗಾದ ವ್ಯಕ್ತಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ, ಪೋಲಿಸ್ ದೂರು ನೀಡಿದ್ದರು. ಮೂಲತಃ ಮಣಪ್ಪುರಂ ನಿವಾಸಿ ಅಡ್ಯಡ್ಕದಲ್ಲಿ ರಬ್ಬರ್ ತೋಟ ಲೀಸ್ ಗೆ ಪಡೆದು ಕೆಲಸ ಮಾಡುತ್ತಿದ್ದ ಜಲೀಲ್ ಹಲ್ಲೆಗೊಳಗಾದ ಯುವಕ.
ಕೂಡಲೇ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ, ಅರ್ಜುನ್ ಎಂಬ ಯುವಕನ್ನು ಪೋಲಿಸರು ಠಾಣೆಗೆ ಕರೆದೊಯ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಸುಳ್ಯ ಠಾಣೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಪ್ರಮುಖ ನಾಯಕರುಗಳು ಆಗಮಿಸತೊಡಗಿದರು. ಠಾಣಾಧಿಕಾರಿಗಳ ಜೊತೆಯಲ್ಲಿ ಕಂಜಿಪಿಲಿ ಮತ್ತು ಕಂದಡ್ಕ ಮಾತುಕತೆ ನಡೆಸಿದ್ದು ನೈಜ ಆರೋಪಿಗಳನ್ನು ಒಪ್ಪಿಸಿದರೇ ಈತನನ್ನು ಬಿಡುತ್ತೇವೆ ಎಂದು ಎಸ್ ಐ ಹೇಳಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ನಮಗೆ ಅದು ಗೊತ್ತಿಲ್ಲಾ ನಮಗೆ ನಿರಪರಾಧಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಇದಾದ ಬಳಿಕ ಕಾರ್ಯಕರ್ತರ ದೂರಿನ ಹಿನ್ನಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಕೂಡ ಆಗಮಿಸಿ ಮಾತುಕತೆ ನಡೆಸಿದ ಬಳಿಕ ಬಿಡುಗಡೆಗೊಳಿಸಿದರು ಎಂದು ತಿಳಿದುಬಂದಿದೆ.
ಈ ಪ್ರಕರಣವು ಇದೀಗ ಕರಾವಳಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಈ ಪ್ರಕರಣ ಯಾವ ಮಟ್ಟಕ್ಕೆ ತಲುಪಲಿದೆ ಎಂದು ಕಾದುನೋಡಬೇಕಿದೆ.