ನಗರ ಪಂಚಾಯತ್ ಅಧ್ಯಕ್ಷರ ಅವಧಿ ಮುಗಿದ ದಿನದಿಂದ ಸುಳ್ಯದ ಕಲ್ಚರ್ಪೆಯಲ್ಲಿ ಕಸದ ಸಮಸ್ಯೆ ಪುನಾರವರ್ತನೆಯಾಗಿದ್ದು ಜನ ಲಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಆ.7 ರಂದು ವರದಿಯಾಗಿದೆ. ಸ್ಥಳಕ್ಕೆ ಶಾಸಕಿ ಕು.ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಕೆಲ ದಿನಗಳಿಂದ ಕಸದ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಕಸದ ರಾಶಿ ತುಂಬಿದ ವಾಹನವನ್ನು ತಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಮಳೆಗಾಲದ ಹಿನ್ನೆಲೆಯಲ್ಲಿ ಕಸದ ರಾಶಿಯನ್ನು ತಂದು ಪಕ್ಕದ ಅರಣ್ಯ ಭಾಗದಲ್ಲಿ ಸುರಿಯುತ್ತಿದ್ದು, ಅಲ್ಲಿ ಸೊಳ್ಳೆ ಉತ್ಪತ್ತಿಗಳು ಹೆಚ್ಚಾಗಿ ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಇಲ್ಲಿ ಮತ್ತೆ ಕಸವನ್ನು ತಂದು ಹಾಕಲು ಬಿಡುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದು ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ . ಶಾಸಕರೊಂದಿಗೆ ಬಿಜೆಪಿ ಪಕ್ಷದ ಮುಖಂಡರುಗಳು ಜೊತೆಯಾಗಿದ್ದರು, ಈ ಭಾಗದ ಕಸದ ವಿಷಯದ ಕುರಿತು ಶಾಸಕರಿಗೆ ಮಾಜಿ ಅಧ್ಯಕ್ಷರು ಮತ್ತು ಸ್ಥಳೀಯ ಜನತೆ ಮಾಹಿತಿಯನ್ನು ನೀಡಿದ್ದು ಈ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಸ್ಥಳಿಯರಿಗೆ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಸ್ಥಳೀಯರು ಕೂಡ ಶಾಸಕರೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆಗೆ ಮಾತನಾಡದೇ ಏಕಾಏಕಿ ಕೈಗೊಂಡ ನಿರ್ಧಾರದಿಂದ ಇಂತಹ ಸಮಸ್ಯೆಗಳು ಆಗುತ್ತಿದೆ.ಅಲ್ಲದೇ ಈ ಹಿಂದೆ ನಗರ ಪಂಚಾಯತ್ ಶೀಟ್ ಅಳವಡಿಸಿದ ಸ್ಥಳದಲ್ಲಿ ಒಣಕಸ ಹಸಿಕಸ ಎಂದು ವಿಭಾಗಿಸಿ ಸಾಗಾಟ ಮಾಡಲಾಗುತ್ತಿತ್ತು. ಈಗ ಅದು ಯಾವುದನ್ನು ಮಾಡದೇ ನೇರವಾಗಿ ಅಲ್ಲಿಗೆ ಸಾಗಿಸಿ ಸುರಿಯಲಾಗುತ್ತಿತ್ತು.ಇದರಿಂದಾಗಿ ಈ ರೀತಿಯ ಸಮಸ್ಯೆ ಉದ್ಭವಿಸಿದೆ. ಇದನ್ನು ಆದಷ್ಟು ಬೇಗ ನಗರ ಪಂಚಾಯತ್ ಆಡಳಿತಾಧಿಕಾರಿಗಳ ಮೂಲಕ ಸರಿಪಡಿಸುವುದಾಗಿ ಶಾಸಕಿ ಕು.ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.