ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಇದರ ಬೆಳ್ಳಾರೆ ಘಟಕದ, ಗೃಹರಕ್ಷಕರಾದ ಹೂವಪ್ಪ ಗೌಡರು 15 ವರ್ಷಗಳಿಂದ ಸೇವೆಸಲ್ಲಿಸಿ, ಜು 26ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಬೆಳ್ಳಾರೆ ಹಾಗೂ ಜೇಸಿಐ ಬೆಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ಆ.6 ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾ ಭವನದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.
ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಇವರು ನಿಷ್ಠಾವಂತ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದರು. ಇವರು 15 ವರ್ಷಗಳ ಕಾಲ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿರುತ್ತಾರೆ. ಬಂದೋಬಸ್ತ್ ಕರ್ತವ್ಯ, ಪೊಲೀಸ್ ಇಲಾಖೆ, ಚುನಾವಣ ಕರ್ತವ್ಯ, ಅಗ್ನಿಶಾಮಕದಳ, ನೆರೆ ಕರ್ತವ್ಯ ಹೀಗೆ ಹತ್ತು ಹಲವು ಇಲಾಖೆಗಳಲ್ಲಿ ಬಹಳ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದರು. ಬಹಳಷ್ಟು ಜನರ ಪ್ರೀತಿಯನ್ನು ಸಂಪಾದಿಸಿದ್ದರು. ತನ್ನ ನಗುಮೊಗದ ನಿಷ್ಕಾಮ ಸೇವೆಯಿಂದ ಸಾವಿರಾರು ಜನರ ಮನಸ್ಸನ್ನು ಗೆದ್ದು ಜನಾನುರಾಗಿ ಗೃಹರಕ್ಷಕರಾಗಿ ಹೊರಹೊಮ್ಮಿದ್ದರು. ಸಾಮಾಜಿಕವಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು. ಅಂತಹ ಹೂವಪ್ಪ ಅವರ ಅಕಾಲಿಕ ಮರಣದಿಂದ ನಮ್ಮ ಇಲಾಖೆಗೆ ಬಹಳ ದೊಡ್ಡ ನಷ್ಟ, ಇವರ ಸಾವಿನಿಂದ ನಮ್ಮ ಇಲಾಖೆ ಬಡವಾಗಿದೆ. ಅವರ ಕೆಲಸವನ್ನು ಮೆಚ್ಚಿ 2019 ರಲ್ಲಿ ಅವರಿಗೆ ಮುಖ್ಯ ಮಂತ್ರಿ ಚಿನ್ನದ ಪದಕವನ್ನು ಸರಕಾರ ನೀಡಿ ಗೌರವಿಸಿತು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಬೆಳ್ಳಾರೆ ಪೋಲಿಸ್ ಠಾಣೆಯ ಉಪ ನಿರೀಕ್ಷಕ ಸುಹಾಸ್ ಅವರು ಮಾತನಾಡಿ ಹೂವಪ್ಪ ಅವರ ಸೇವಾತತ್ಪರತೆ, ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆ ಯ ಬಗ್ಗೆ ಕೊಂಡಾಡಿದರು.
ಈ ಸಂದರ್ಭದಲ್ಲಿ ಜೇಸಿ ರವೀಂದ್ರನಾಥ ಶೆಟ್ಟಿ ಅಜಪಿಲ ಅಧ್ಯಕ್ಷರು, ಜೇಸಿಐ ಬೆಳ್ಳಾರೆ, ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿ ವಸಂತ್ ಕುಮಾರ್ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು. ಜೇಸಿ ಲಿಂಗಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು. ಹೂವಪ್ಪ ಅವರ ಪುತ್ರ ಸಚಿನ್, ಪತ್ನಿ ಲೀಲಾವತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.