ಚೆಂಬು : ನ.29 ರಂದು “3ನೇ ಅರೆಭಾಷೆ ಸಾಹಿತ್ಯ ಸಮ್ಮೇಳನ” ; ಸಮ್ಮೇಳನಾಧ್ಯಕ್ಷರಾಗಿ ಶ್ರೀಮತಿ ಲೀಲಾ ದಾಮೋದರ ಕುಂದಲ್ಪಾಡಿ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ನ.29 ಆದಿತ್ಯವಾರದಂದು ಚೆಂಬು ಗ್ರಾಮದ ಕೂಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಿ. ಯು.ಪಿ ಪ್ರಕಾಶ್ ವೇದಿಕೆಯಲ್ಲಿ ಹಿರಿಯ ಸಾಹಿತಿಗಳಾದ ಶ್ರೀಮತಿ ಲೀಲಾ ದಾಮೋದರ ಕುಂದಲ್ಪಾಡಿ ರವರ ಸಮ್ಮೇಳನಾಧ್ಯಕ್ಷತೆಯಲ್ಲಿ “3ನೇ ಅರೆಭಾಷೆ ಸಾಹಿತ್ಯ ಸಮ್ಮೇಳನ” ನಡೆಯಲಿದ್ದು, ಬೆಳಿಗ್ಗೆ 8:30 ರಿಂದ ಸಂಪಾಜೆ ಗೇಟ್‌ನಿಂದ ಕೂಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಶ್ರೀಮತಿ ಇಂದಿರಾ ದೇವಿಪ್ರಸಾದ್ ಸಂಪಾಜೆ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 10:00 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎ.ಎಸ್ ಪೊನ್ನಣ್ಣ ರವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಪುಸ್ತಕ ಬಿಡುಗಡೆ ಮಾಡಲಿದ್ದು, ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾದ ಸೂರಜ್ ಹೊಸೂರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸ್ವಾಗತ ಮತ್ತು ಪ್ರಸ್ತಾವನೆಯನ್ನು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷರು ಹಾಗೂ ಕವಿಗಳಾದ ಭವಾನಿಶಂಕರ ಹೊದ್ದೆಟ್ಟಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅನಂತ್ ಎನ್.ಸಿ ಊರುಬೈಲು, ಸಂಪಾಜೆ ದ.ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ, ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ, ಕೂಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಜಯಂತಿ ಸೋಮಣ್ಣ ಹಾಗೂ ಚೆಂಬು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಿವು ಎನ್ ಉಪಸ್ಥಿತರಿರಲಿದ್ದಾರೆ.
ಮದ್ಯಾಹ್ನ 12:00 ಗಂಟೆಯಿಂದ ಕೃಷಿಕರಾದ ಸುರೇಶ್‌ಚಂದ್ರ ಟಿ.ಆರ್ ಅವರಿಂದ “ಕೃಷಿ ಬೊದ್ಕು ಮತ್ತೆ ಅದರ ಪ್ರಸ್ತುತ ಸವಾಲ್‌ಗ” ಎಂಬ ವಿಷಯದ ಕುರಿತು ಹಾಗೂ ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ರವರಿಂದ “ಭಾಷೆನ ಮುಂದೆನ ತಲೆಮಾರ್‌ಗೆ ದಾಟ್ಸುವ ಮಾರ್ಗ” ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ.
ಮದ್ಯಾಹ್ನ 1:00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಪರಾಹ್ನ 2:00 ಗಂಟೆಯಿಂದ ನಿವೃತ್ತ ಕನ್ನಡ ಅಧ್ಯಾಪಕರು ಹಾಗೂ ಸಾಹಿತಿಗಳಾದ ಡಾ. ಕರುಣಾಕರ ನಿಡಿಂಜಿ ರವರ ಅಧ್ಯಕ್ಷತೆಯಲ್ಲಿ ಅರೆಭಾಷೆ ಕವಿಗೋಷ್ಠಿ ನಡೆಯಲಿದ್ದು, ಶ್ರೀಮತಿ ಶಿವದೇವಿ ಅವನೀಶ್ಚಂದ್ರ, ಶ್ರೀಮತಿ ರೇಷ್ಮಾ ಕುಕ್ಕನೂರು, ಶ್ರೀಮತಿ ಸಹನಾ ಕಾಂತಬೈಲು, ಶ್ರೀಮತಿ ಜಯಲಕ್ಷ್ಮೀ ಕಡ್ಲೇರ, ಶ್ರೀಮತಿ ಉದಯಕುಮಾರಿ ಚೆಂಬು, ಜೀವನ್ ಪುರ, ದೀಪಶ್ರೀ ಅಡ್ತಲೆ, ಮನೋಜ್ ಕುಡೆಕಲ್ಲು ಹಾಗೂ ಶ್ರೀಮತಿ ಮುಕ್ಕಾಟಿ ಹರಿಣಿ ಗಿರೀಶ್ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಅಪರಾಹ್ನ 3:00 ಗಂಟೆಯಿಂದ ಸಮಾರೋಪ ಸಮಾರಂಭ – ಸನ್ಮಾನ ಹಾಗೂ ಬಹುಮಾನ ವಿತರಣೆ ನಡೆಯಲಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದು, ಸುಳ್ಯ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಯು.ಪಿ ಶಿವಾನಂದ ರವರು ಸಮಾರೋಪ ಮಾತುಗಳನ್ನಾಡಲಿದ್ದಾರೆ. ಗುಡ್ಡೆಮನೆ ವೀರಪ್ಪ ಗೌಡ(ಊರುಗೌಡರು ಹಾಗೂ ಕೃಷಿಕರು), ಅರಂಬೂರು ತಮ್ಮಯ್ಯ ಗೌಡ(ಕರಕುಶಲ ನೈಪುಣ್ಯತೆ), ಮಾಧವ ಚೆಂಬು(ಅರೆಭಾಷೆ ಹಾಡುಗಾರರು), ನೆಲ್ಲಿಕೊಚ್ಚಿ ಈಶ್ವರ ನಾಯ್ಕ(ನಾಟಿ ವೈದ್ಯರು), ಕೇಶವ ಪರವ(ದೈವ ನರ್ತಕರು) ಹಾಗೂ ಸೀತು ಕಿಟ್ಟು(ಗುಡಿ ಕೈಗಾರಿಕೆ) ಇವರನ್ನು ಸನ್ಮಾನಿಸಲಿದ್ದು, ವಿಶ್ರಾಂತ ಪ್ರಾಂಶುಪಾಲರು ಹಾಗೂ ಲೇಖಕರಾದ ಕುಯಿಂತೋಡು ದಾಮೋದರ ಸನ್ಮಾನ ಸಮಾರಂಭವನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಚೆಂಬು ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಶ್ರೀಮತಿ ವಿಸ್ಮಯಿ, ಕೊಡಗು ಜಿಲ್ಲಾ ಲೇಖಕರು ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಲೋಕನಾಥ್ ಅಮೆಚೂರ್, ಕಲ್ಲುಗುಂಡಿ ವರ್ತಕರ ಸಂಘದ ಅಧ್ಯಕ್ಷರಾದ ಯು.ಬಿ ಚಕ್ರಪಾಣಿ ಹಾಗೂ ಕೂಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನವೀನ್ ರಾಮಕಜೆ ಉಪಸ್ಥಿತರಿರಲಿದ್ದಾರೆ.
ಸಂಜೆ 5:00 ಗಂಟೆಯಿಂದ ಸ್ಥಳೀಯ ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು, ಸುಳ್ಯದ ಶಶಿಕಾಂತ್ ಮಿತ್ತೂರು ಮತ್ತು ತಂಡದಿಂದ “ಅರೆಭಾಷೆ ಸಿರಿ ಸಂಸ್ಕೃತಿ ನೃತ್ಯರೂಪಕ” ಹಾಗೂ ರವಿಚಂದ್ರ ಪೆರುಮುಂಡ ಚೆಂಬು ಮತ್ತು ಬಳಗದಿಂದ “ಕಾನನದ ಮಾಯೆ” ಅರೆಭಾಷೆ ಯಕ್ಷಗಾನ ನೆರವೇರಲಿದೆ. ಅದೇ ರೀತಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಾದ ಅರೆಭಾಷೆ ಕವನ ಸ್ಪರ್ಧೆ, ಅರೆಭಾಷೆ ಗಾದೆ ಬರವಣಿಗೆ, ಅರೆಭಾಷೆ ಮೂಲಪದ ಬರವಣಿಗೆ ಹಾಗೂ ಅರೆಭಾಷೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ.
ಸಾಹಿತ್ಯ ಸಮ್ಮೇಳನದ ವಿಶೇಷ ಆಕರ್ಷಣೆಯಾಗಿ ಪುರಾತನ ವಸ್ತುಗಳ ಪ್ರದರ್ಶನ, ತಿಂಡಿ-ತಿನಿಸುಗಳ ಮಳಿಗೆ, ಗಿಡಗಳ ಮಳಿಗೆ, ಚಿತ್ರ ಮಳಿಗೆ, ಪುಸ್ತಕ ಮಳಿಗೆ, ತರಕಾರಿ ಬೀಜಗಳ ಮಳಿಗೆ, ವಸ್ತ್ರ ಮಳಿಗೆ, ಆಟಿಕೆ-ಆಭರಣ ಮಳಿಗೆ ಹಾಗೂ ಸಾಂಸ್ಕೃತಿಕ ಸಂಜೆ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading