ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ರಥಗಳಿಗೆ ಗೂಟ ಪೂಜಾ ಮುಹೂರ್ತ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಿದ್ಧತೆಗಳು ಆರಂಭಗೊಂಡಿವೆ. ಜಾತ್ರೆಯ ಸಂದರ್ಭದಲ್ಲಿ ಎಳೆಯುವ ಬ್ರಹ್ಮರಥ ಹಾಗೂ ಪಂಚಮಿ ರಥಗಳ ನಿರ್ಮಾಣ ಕಾರ್ಯಕ್ಕೆ ಸಾಂಪ್ರದಾಯಿಕವಾಗಿ ಗೂಟ ಪೂಜಾ ಮುಹೂರ್ತ ನೆರವೇರಿಸಲಾಯಿತು.

. . . . . . . . .

ಕಾರ್ತಿಕ ಹುಣ್ಣಿಮೆಯ ಶುಭದಿನದಂದು ದೇವಸ್ಥಾನದ ಸಂಪ್ರದಾಯದಂತೆ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಗೂಟ ಪೂಜಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಪುರೋಹಿತರಾದ ಸುಬ್ರಹ್ಮಣ್ಯ ಕೋರ್ನಾಯ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ರಥ ನಿರ್ಮಾಣ ಕಾರ್ಯಕ್ಕೆ ಶುಭಾರಂಭ ಮಾಡಿದರು. ಮೊದಲಿಗೆ ಬ್ರಹ್ಮರಥಕ್ಕೆ ಅಳವಡಿಸುವ ಗೂಟಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪಂಚಮಿ ರಥದ ಗೂಟಗಳಿಗೂ ಪೂಜೆ ಮಾಡಲಾಯಿತು. ಪೂಜಾ ವಿಧಿವಿಧಾನಗಳ ನಂತರ ಮೂಲನಿವಾಸಿ ಮಲೆಕುಡಿಯ ಸಮುದಾಯದವರು ಬ್ರಹ್ಮರಥ ಹಾಗೂ ಪಂಚಮಿ ರಥಗಳಿಗೆ ಗೂಟ ನೆಡುವ ಸಾಂಪ್ರದಾಯಿಕ ಕೈಂಕರ್ಯವನ್ನು ನೆರವೇರಿಸಿದರು. ಗೂಟಗಳಿಗೆ ತೀರ್ಥ ಸಂಪ್ರೋಕ್ಷಣೆ ಮಾಡಿ, ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಲಾಯಿತು. ಪುರೋಹಿತರು ಪೂರ್ವಶಿಷ್ಟ ಸಂಪ್ರದಾಯದಂತೆ ರಥ ನಿರ್ಮಾಣ ಕಾರ್ಯದ ಜವಾಬ್ದಾರಿ ವಹಿಸಿಕೊಳ್ಳಲಿರುವ ಮೂಲನಿವಾಸಿ ಮಲೆಕುಡಿಯ ಸಮುದಾಯದ ಗುರಿಕಾರರಿಗೆ ರಥ ಕಟ್ಟುವ ಕೈಂಕರ್ಯಕ್ಕೆ ಅನುಮತಿ ಸೂಚಕವಾಗಿ ಪ್ರಸಾದ ರೂಪದಲ್ಲಿ ವೀಳ್ಯ ನೀಡಿದರು. ಈ ಮೂಲಕ ರಥ ನಿರ್ಮಾಣ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು.

. . . . . . .

ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮೂಲ ನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ ಕೋಡಿಕಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರು, ರಥಕಟ್ಟುವ ಮೂಲ ನಿವಾಸಿ ಮಲೆಕುಡಿಯ ಜನಾಂಗದ ಹಿರಿಯರು, ಯುವಕರು, ಭಕ್ತರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading