ಕುಕ್ಕೆ ಸುಬ್ರಹ್ಮಣ್ಯ : ಬೃಹತ್ ಉಚಿತ ಆರೋಗ್ಯ ಶಿಬಿರ – “ಜನತೆಯ ಆರೋಗ್ಯಕ್ಕೆ ನೀಡುವ ಕೊಡುಗೆಯು ಭಗವಂತನ ಸೇವೆಯಾಗಿದೆ” : ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅಭಿಮತ

ಸುಬ್ರಹ್ಮಣ್ಯ : “ಸಾರ್ವಜನಿಕರ ಆರೋಗ್ಯ ಭಾಗ್ಯಕ್ಕೆ ನೀಡುವ ಉದಾರ ಕೊಡುಗೆಯು ಭಗವಂತನ ಸೇವೆಯಾಗಿದೆ. ಇಂತಹ ಸೇವೆಗಳು ದೇವರಿಗೆ ಪ್ರಿಯವಾಗುತ್ತದೆ. ಆಧುನಿಕ ಯುಗದಲ್ಲಿ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕ. ಈಗಿನ ಆಹಾರ ವ್ಯವಸ್ಥೆ ಇತ್ಯಾದಿಗಳು ಆರೋಗ್ಯದಲ್ಲಿನ ಏರುಪೇರಿಗೆ ಕಾರಣವಾಗುತ್ತದೆ. ಆದ್ದರಿಂದ ಸರ್ವರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಗ್ರಾಮೀಣ ಭಾಗದಲ್ಲಿ ನಡೆಸಲಾಗುವ ಇಂತಹ ಉಚಿತ ಆರೋಗ್ಯ ಸೇವೆಗಳು ಆಧುನಿಕ ಯುಗದಲ್ಲಿ ಔಚಿತ್ಯಪೂರ್ಣವಾಗಿದೆ. ನಗರದಲ್ಲಿನ ತಜ್ಞ ವೈದ್ಯರಿಂದ ತಪಾಸಣೆ ಪಡೆದುಕೊಂಡು ತಮ್ಮ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಶಿಬಿರವು ಸಹಕಾರಿಯಾಗಿದೆ” ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್.ಎಸ್.ಇಂಜಾಡಿ ನುಡಿದರು. ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ಸಹಯೋಗದಲ್ಲಿ ಸುರಕ್ಷಾ ಚಾರಿಟೇಬಲ್ ಟ್ರಸ್ಟ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪ್ರೆಸ್ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ , ಸೀನಿಯರ್ ಚೇಂಬರ್, ಇನ್ನರ್ ವ್ಹೀಲ್ ಕ್ಲಬ್, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಸುಬ್ರಹ್ಮಣ್ಯ ಮೊದಲಾದ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಜುಲೈಕಾ ಯೆನೆಪೋಯ ಕ್ಯಾನ್ಸರ್ ಆಸ್ಪತ್ರೆ ದೇರಳಕಟ್ಟೆ ಇವುಗಳ ಸಹಕಾರದೊಂದಿಗೆ ಆ.09 ಆದಿತ್ಯವಾರದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ಸಭಾಂಗಣದಲ್ಲಿ ನಡೆದ “5ನೇ ವರ್ಷದ ಬೃಹತ್ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ” ಉದ್ಘಾಟಿಸಿ ಅವರು ಮಾತನಾಡಿದರು.

. . . . . . . . .

ರವಿಕಕ್ಕೆಪದವು ಸಮಾಜಸೇವಾ ಟ್ರಸ್ಟ್ ಅಧ್ಯಕ್ಷರಾದ ಡಾ.ರವಿ ಕಕ್ಕೆಪದವು ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಠಾಣಾಧಿಕಾರಿಗಳಾದ ಆಂಜನೇಯ ರೆಡ್ಡಿ, ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಡಾ.ರಘು, ಕಲಾವಿದರಾದ ಕೆ.ಯಜ್ಞೇಶ್ ಆಚಾರ್, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷರಾದ ಉಮೇಶ್.ಕೆ.ಎನ್, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ರತ್ನಾಕರ ಸುಬ್ರಹ್ಮಣ್ಯ, ಕುಕ್ಕೆಶ್ರೀ ಅಟೋ ಚಾಲಕ ಸಂಘದ ಅಧ್ಯಕ್ಷರಾದ ಭುವನೇಶ್ ಅಗೋಳಿಕಜೆ, ಲಯನ್ಸ್ ಕ್ಲಬ್ ನಿಕಟಪೂರ್ವಾಧ್ಯಕ್ಷರಾದ ವಿಮಲಾ ರಂಗಯ್ಯ, ರೋಟರಿ ಅಧ್ಯಕ್ಷರಾದ ರೋಹಿತ್.ಬಿ.ಬಿ, ಬಿ.ಎಂ.ಎಸ್ ಆಟೋ ಚಾಲಕ ಸಂಘದ ಅಧ್ಯಕ್ಷರಾದ ಕಿರಣ್ ಪೈಲಾಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಅಧ್ಯಕ್ಷರಾದ ರತ್ನಾವತಿ, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟೇಶ್.ಹೆಚ್.ಎಲ್, ಸುಬ್ರಹ್ಮಣ್ಯ ಎಸ್.ಎಸ್.ಪಿಯು ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಶ್ರುತಿ ಅಶ್ವತ್, ಇನ್ನರ್ ವೀಲ್ ಅಧ್ಯಕ್ಷರಾದ ಸೌಮ್ಯ ದಿನೇಶ್, ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ತಿಲಕ್.ಎ.ಎ, ಉದ್ಯಮಿ ಶಿಲ್ಪ ಕಾಂತಮಂಗಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . .

ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನಿರೂಪಿಸಿದರು. ಗೋಪಾಲ್ ಎಣ್ಣೆಮಜಲು ಸ್ವಾಗತಿಸಿದರು.

ಸಹಸ್ರಾರು ಜನರಿಗೆ ಪ್ರಯೋಜನ : ಶಿಬಿರದಲ್ಲಿ ಕ್ಯಾನ್ಸರ್, ಸ್ತ್ರೀ ರೋಗ, ಪ್ರಸೂತಿ, ಕಣ್ಣು, ದಂತ, ಕಿವಿ, ಮೂಗು, ಗಂಟಲು, ವೈದ್ಯಕೀಯ, ಮೂಳೆ, ಚರ್ಮರೋಗ, ಇಸಿಜಿ, ಮಧುಮೇಹ ತಪಾಸಣೆ ನಡೆಯಿತು. ಅಲ್ಲದೆ ಅಗತ್ಯವುಳ್ಳವರಿಗೆ ಉಚಿತ ಔಷಧಿಗಳನ್ನು ನೀಡಲಾಯಿತು. ಯೆನಪೋಯ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಅಶ್ವಿನಿ ಶೆಟ್ಟಿ, ಡಾ.ವಿನುತಾ ಸೇರಿದಂತೆ ಇತರ ವೈದ್ಯರು ತಪಾಸಣೆ ಮಾಡಿದರು. ಶಿಬಿರದ ಸಂಯೋಜಕ ಅಬ್ದುಲ್ ರಜಾಕ್ ಸಹಕರಿಸಿದರು. ಸುಬ್ರಹ್ಮಣ್ಯ ಪರಿಸರದ ಜನರು ಮಾತ್ರವಲ್ಲದೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸ್ಥಳೀಯರು ಸೇರಿದಂತೆ ದೂರದೂರುಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಶಿಬಿರದ ಪ್ರಯೋಜನ ಪಡೆದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading