ಆ.09ರಂದು ಪಂಜದಲ್ಲಿ ಅರೆಭಾಷೆ ಅಕಾಡೆಮಿಯ “ಆಟಿ ನೆಂಪು-2026” | ಆ.07ರಿಂದ 09 ರವರೆಗೆ ‘ಸ್ವದೇಶಿ ಖಾದ್ಯ ಮೇಳ’

ಪಂಜ, ಆ.01: “ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜೇಸಿಐ ಪಂಜ ಪಂಚಶ್ರೀ ಹಾಗೂ ಲಯನ್ಸ್ ಕ್ಲಬ್ ಪಂಜ ಸಹಯೋಗದಲ್ಲಿ “ಆಟಿ ನೆಂಪು-2026” ಕಾರ್ಯಕ್ರಮವು ಆಗಸ್ಟ್ 09ರಂದು ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ” ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.

. . . . . . . . .

ಸುಳ್ಯದ ಪತ್ರಿಕಾ ಭವನದಲ್ಲಿ ಆ. 1ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಬಾರಿ ಉಪ್ಪಿನಂಗಡಿ ಹಾಗೂ ವಿಟ್ಲದಲ್ಲಿ ಪ್ರತ್ಯೇಕ ಆಟಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೀಗ ಪಂಜದಲ್ಲಿ ಆಟಿ ನೆಂಪು ಕಾರ್ಯಕ್ರಮ ನಡೆಸಲಾಗುತ್ತಿದೆ” ಎಂದು ಹೇಳಿದರು. “ಆಟಿ ತಿಂಗಳ ಮಹತ್ವ, ಪೂರ್ವಜರ ಸಂಪ್ರದಾಯಗಳು ಹಾಗೂ ಆಟಿ ತಿಂಗಳಲ್ಲಿ ಸೇವಿಸುತ್ತಿದ್ದ ಸಾಂಪ್ರದಾಯಿಕ ಆಹಾರಗಳ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ನೀಡಲಾಗುವುದು” ಎಂದರು. “ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಯಾಗಲಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸ್ಪರ್ಧೆಗಳು ನಡೆಯಲಿವೆ” ಎಂದರು.

. . . . . . .

ಮಧ್ಯಾಹ್ನ 12:00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಹಾಗೂ ಕಲಾವಿದೆ ಮಿಲನ ಭರತ್ ಮುಖ್ಯ ಭಾಷಣ ಮಾಡಲಿದ್ದಾರೆ. ಜೇಸಿಐ ಭಾರತ ವಲಯ-15ರ ವಲಯ ಸಂಯೋಜಕ ಜೇಸಿ ಭಾಗ್ಯೇಶ್ ರೈ, ಲಯನ್ಸ್ ಜಿಲ್ಲೆ 317-D ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಲಯನ್ ಎಂ.ಜೆ.ಎಫ್. ಜಯರಾಮ್ ದೇರಪ್ಪಜ್ಜನಮನೆ, ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೋಮಶೇಖರ ನೇರಳ, “ಕಾರ್ಯಕ್ರಮದ ಅಂಗವಾಗಿ ವಾಟ್ಸಾಪ್ ಮೂಲಕ ಅರೆಭಾಷೆ ಸ್ವರಚಿತ ಕವನ, ಚಿನ್ನೆಮಣೆ, ಅರೆಭಾಷೆ ಪ್ರಹಸನ, ಚಿತ್ರಕಲೆ, ಅರೆಭಾಷೆ ಭಾಷಣ, ಆಟಿ ಖಾದ್ಯ, ನೀರ್ ದೋಸೆ ಹೊಯ್ಯುವ ಹಾಗೂ ಹಸಿ ತರಕಾರಿಗಳ ಅಲಂಕಾರ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿರುವುದಾಗಿ” ತಿಳಿಸಿದರು. “ಸಂಜೆ 6:30 ಗಂಟೆಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸ್ತುತಪಡಿಸುವ, ಲೋಕೇಶ್ ಊರುಬೈಲು ನಿರ್ದೇಶನದ ಜನಪ್ರಿಯ ‘ಅಪ್ಪ’ ಅರೆಭಾಷೆ ನಾಟಕ ಪ್ರದರ್ಶನಗೊಳ್ಳಲಿದೆ. ಇದೇ ವೇಳೆ ಪಂಜದಲ್ಲಿ ಮೊದಲ ಬಾರಿಗೆ ಟಿಮ್ ಉಬರ್ ನೇತೃತ್ವದಲ್ಲಿ ಆಗಸ್ಟ್ 07ರಿಂದ 09ರವರೆಗೆ ಸ್ವದೇಶಿ ಖಾದ್ಯ ಮೇಳ ಆಯೋಜಿಸಲಾಗಿದ್ದು, ಆಟಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಲಾಯಿತು. “ಚಿತ್ರಕಲಾ ಸ್ಪರ್ಧೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯವರಿಗೆ ಮಾತ್ರ ಅವಕಾಶವಿದ್ದು, ಉಳಿದ ಎಲ್ಲಾ ಸ್ಪರ್ಧೆಗಳಲ್ಲಿ ಆಸಕ್ತರು ಭಾಗವಹಿಸಬಹುದು. ಸ್ಪರ್ಧೆಗಳು ಯಾವುದೇ ಭಾಷೆ ಅಥವಾ ಜಾತಿಗೆ ಸೀಮಿತವಾಗಿಲ್ಲ. ಕಾರ್ಯಕ್ರಮದಲ್ಲಿ ಆಟಿ ತಿಂಗಳಿಗೆ ಸಂಬಂಧಿಸಿದ ವಿಶೇಷ ಭೋಜನದ ವ್ಯವಸ್ಥೆಯೂ ಇರಲಿದೆ”

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷ ಡಾ. ದೇವಿಪ್ರಸಾದ್ ಚಿಕ್ಮುಳಿ, ಕಾರ್ಯದರ್ಶಿ ವಾಸುದೇವ ಮೇಲಪ್ಪಾಡಿ ಹಾಗೂ ನಿರ್ದೇಶಕ ವಿಜೇಶ್ ಹಿರಿಯಡ್ಕ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading