ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಅಗರಿಕಜೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವವು ಭಕ್ತಿ ಸಡಗರದಿಂದ ನೆರವೇರಿತು. ಪ್ರತಿಷ್ಠಾ ವಾರ್ಷಿಕೋತ್ಸವದ ನಿಮಿತ್ತ ಮಹಾಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ಪೂರ್ವಕ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನೆರವೇರಿತು.ರಾತ್ರಿ ಆದಿ ಮೊಗೇರ್ಕಳರು ಗರಡಿ ಇಳಿಯುವುದು ಮತ್ತು ಅನ್ನ ಸಂತರ್ಪಣೆ ನೆರವೇರಿತು.ನಂತರ ಆದಿಮೊಗೇರ್ಕಳರು ರಂಗಸ್ಥಳದಲ್ಲಿ ನರ್ತನ ಸೇವೆ ನೆರವೇರಿಸಿದರು.ಬಳಿಕ ಶ್ರೀ ದೈವಗಳು ಹಾಲು ಕುಡಿಯುವ ಕಾರ್ಯ ನಡೆಯಿತು.ನಂತರ ಸತ್ಯದೇವತೆ ತನ್ನಿಮಾನಿಗ ಗರಡಿ ಇಳಿದು ರಂಗಸ್ಥಳ ಪ್ರವೇಶಿಸಿತು.ನಂತರ ನರ್ತನ ಸೇವೆ ನೆರವೇರಿಸಿತು.ಬಳಿಕ ಆದಿಮೊಗೇರ್ಕಳರು ಮತ್ತು ತನ್ನಿಮಾನಿಗ ದೈವಗಳು ರಂಗಸ್ಥಳದಲ್ಲಿ ನರ್ತನ ಸೇವೆ ನೆರವೇರಿಸಿದರು.ಮುಂಜಾನೆ ದೈವಗಳು ಭಕ್ತರಿಗೆ ಪ್ರಸಾದ ವಿತರಿಸಿದರು.
ಕೊರಗಜ್ಜ ನೇಮೋತ್ಸವ: ಫೆ 16 ರಂದು ಬೆಳಗ್ಗೆ ಕಾರಣಿಕ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಆರಂಭಗೊಂಡಿತು.ಬಳಿಕ ನರ್ತನ ಸೇವೆ ನಡೆಯಿತು. ಈ ಸಂದರ್ಭ ಶ್ರೀ ದೈವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಕ್ಕುಲಿ ಹಾರ, ವೀಳ್ಯದೆಲೆಯ ಹಾರ, ಕೇಪುಳ ಹೂವಿನ ಹಾರ, ಸುಗಂಧರಾಜದ ಹಾರ, ಸೇವಂತಿಗೆ ಹಾರ, ಕಾಕಡ ಮಲ್ಲಿಗೆ ಹಾರ, ಮಂಗಳೂರು ಮಲ್ಲಿಗೆ ಹಾರ ಸಮರ್ಪಿಸಿದರು. ನರ್ತನ ಸೇವೆಯ ನಂತರ ಶ್ರೀ ಸ್ವಾಮಿ ಕೊರಗಜ್ಜ ದೈವವು ಸರ್ವ ಭಕ್ತರಿಗೆ ಪ್ರಸಾದ ವಿತರಿಸಿತು.ಈ ಮೊದಲು ಭಕ್ತರಿಗೆ ಉಪಹಾರ ವ್ಯವಸ್ಥೆ ಮತ್ತು ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಅಜ್ಜನ ನೇಮಕ್ಕೆ ಹರಿದು ಬಂದ ಭಕ್ತ ಸಾಗರ:ಕೊರಗಜ್ಜನ ನೇಮೋತ್ಸವವನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಸುಬ್ರಹ್ಮಣ್ಯ ಪರಿಸರ ಸೇರಿದಂತೆ ಬೆಂಗಳೂರು, ದಾರವಾಡ, ಶಿವಮೊಗ್ಗ, ಚಿಕ್ಕ ಮಗಳೂರು, ಹಾಸನ ಮೊದಲಾದ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಕರಿಗಂಧ ಸ್ವೀಕರಿಸಿದರು. ಅಲ್ಲದೆ ಭಕ್ತಾಧಿಗಳು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥನೆ ಮೂಲಕ ಅರಿಕೆ ಮಾಡಿಕೊಂಡರು.ತಮ್ಮ ಅಭೀಷ್ಠೆಗಳು ಈಡೇರಿದ ಭಕ್ತರು ಬೆಳ್ಳಿಯ ವಸ್ತುಗಳ ಕಾಣಿಕೆಯನ್ನು ಅರ್ಪಿಸಿದರು. ನೇಮೋತ್ಸವದ ನಿಮಿತ್ತ ದೈವಸ್ಥಾನವನ್ನು ವಿಶೇಷ ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು.ಅಲ್ಲದೆ ಆಕರ್ಷಕ ವಿದ್ಯುದ್ದೀಪಾಲಂಕಾರದಿಂದ ದೈವಸ್ಥಾನ ಮತ್ತು ದೈವಸ್ಥಾನದ ಪರಿಸರ ಕಂಗೊಳಿಸಿತು.