ರುಚಿಕರ ಆರೋಗ್ಯಕರ ಅಭಿಯೂ ಹಣ್ಣನ್ನು ನೋಡುವಾಗಲೇ ಬಾಯಲ್ಲಿ ನೀರೂರಿಸುವ ಸಿಹಿಯಾದ ಹಣ್ಣು. ಇದು ಪ್ರಚಲಿತಕ್ಕೆ ಬರುತ್ತಿರುವ ಹೊಸ ಹಣ್ಣು. ಕೃಷಿಕರು ಒಂದೇ ಬೆಳೆಯನ್ನು ನಂಬಿಕೊಳ್ಳದೆ ವಿವಿಧ ಉಪ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ವಿವಿಧ ಹೂ ಹಣ್ಣುಗಳನ್ನು ಬೆಳೆಸುತ್ತಿದ್ದು, ವಿದೇಶಿ ಹಣ್ಣುಗಳು ಇದೀಗ ನಮ್ಮ ತೋಟಗಳಲ್ಲಿ ಮನೆಯ ಸುತ್ತಮುತ್ತ ಬೆಳೆಯಲು ಆರಂಭಿಸಿದ್ದಾರೆ. ಹಾಗೇಯೆ ಇದೀಗ ಅಭಿಯೂ ಹಣ್ಣು ಬ್ರೆಜಿಲ್, ಸೌತ್ ಅಮೆರಿಕ ,ಅಮೆಜಾನ್, ಪೇರು ಕೊಲಂಬಿಯಾ ಮುಂತಾದ ದೇಶಗಳಲ್ಲಿದ್ದು ಇದೀಗ ಭಾರತದಲ್ಲಿ ಕೂಡ ಬೆಳೆಯಲು ಆರಂಭಿಸಿದ್ದಾರೆ.
ಚಿಕ್ಕು ಜಾತಿಗೆ ಸೇರಿದ ಗಿಡವಾಗಿದ್ದು, ಇದರ ವೈಜ್ಞಾನಿಕ ಹೆಸರು ಪೌಟೇರಿಯಾ ಕೈಮಿಟೋ (Pouteria caimito). ಹತ್ತರಿಂದ ಇಪ್ಪತ್ತು ಸೆಂಟಿ ಮೀಟರ್ ಉದ್ದವಿದ್ದ ಎಲೆಗಳು ಮೂರರಿಂದ ಆರು ಸೆಂಟಿ ಮೀಟರ್ ಅಗಲ ಎಲೆಗಳಿರುತ್ತವೆ. 30 ಅಡಿಗಳಷ್ಟು ಎತ್ತರಕ್ಕೆ ಗಿಡ ಬೆಳೆಯುತ್ತದೆ. ಒಂದೊಂದು ಹೂಗಳಾಗಿಯೂ ನಾಲ್ಕು ಐದು ಹೂಗಳ ಗೊಂಚಲು ಅರಳಿ ಕಾಯಿಗಳಾಗುತ್ತವೆ. ಹಣ್ಣುಗಳು ಮಾರುಕಟ್ಟೆಗೂ ಪ್ರವೇಶಿಸುತ್ತಿದೆ ಇದೀಗ ನರ್ಸರಿಗಳಲ್ಲಿಯೂ ಗಿಡ ಲಭ್ಯವಿದೆ. ಎರಡು ವರ್ಷ ಎರಡುವರೆ ವರ್ಷದ ಗಿಡಗಳಲ್ಲಿ ಗಿಡ ತುಂಬಾ ಹಣ್ಣುಗಳು ಬೆಳೆದು ನೋಡುಗರನ್ನು ಕಣ್ಮನ ಸೆಳೆಯುತ್ತದೆ . ದ.ಕ ಜಿಲ್ಲೆಯ ಕಡಬದ ಮಹಾಬಲ ನಾಯ್ಕ್ ಅವರ ತೋಟದಲ್ಲಿ ಬೆಳೆದು ಎಲ್ಲರ ಇಷ್ಟಕ್ಕೆ ಕಾರಣವಾಗಿದೆ .ಇದು ಬಾಲ್ ಐಸ್ ಕ್ರೀಮ್ ನಂತೆ ಕಾಣುತ್ತದೆ . ತುದಿಯಲ್ಲಿ ಹಸಿರಾಗಿದ್ದು ತಳ ಭಾಗ ಹಳದಿ ಬಣ್ಣದಲ್ಲಿದ್ದು ಹಣ್ಣಾಗಿ ಒಳಗಿನ ಪಲ್ಪುಗಳು ಮೃದುವಾಗಿ ಸಿಹಿ ಮಿಶ್ರಿತ ಮೇಣ ಅಂಟಿಕೊಳ್ಳುತ್ತದೆ . ಚಿಕ್ಕುವಿನ ತರ ಒಂದು ಎರಡು ಬೀಜಗಳಿರುತ್ತವೆ ಗಿಡವು ಸೀತಾಫಲ ಮೊಟ್ಟೆ ಹಣ್ಣು ಬೆಣ್ಣೆ ಹಣ್ಣಿನ ಗಿಡದಂತೆ ಎಲೆಗಳಿರುತ್ತದೆ. ಇದೀಗ ಕೇರಳದಲ್ಲಿ ಈ ಹಣ್ಣುಗಳು ಹೆಚ್ಚಾಗಿ ಕಂಡುಬರುತ್ತದೆ. ಕೆ.ಜಿ.ಗೆ 600 ತನಕ ಬೆಲೆ ಇದೆ. ಇದೀಗ ಅಡಿಕೆ ತೋಟದಲ್ಲಿ ಉತ್ತಮ ಉಪ ಬೆಳೆಯಾಗಿದೆ. ಆಗಸ್ಟ್ ನಿಂದ ಡಿಸೆಂಬರ್ ತನಕ ಹಣ್ಣುಗಳಾಗುತ್ತವೆ. 200 ಗ್ರಾಂ ನಿಂದ ಒಂದು ಕೆ.ಜಿ.ತನಕ ಈ ಹಣ್ಣುಗಳ ಗಾತ್ರ ಇರುತ್ತದೆ ಒಂದು ದಿನ ಫ್ರಿಡ್ಜ್ ನಲ್ಲಿ ಇಟ್ಟು ತಿಂದರೆ ಮೃದುವಾಗಿರುತ್ತದೆ. ಬೀಜದಿಂದಲೂ ಗಿಡವಾಗುತ್ತದೆ ಇದರಲ್ಲೂ ವಿವಿಧ ತಳಿಗಳಿವೆ. ಇದು ಚಿಕ್ಕುವಿನಂತೆ ಮೇಣವನ್ನು ಹೊಂದಿದ್ದು ಪೂರ್ತಿಯಾಗಿ ಹಣ್ಣು ಆದಾಗ ಅಂದರೆ ಹಳದಿ ಬಣ್ಣಕ್ಕೆ ತಿರುಗಿದಾಗ ತಿನ್ನಲು ಯೋಗ್ಯವಾಗಿರುತ್ತದೆ. ಇದನ್ನು ಚಮಚದ ಸಹಾಯದಿಂದ ತಿನ್ನಬೇಕು. ಅಭಿಯು ಬಿಳಿ ಬಣ್ಣದ ತಿರುಳನ್ನು ಹೊಂದಿದ್ದು ಉತ್ತಮ ಸುವಾಸನೆ ಹೊಂದಿದ್ದು ಸಿಹಿಯಾದ ಪಲ್ಪ್ ಅನ್ನು ಹೊಂದಿರುವುದರಿಂದ ಐಸ್ ಕ್ರೀಮ್ ,ಜೆಲ್ಲಿ ಜಾಮ್, ಮಿಲ್ಕ್ ಶೇಕ್ ಗಳ ತಯಾರಿಕೆಗೆ ಬಳಸುತ್ತಾರೆ. ವಿಟಮಿನ್ ಎ ಹೇರಳವಾಗಿದ್ದು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ ವಿಟಮಿನ್ ಸಿ ಯನ್ನು ಹೊಂದಿದ್ದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕ್ಯಾಲ್ಸಿಯಂ ಪಾಸ್ಪರಸ್ ಕಾರ್ಬೋಹೈಡ್ರೇಟ್, ಪ್ರೋಟೀನ್ ಎಲ್ಲವನ್ನು ಹೊಂದಿದ್ದು ಆರೋಗ್ಯವರ್ಧಕವೂ ಹೌದು.
ಚಿತ್ರ – ಬರಹ : ಕುಮಾರ್ ಪೆರ್ನಾಜೆ
- Friday
- November 22nd, 2024