ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸುಳ್ಯ ಘಟಕ, ತಾಲೂಕು ಕಚೇರಿ ಸುಳ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಇದರ ಸಹಯೋಗದಲ್ಲಿ ಮಾಹಿತಿ ಕಾರ್ಯಾಗಾರ ಮತ್ತು ರಕ್ತದಾನ ಶಿಬಿರ ಡಿ .೨೭ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ವಹಿಸಿದ್ದರು, ಉದ್ಘಾಟನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿ ಶುಭ ಹಾರೈಸಿದರು. ಹೊಸ ವರ್ಷದ ಕ್ಯಾಲೆಂಡರ್‌ನ್ನು ತಹಶೀಲ್ದಾರ್ ಮಂಜುನಾಥ್ ಅವರು ಬಿಡುಗಡೆಯನ್ನು ಮಾಡಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಇ.ಒ. ರಾಜಣ್ಣ, ರೆಡ್ ಕ್ರಾಸ್ ಉಪ ಸಭಾಪತಿ ಕೆ.ಎಂ.ಮುಸ್ತಫಾ ಭಾಗಿಯಾಗಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಇದರ ಸಭಾಪತಿ ಪಿ.ಬಿ.ಸುಧಾಕರ ರೈ ಅವರು ಕಾರ್ಯಕ್ರಮ ಉದ್ದೇಶಿಸಿ ರಕ್ತದಾನದ ಮಹತ್ವ ಕುರಿತು ಮಾತನಾಡಿದರು. ಈ ಸಂದರ್ಭ ರೆಡ್ ಕ್ರಾಸ್ ಮಂಗಳೂರಿನ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪೃಥ್ವಿಕುಮಾರ್ ವೇದಿಕೆಯನ್ನುದ್ದೇಶಿಸಿ ಒಂದೆರಡು ಮಾತನಾಡಿದರು. ಶಿಕ್ಷಕಿ ಧನಲಕ್ಷ್ಮಿ ಕುದ್ಪಾಜೆ ಪ್ರಾರ್ಥಿಸಿದರು. ಪಶು ಸಂಗೋಪನಾ ಇಲಾಖಾಧಿಕಾರಿ ಡಾ.ನಿತಿನ್ ಪ್ರಭು ಸ್ವಾಗತಿಸಿ, ಶಿಕ್ಷಕಿ ಎ.ಜಿ. ಭವಾನಿ ವಂದಿಸಿದರು. ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ, ತಹಸೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯತ್ ಇ. ಓ. ರಾಜಣ್ಣ ಸೇರಿದಂತೆ ಹಲವರು ಮಂದಿ ರಕ್ತದಾನ ಮಾಡಿದರು.