ಚಳಿಗಾಲ ಶುರುವಾಗಿದ್ದು, ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿಬೇಕು. ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಾಗಿ ನಿಗಾವಹಿಸಬೇಕು. ಚಳಿಗಾಲ ಶುರುವಾದಂತೆ ಮಕ್ಕಳನ್ನು ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ.
ಚಳಿಗಾಲದಲ್ಲಿ ಮಕ್ಕಳು ಸೋಂಕುಗಳಿಗೆ ತುತ್ತಾಗುವುದು ಸಾಮಾನ್ಯ. ಫ್ಲೂ, ನೆಗಡಿ, ಗಂಟಲು ನೋವು ಮತ್ತು ಸೈನುಸೈಟಿಸ್‌ನಂತಹ ಉಸಿರಾಟದ ಸೋಂಕುಗಳು ಈ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸೋಂಕುಗಳು ಹೆಚ್ಚು ಸಾಂಕ್ರಾಮಿಕವಾಗಿರುವುದರಿಂದ ಆರಂಭಿಕ ರೋಗಲಕ್ಷಣಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ತಡೆಗಟ್ಟುವುದು ಬಹಳ ಮುಖ್ಯ. ಈ ಋತುವಿನಲ್ಲಿ ಕೆಮ್ಮು, ಸೀನುವಿಕೆ, ಗಂಟಲು ನೋವು, ಮೂಗು ಸೋರಿಕೆ ಮತ್ತು ಜ್ವರವು ಲಕ್ಷಣಗಳು ಸಾಮಾನ್ಯವಾಗಿರುತ್ತವೆ. ಇದಲ್ಲದೆ ಮಕ್ಕಳಲ್ಲಿ ತೀವ್ರ ಆಯಾಸ, ದೇಹದ ನೋವು ಮತ್ತು ಅಸ್ವಸ್ಥತೆ ಕೂಡ ಕಂಡು ಬರುತ್ತವೆ.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು…
* ಜ್ವರ 5 ದಿನಕ್ಕಿಂತಲೂ ಹೆಚ್ಚು ಕಾಲ ಇದ್ದಾಗ
* ಊಟ, ನೀರು ಸೇವನೆ ನಿಲ್ಲಿಸುವುದು, ಅತೀವ್ರ ವಾಂತಿ, ಭೇದಿಯಾದಾಗ
* ಸಡಿಲವಾದ ಮಲ ಒಂದು ವಾರಕ್ಕಿಂತ ಹೆಚ್ಚು ಕಾಲ ಇದ್ದಾಗ
* ಉಸಿರಾಟ ಸಮಸ್ಯೆ
* ದೇಹದಲ್ಲಿ ದದ್ದುಗಳು ಕಂಡು ಬಂದರೆ
ಚಳಿಗಾಲದಲ್ಲಿ ಅನಾರೋಗ್ಯದಿಂದ ದೂರ ಇರುವುದು ಹೇಗೆ?
ಲಸಿಕೆ
ಜ್ವರದ ಲಸಿಕೆ ಪ್ರಮುಖವಾಗಿದ್ದು, ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸಿ.
ನೈರ್ಮಲ್ಯ ಕಾಪಾಡಿ
ನಿಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಮಕ್ಕಳ ಆಟಿಕೆಗಳನ್ನು ಸ್ವಚ್ಛಗೊಳಿಸಿ. ಕೈಗಳನ್ನು ಆಗಾಗ್ಗೆ ತೊಳೆಯುತ್ತಿರಿ.
ಸಾಮಾಜಿಕ ಅಂತರ
ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಭ್ಯಾಸ ಮಾಡಿಸಿ. ರೋಗಲಕ್ಷಣಗಳನ್ನು ಹೊಂದಿರುವವರಿಂದ ದೂರ ಇರುವಂತೆ ಮಾಡಿ.
ಆರೋಗ್ಯಕರ ಆಹಾರ ಸೇವನೆ
ಪ್ರೋಟೀನ್, ಫೈಬರ್, ಧಾನ್ಯಗಳು, ಹಣ್ಣುಗಳು, ತರಕಾರಿಗಳಿರುವ ಆಹಾರವನ್ನು ಸೇವನೆ ಮಾಡುವಂತೆ ಮಾಡಿ. ಸಂಸ್ಕರಿಸಿದ ಆಹಾರಗಳು ಮತ್ತು ಜಂಕ್ ಫುಡ್ ಅನ್ನು ತಪ್ಪಿಸಿ.
ನೀರು
ಅನಾರೋಗ್ಯದ ಸಂದರ್ಭದಲ್ಲಿ ಹೆಚ್ಚೆಚ್ಚು ನೀರು ಕುಡಿಯುವುದು ಅಗತ್ಯ. ತಂಪಾದ ವಾತಾವರಣದಲ್ಲಿಯೂ ಕನಿಷ್ಟ 6 ಲೋಟ ನೀರು ಕುಡಿಯುವುದು ಮುಖ್ಯವಾಗುತ್ತದೆ.
ಮಾಸ್ಕ್ ಧಾರಣೆ
ಮಾಸ್ಕ್ ಧರಿಸಿ. ಕೆಮ್ಮುವಾಗ ಅಥವಾ ಸೀನುವಾಗ ಕೈಗಳಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವಂತೆ ತಿಳಿಸಿ. ಇದು ಉಸಿರಾಟದ ಹನಿಗಳ ಪ್ರಸರಣವನ್ನು ಕಡಿಮೆ ಮಾಡುತ್ತದೆ.
ವಿಶ್ರಾಂತಿ
ಅನಾರೋಗ್ಯ ಸಂದರ್ಭದಲ್ಲಿ ದೇಹ ವಿಶ್ರಾಂತಿ ಬಯಸುತ್ತದೆ. ಕನಿಷ್ಟ 7-8 ಗಂಟೆಗಳ ಕಾಲ ನಿದ್ರಿಸುವುದು ಮುಖ್ಯ. ಇದು ರೋಗಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕ ತಪ್ಪಿಸುವುದು
ಶಾಲೆಗಳು ಮತ್ತು ಆಟದ ಮೈದಾನಕ್ಕೆ ಹೋದಾಗ ಸೋಂಕಿತ ಮಕ್ಕಳೊಂದಿಗಿನ ಸಂಪರ್ಕವು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಮಕ್ಕಳು ಸೋಂಕಿತ ವ್ಯಕ್ತಿಗಳಿಂದ ದೂರ ಇರುವಂತೆ ನೋಡಿಕೊಳ್ಳಿ. ಮಾಸ್ಕ್ ಧರಿಸುವಂತೆ ಮಾಡಿ,
ಇನ್ಫ್ಲುಯೆನ್ಝ ಮತ್ತು ಫ್ಲೂ ಮೇಲೆ ಗಮನವಿರಲಿ
ಚಳಿಗಾಲದಲ್ಲಿ ಮಕ್ಕಳಲ್ಲಿ ವೈರಲ್ ಜ್ವರಗಳು ಕಾಣಿಸಿಕೊಳ್ಳುವುದು ಹೆಚ್ಚು. ಇದನ್ನು ನಿಯಂತ್ರಿಸಲು ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಕೊಡಿಸುವುದು ಮುಖ್ಯವಾಗುತ್ತದೆ.
ವೈದ್ಯರ ಸಮಾಲೋಚನೆ
ಮಗುವಿನಲ್ಲಿ ಅನಾರೋಗ್ಯದ ಲಕ್ಷಣಗಳನ್ನು ಕಂಡು ಬಂದಾಕ ಆರಂಭಿಕ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದರಿಂದ ರೋಗ ಉಲ್ಭಣಗೊಳ್ಳುವುದನ್ನು ತಡೆಯಬಹುದು.