
ಕರ್ನಾಟಕದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇವರುಗಳ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ೦ತಹ ಕಾಂಗ್ರೆಸ್ ಸರಕಾರವು ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳಿಗೆ ಯಜಮಾನಿಯ ಖಾತೆಗೆ ರೂಪಾಯಿ 2000/- ದಂತೆ ಜಮೆ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ ಈಗಾಗಲೇ ಕಾಂಗ್ರೆಸ್ ಸರಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು ಮೂರು ಕಂತುಗಳಲ್ಲಿ ಹಣ ಮನೆಯ ಯಜಮಾನಿಯ ಖಾತೆಗೆ ಜಮೆ ಆಗಿರುತ್ತದೆ. ಸುಳ್ಯ ತಾಲೂಕಿನಲ್ಲಿ ಒಟ್ಟು 83.44% ಶೇಕಡವಾರು ಫಲಾನುಭವಿಗಳು ಇದರ ಸೌಲಭ್ಯ ಪಡೆದುಕೊಂಡಿರುತ್ತಾರೆ. ಸುಳ್ಯ ತಾಲೂಕಿನಲ್ಲಿ ಒಟ್ಟು 27,635 ಪಡಿತರ ಚೀಟಿಯನ್ನು ಹೊಂದಿದವರಿದ್ದು, ಇದರಲ್ಲಿ ಈಗಾಗಲೇ 23,059 ಅರ್ಜಿಗಳು ಹಾಕಿದ್ದು, ಇಂದಿನವರೆಗೆ ಸುಮಾರು 22,801 ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆ ಮಂಜೂರಾತಿ ಆಗಿರುತ್ತದೆ. ಕಳೆದ ತಿಂಗಳು 19,966 ಮಂದಿ ಫಲಾನುಭವಿಗಳಿಗೆ ರೂಪಾಯಿ 2000/- ದಂತೆ ಒಟ್ಟು 3,99,32,000/- ಹಣ ಜಮೆ ಆಗಿದ್ದು, ಮೂರು ತಿಂಗಳ ಅವಧಿಯಲ್ಲಿ ಸುಳ್ಯ ತಾಲೂಕಿನಲ್ಲಿ ಒಟ್ಟು ರೂಪಾಯಿ 11,97,96,000/- ಫಲಾನುಭವಿಯ ಖಾತೆಗೆ ಜಮೆ ಆಗಿರುತ್ತದೆ.. ಸುಳ್ಯ ತಾಲೂಕಿನಲ್ಲಿ ಇನ್ನು ಕೆಲವು ಫಲಾನುಭವಿಗಳ ಖಾತೆಗೆ ಜಮೆ ಆಗಿರುವುದಿಲ್ಲ ಯಾಕೆಂದರೆ ಬ್ಯಾಂಕ್ ಖಾತೆ ನಿಷ್ಕ್ರಿಯ ಗೊಂಡಿರುವುದರಿಂದ ರಿನಿವಲ್ ಮಾಡದೇ ಬಾಕಿ ಇರುವುದು, ಆಧಾರ್ ಸೀಡಿಂಗ್ ಮಾಡದೇ ಇರುವುದು, ಎರಡು ಮೂರು ಬ್ಯಾಂಕಿನ ಖಾತೆಗಳ ಖಾತಾ ನಂಬ್ರ ನಮೂದಿಸಿರುವುದರಿಂದ, ಫಲಾನುಭವಿಗಳ ಅರ್ಜಿ ನೇರ ನಗದು ವರ್ಗಾವಣೆ (ಡಿಬಿಟಿ) ಯಲ್ಲಿ ಅಪ್ಲೋಡ್ ಮಾಡಿದ ಮೇಲೆ ಆಧಾರ್, ಬ್ಯಾಂಕ್ ಖಾತೆ ತಿದ್ದುಪಡಿ ಮಾಡಿರುವುದರಿಂದ, ಕೆವೈಸಿ ಸರಿಯಾಗಿ ನೊಂದಾಯಿಸದೆ ಇರುವುದರಿಂದ ಬಾಕಿ ಇರುತ್ತದೆ. ಅಂತಹ ಫಲಾನುಭವಿಗಳು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಇದರ ಸದಸ್ಯರು ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ನಾಯಕರಾದ ನಂದರಾಜ್ ಸಂಕೇಶ್ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಧರ್ಮಪಾಲ ಕೊಯಿಂಗಾಜೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.