ರಾಜು 10ನೇ ತರಗತಿಯಲ್ಲಿ ಓದುತ್ತಿರುವ ಹುಡುಗ. ಈತನಿಗೆ ಪಾಠಕ್ಕಿಂತ ಆಟದಲ್ಲೇ ಹೆಚ್ಚು ಆಸಕ್ತಿ. ತರಗತಿಯಲ್ಲಿ ಪಾಠ ನಡೆಯುವ ಸಂದರ್ಭದಲ್ಲಿ ಈತನ ಗಮನ ಮೈದಾನದೆಡೆಗೆ ಇರುತ್ತಿತ್ತು. ಓದಿನಲ್ಲಿ ತುಂಬಾ ಹಿಂದೆ ಇದ್ದ ಈತ ಮನೆಯಲ್ಲಿಯೂ ಪುಸ್ತಕ ಮುಟ್ಟಿ ನೋಡುತ್ತಿರಲಿಲ್ಲ. “ಪ್ರತೀ ದಿನ ಮುಂಜಾನೆ ಬೇಗ ಎದ್ದು ಓದಿದರೆ ಓದಿದ್ದು ಚೆನ್ನಾಗಿ ತಲೆಗೆ ಹತ್ತುತ್ತದೆ” ಎಂದು ತಂದೆ-ತಾಯಿ ಎಷ್ಟೇ ಹೇಳಿದರೂ ರಾಜು ಮಾತ್ರ ಪ್ರತೀ ದಿನ ಬೆಳಿಗ್ಗೆ 7:00 ಗಂಟೆ ಆದರೂ ಏಳುತ್ತಿರಲಿಲ್ಲ. ಆದರೆ ರಜಾ ದಿನಗಳಲ್ಲಿ ಮಾತ್ರ ಬೇಗ ಏಳುತ್ತಿದ್ದ. ಬೇಗ ಅಂದರೆ 4-5 ಗಂಟೆಗೆಲ್ಲಾ ಅಲ್ಲ, 6:00 ಗಂಟೆಗೆ ಏಳುತ್ತಿದ್ದ.
ಇವತ್ತು ಆದಿತ್ಯವಾರ. ಇವತ್ತು ಕೂಡ ರಾಜು ಪ್ರತೀ ರಜಾ ದಿನದಂತೆ 6:00 ಗಂಟೆಗೆ ಎದ್ದಿದ್ದ. ಇದನ್ನು ನೋಡಿದ ಆತನ ತಾಯಿ “ನಿನಗೆ ರಜೆ ಇರುವಾಗ ಮಾತ್ರ ಬೆಳಿಗ್ಗೆ ಬೇಗ ಎಚ್ಚರವಾಗುತ್ತದೆ. ಇವತ್ತು ಕೂಡ ಬಾರೀ ಬೇಗ ಎಚ್ಚರ ಆಗಿದೆ ನಿನಗೆ. ಯಾವ ಊರು ಸುತ್ಲಿಕ್ಕೆ ಹೋಗ್ಲಿಕ್ಕೆ ಉಂಟು” ಅಂತ ಕೇಳ್ತಾರೆ. ಅದಕ್ಕೆ ರಾಜು “ಎಲ್ಲಿಗೂ ಇಲ್ಲ ಅಮ್ಮ, ತೇಜು ಮೈದಾನಕ್ಕೆ ಬರಲು ಹೇಳಿದ್ದಾನೆ” ಎಂದು ಹೇಳಿದ. ಆಗ ರಾಜುವಿನ ತಾಯಿ “ಪರೀಕ್ಷೆ ಹತ್ತಿರ ಬಂತು, ಇನ್ನಾದರೂ ಓದಲು ಶುರು ಮಾಡು. ಹೀಗೆ ಊರೂರು ಸುತ್ತಿಕೊಂಡಿದ್ದರೆ ಪರೀಕ್ಷೆಯಲ್ಲಿ ಫೇಲ್ ಆಗಬೇಕಾದೀತು, ಗಮನವಿಟ್ಟು ಓದಿ ಪಾಸ್ ಆಗು” ಎಂದು ಬುದ್ಧಿವಾದ ಹೇಳುತ್ತಾರೆ. ಆದರೆ ರಾಜು ತಾಯಿಯ ಮಾತನ್ನು ಕೇಳಿಯೂ ಕೇಳದಂತೆ ಹಲ್ಲುಜ್ಜಿ, ಸ್ನಾನ ಮಾಡಿ, ಚಹಾ ಕುಡಿದು ಮೈದಾನಕ್ಕೆ ಹೋಗುತ್ತಾನೆ. ಮೈದಾನದಲ್ಲಿ ರಾಜು ಹಾಗೂ ತೇಜು ಆಟವಾಡುತ್ತಿದ್ದಾಗ ರಾಜುವಿನ ಕ್ಲಾಸ್ ಮೇಟ್ ಸುರೇಶ್ ಮೈದಾನಕ್ಕೆ ಓಡೋಡಿ ಬರುತ್ತಾನೆ. ಇದನ್ನು ನೋಡಿದ ರಾಜು “ಏನೋ ಸುರೇಶ ಇಷ್ಟು ವೇಗವಾಗಿ ಓಡೋಡಿ ಬರುತ್ತಿದ್ದೀಯಾ, ಓಟದ ಸ್ಪರ್ಧೆ ಏನಾದರೂ ಇದೆಯಾ…?” ಎಂದು ಕೇಳುತ್ತಾನೆ. ಅದಕ್ಕೆ ಸುರೇಶ್ “ಓಟದ ಸ್ಪರ್ಧೆ ಎಲ್ಲಾ ಬಿಡು, ನಾವೆಲ್ಲರೂ ಇಂದಿನಿಂದಲೇ ಓದಲು ಪ್ರಾರಂಭಿಸದೇ ಇದ್ದರೆ ಮುಂದಿನ ತಿಂಗಳು ಇದೇ ಮೈದಾನದಲ್ಲಿ 100 ಸುತ್ತು ಓಡಬೇಕಾಗುತ್ತದೆ” ಎಂದು ಹೇಳುತ್ತಾನೆ. ಅದಕ್ಕೆ ರಾಜು “ನಾವ್ಯಾಕೆ ಓಡಬೇಕು, ನಾವೇನು ತಪ್ಪು ಮಾಡಿದ್ದೇವೆ” ಎಂದು ಕೇಳುತ್ತಾನೆ. ಅದಕ್ಕೆ ಸುರೇಶ್ “ಅಯ್ಯೋ ರಾಜು ಬರುವ ತಿಂಗಳಿನಿಂದ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗುತ್ತವೆ ಎಂದು ಸರ್ ನಿನ್ನೆ ಹೇಳಿದ್ರಲ್ವಾ… ನಿನಗೆ ನೆನಪಿಲ್ವಾ…?” ಎಂದು ಕೇಳುತ್ತಾನೆ. ಸುರೇಶನ ಮಾತನ್ನು ಕೇಳಿದ ರಾಜುವಿಗೆ ಶಾಕ್ ಹೊಡೆದಂತಾಗುತ್ತದೆ. “ಅಯ್ಯೋ ಹೌದಲ್ವಾ… ನನಗೆ ನೆನಪೇ ಇರಲಿಲ್ಲ. ಆಟವೂ ಬೇಡ, ಏನೂ ಬೇಡ. ನಾನು ಈಗಲೇ ಹೋಗಿ ಓದಲು ಶುರು ಮಾಡುತ್ತೇನೆ” ಎನ್ನುತ್ತಾ ರಾಜು ಮನೆಯ ಕಡೆಗೆ ಓಡುತ್ತಾನೆ. ಮನೆಗೆ ಹೋಗಿ ಪುಸ್ತಕ ಬಿಡಿಸಿ ನೋಡಿದಾಗ ರಾಜುವಿನ ತಲೆಗೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಏಕೆಂದರೆ ರಾಜು 10ನೇ ತರಗತಿಯ ಪ್ರಾರಂಭದಿಂದ ಇಲ್ಲಿಯವರೆಗೆ ಒಮ್ಮೆಯೂ ಕೂಡ ಮನೆಯಲ್ಲಿ ಸರಿಯಾಗಿ ಪುಸ್ತಕ ಬಿಡಿಸಿ ಓದಿರಲಿಲ್ಲ. ಕ್ಲಾಸ್ ಪರೀಕ್ಷೆಯಲ್ಲೂ ಅವನು ಅನುತ್ತೀರ್ಣನಾಗುತ್ತಿದ್ದ. ಆದರೆ ಅವನಿಗೀಗ “ನಾನು ವಾರ್ಷಿಕ ಪರೀಕ್ಷೆಯಲ್ಲೂ ಅನುತ್ತೀರ್ಣನಾದರೆ ನನ್ನ ತಂದೆ-ತಾಯಿ ಇಷ್ಟು ವರ್ಷ ನನ್ನನ್ನು ಕಷ್ಟಪಟ್ಟು ಓದಿಸಿದ್ದಕ್ಕೂ ಬೆಲೆ ಇಲ್ಲದಂತಾಗುತ್ತದೆ. ತಂದೆ-ತಾಯಿ ನನ್ನ ಬಗ್ಗೆ ಕಟ್ಟಿದ ಕನಸುಗಳೆಲ್ಲಾ ನುಚ್ಚುನೂರಾಗುತ್ತದೆ” ಎನ್ನುವ ನೋವು ಹಾಗೂ ಭಯ ಶುರುವಾಯಿತು. ಆಗ ಆತನಿಗೆ “ಛೇ ನಾನು ತಂದೆ-ತಾಯಿಯ ಮಾತನ್ನು ಕೇಳಬೇಕಿತ್ತು. ತಂದೆ-ತಾಯಿ ಹೇಳಿದಂತೆ ಪ್ರತಿದಿನವೂ ಅಂದಿನ ಪಾಠಗಳನ್ನು ಅಂದೇ ಓದಿದ್ದರೆ ಇಂದು ಸುಲಭವಾಗುತ್ತಿತ್ತು” ಎಂದು ಮನಸ್ಸಿನಲ್ಲೇ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾ “ಪರೀಕ್ಷೆಗೆ ಇನ್ನೂ ಒಂದು ತಿಂಗಳು ಸಮಯಾವಕಾಶ ಇದೆ. ಇನ್ನಾದರೂ ಗಮನವಿಟ್ಟು ಓದಬೇಕು. ಇನ್ನು ಮುಂದಾದರೂ ತಂದೆ-ತಾಯಿಯ ಮಾತನ್ನು ಕೇಳಬೇಕು” ಎನ್ನುತ್ತಾ ಓದಲು ಪ್ರಾರಂಭಿಸುತ್ತಾನೆ…
✍️ಉಲ್ಲಾಸ್ ಕಜ್ಜೋಡಿ
- Thursday
- November 21st, 2024