
ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆಯಲ್ಲಿ ಡಿ. 10 ರಂದು ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ಇಂದಿರೇಶ ಗುಡ್ಡೆ ಇವರು ದೀಪ ಬೆಳಗಿಸುವುದರ ಮೂಲಕ ಪೋಷಕರ ದಿನಾಚರಣೆ ಹಾಗೂ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಜ್ಞಾನದೀಪ ಶಾಲೆಯ ಮಾತೃಭಾರತಿ ಸಂಸ್ಥೆಯ ಅಧ್ಯಕ್ಷರಾದ ಶಶಿಪ್ರಭ ಚಿದ್ಗಲ್ಲು, ಸಂಯೋಜಕಿಯವರಾದ ವಿದ್ಯಾ ಸರಸ್ವತಿ, ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು, ಶಿಕ್ಷಕ-ರಕ್ಷಕ ಸಂಘದ ಕಾರ್ಯದರ್ಶಿಯವರಾದ ಭಾರತಿ ಆರ್ನೋಜಿ ಉಪಸ್ಥಿತರಿದ್ದರು. ವಿಶಿಷ್ಟ ರೀತಿಯಲ್ಲಿ ಆಚರಿಸಿದ ಈ ಕ್ರೀಡಾಕೂಟದಲ್ಲಿ ಪೋಷಕರಿಗೆ ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ ಸ್ಪರ್ಧೆಗಳಲ್ಲದೆ, ಬಲೂನ್ ಒಡೆಯುವುದು, ಗೋಣಿಚೀಲ ಓಟ, ದಂಪತಿಗಳಿಗೆ ಮೂರು ಕಾಲಿನ ಓಟ, ಪತಿ ಪತ್ನಿಯನ್ನು ಹೊತ್ತುಕೊಂಡು ಹೋಗುವ ಓಟ, ಜಾನಪದ ಗೀತೆ ಸ್ಪರ್ಧೆ, ಸ್ಮರಣ ಶಕ್ತಿ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಗುಂಡು ಎಸೆತ, 100 ಮೀಟರ್ ಓಟ ಹಾಗೂ ಹಳೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕಾರಣೀಭೂತರಾದರು. ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು ಸ್ವಾಗತಿಸಿದರೆ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ದಿವ್ಯ ಕುಮಾರಿ ಬಾಳುಗೋಡು ವಂದಿಸಿದರು. ಶಾಲಾ ಶಿಕ್ಷಕಿಯವರಾದ ರೇಖಾ ಗುಡ್ಡೆಮನೆ ಹಾಗೂ ಗೌತಮಿ ಕೇಪಳಕಜೆ ಕಾರ್ಯಕ್ರಮ ನಿರೂಪಿಸಿದರು.