ಸುಬ್ರಹ್ಮಣ್ಯ: ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಎಸ್‌ಎಸ್‌ಪಿಯು ಕಾಲೇಜು ಪ್ರೌಢಶಾಲಾ ವಿಭಾಗ, ಸರಕಾರಿ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಬಾಲಕ-ಬಾಲಕಿಯ ಖೋ ಖೋ ಪಂದ್ಯಾಟ ನಡೆಯಿತು. ಪ್ರಾಥಮಿಕ ಶಾಲಾ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಅದೇ ರೀತಿ ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ತಾಲೂಕು ಚಾಂಪಿಯನ್ ಆಯಿತು. ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಎಣ್ಮೂರು ಸರಕಾರಿ ಪ್ರೌಢಶಾಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನ ಗೆದ್ದುಕೊಂಡಿತು. ಪ್ರಾಥಮಿಕ ಶಾಲಾ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ನಡೆದ ಜಿದ್ದಾಜಿದ್ದಿನಿಂದ ಅಂತಿಮ ಪಂದ್ಯದಲ್ಲಿ ವೀರೋಚಿತ ಸೋಲು ಕಂಡ ಸುಬ್ರಹ್ಮಣ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು.ಅದೇ ರೀತಿ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಐವರ್ನಾಡು ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಬಾಲಕಿ ತಂಡ ಹಾಗೂ ಬಾಲಕರ ವಿಭಾಗದಲ್ಲಿ ಎಣ್ಮೂರು ಸರಕಾರಿ ಪ್ರೌಢಶಾಲಾ ಬಾಲಕರ ತಂಡ ದ್ವಿತೀಯ ಸ್ಥಾನಿಯಾಯಿತು.
ವೈಯಕ್ತಿಕ ಪುರಸ್ಕಾರ:
ಪ್ರಾಥಮಿಕ ಶಾಲಾ ಬಾಕಿಯರ ವಿಭಾಗದಲ್ಲಿ ಹರ್ಷಪ್ರೀಯಾ ಐವರ್ನಾಡು(ಸವ್ಯಸಾಚಿ), ಭಾಗ್ಯಶ್ರೀ ಐವರ್ನಾಡು(ಉತ್ತಮ ಓಟಗಾರ್ತಿ), ವೀಕ್ಷಾ ಸುಬ್ರಹ್ಮಣ್ಯ(ಉತ್ತಮ ಹಿಡಿತಗಾರ್ತಿ), ಬಾಲಕರ ವಿಭಾಗದಲ್ಲಿ ಅನೂಪ್ ಕೆ.ಪಿ (ಸವ್ಯಸಾಚಿ),ಮಹಮ್ಮದ್ ಶೆಹಾಬ್ ಐವರ್ನಾಡು(ಉತ್ತಮ ಓಟಗಾರ),ಗೌತಮ್ ಕೆ.ಯು ಸುಬ್ರಹ್ಮಣ್ಯ(ಉತ್ತಮ ಹಿಡಿತಗಾರ) ವೈಯಕ್ತಿಕ ಬಹುಮಾನ ಪಡೆದರು.
ವಿಜೇತರಿಗೆ ಬಹುಮಾನವನ್ನು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೋಭಾ ಗಿರಿಧರ್, ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ನಾಯಕ್, ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ, ಎಸ್‌ಎಸ್‌ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್, ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿನೇಶ್ ಶಿರಾಡಿ, ಶಿಕ್ಷಣ ಸಂಯೋಜಕಿ ಸಂಧ್ಯಾ, ಸುಬ್ರಹ್ಮಣ್ಯ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯಗುರು ಮಾಧವ ಮೂಕಮಲೆ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ್, ಎಸ್‌ಎಸ್‌ಪಿಯು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕಿ ಸ್ಮಿತಾ, ದೈಹಿಕ ಶಿಕ್ಷಣ ಶಿಕ್ಷಕ ರಾಮ್‌ಪ್ರಸಾದ್, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಸವಿತಾ ಶೆಟ್ಟಿ ಬಹುಮಾನ ವಿತರಿಸಿದರು.