ಜೀವನದಲ್ಲಿ ಸಂತೋಷದಿಂದ ಬದುಕಬೇಕು ಎಂದು ಆಸೆಪಡುವ ನಾವು ಎಲ್ಲರೆದುರು ನಗುನಗುತ್ತಾ ಬದುಕಿದರೂ ಬದುಕಿನ ಕಷ್ಟ-ನೋವುಗಳನ್ನು ನೆನೆದು ಒಳಗೊಳಗೆ ಕಣ್ಣೀರು ಸುರಿಸಿದ್ದೇ ಹೆಚ್ಚು…ಬದುಕಿನಲ್ಲಿ ಎಷ್ಟೇ ಕಷ್ಟಗಳು ಬಂದರೂ ಧೈರ್ಯದಿಂದ ಎದುರಿಸಬೇಕು ಎಂದು ಇತರರನ್ನು ಹುರಿದುಂಬಿಸುವ ನಾವು ನಮ್ಮ ಬದುಕಿನಲ್ಲಿ ಕಷ್ಟಗಳು ಬಂದಾಗ ಭಯಪಟ್ಟು ಕುಳಿತಿದ್ದೇ ಹೆಚ್ಚು…ನಮ್ಮಲ್ಲಿ ಎಲ್ಲವೂ ಇದ್ದಾಗ ನಮ್ಮವರು ಎಂದು ಬಂದವರ ನೋಡಿ ಖುಷಿಪಟ್ಟ ನಾವು ನಮ್ಮಲ್ಲಿ ಏನೂ ಇಲ್ಲವಾದಾಗ ಹಿಂತಿರುಗಿಯೂ ನೋಡದೇ ಹೊರಟುಹೋದ ಆ ನಮ್ಮವರ ನೋಡಿ ಕಣ್ಣೀರು ಸುರಿಸಿದ್ದೇ ಹೆಚ್ಚು…ಬಾಲ್ಯದಿಂದಲೇ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಹೊತ್ತು ಬಂದ ನಾವು ಬದುಕು ಏನೆಂದು ಅರ್ಥವಾದಾಗ ಕೈಗೆಟುಕದ ಆ ಕನಸುಗಳನ್ನು ಕೈಬಿಟ್ಟು ಸಿಕ್ಕ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸಿದ್ದೇ ಹೆಚ್ಚು…ಬದುಕು ನಾವು ಯೋಚಿಸಿದಂತೆಯೇ ನಡೆಯುತ್ತದೆ ಎಂದು ತಿಳಿದಿದ್ದ ನಾವು ಬದುಕು ನಮ್ಮ ಯೋಚನೆಗೂ ಮೀರಿದ್ದು ಎಂದು ತಿಳಿದಾಗ ಮೌನವಾಗಿದ್ದೇ ಹೆಚ್ಚು…ಒಟ್ಟಿನಲ್ಲಿ ಬದುಕಿನ ಈ ಪಯಣದಲ್ಲಿ ಕೆಲವೊಂದನ್ನು ಪಡೆದುಕೊಂಡು, ಕೆಲವೊಂದನ್ನು ಕಳೆದುಕೊಂಡು, ಕಷ್ಟದಲ್ಲೂ ಸುಖವನ್ನು ಹುಡುಕುತ್ತಾ, ನೋವಿನಲ್ಲೂ ನಗುವನ್ನು ಹುಡುಕುತ್ತಾ ಸಾಗುವುದೇ ಜೀವನ, ನಮ್ಮ ಯೋಚನೆಗೂ ಮೀರಿದ್ದು ಈ ಬದುಕಿನ ಪಯಣ…
✍️ಉಲ್ಲಾಸ್ ಕಜ್ಜೋಡಿ