ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಆ.21 ರಂದು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಮಾಲೋಚನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರು “ಕರ್ನಾಟಕ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಬಗ್ಗೆ ಮತ್ತೆ ರಾಜ್ಯ ಸರ್ಕಾರ ಹುನ್ನಾರ ನಡೆಸುತ್ತಿದ್ದು, ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳ ಜನರು ಪ್ರತೀದಿನ ಭಯದಿಂದ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಸ್ತೂರಿ ರಂಗನ್ ವರದಿಯಿಂದ ಇದು ದೃಢಪಟ್ಟಿದೆ. ಪಶ್ಚಿಮ ಘಟ್ಟ ಸೂಕ್ಷ್ಮ ವಲಯಗಳಲ್ಲಿ ವಾಸಿಸುತ್ತಿರುವ ಜನರು ಕಳೆದ 15 ವರ್ಷಗಳಿಂದ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ಆದರೂ ಈ ವರದಿಯ ಬಗ್ಗೆ ಸಂಬಧಪಟ್ಟ ಅಧಿಕಾರಿಗಳು ಲಿಖಿತ ಮಾಹಿತಿ ನೀಡದಿರುವುದು ವಿಪರ್ಯಾಸ. ಇದೀಗ ರಾಜ್ಯ ಸರ್ಕಾರ ಮತ್ತೆ ಈ ವರದಿಯ ಬಗ್ಗೆ ತಕರಾರು ಎತ್ತಿದ್ದು, ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸದೇ ಯಥಾವತ್ತಾಗಿ ಮತ್ತು ರೈತರ ಹಿತಾಸಕ್ತಿಗೆ ವಿರುದ್ದವಾಗಿ ಕ್ರಮ ಕೈಗೊಳ್ಳುತ್ತಿದ್ದು, ಇದನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯು ಬೃಹತ್ ಪ್ರತಿಭಟನೆ ನಡೆಸಲಿದೆ. ಈ ಹಿಂದೆ ಎಲ್ಲಾ ಬಾಧಿತ ಗ್ರಾಮಗಳಲ್ಲಿ ನಡೆದ ಗ್ರಾಮ ಪಂಚಾಯತ್ ಸಭೆಗಳಲ್ಲಿ ಈ ವರದಿಯನ್ನು ಜಾರಿಗೊಳಿಸುವುದು ಬೇಡ ಎಂಬ ನಿರ್ಧಾರ ಕೈಗೊಂಡಿದ್ದು, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸಭೆಗಳಲ್ಲಿಯೂ ಈ ವರದಿಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಈ ವರದಿಯಿಂದ ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ಸಮಸ್ಯೆ ಉಂಟಾಗಿದ್ದು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಆತಂಕದಿಂದ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸದಸ್ಯರಾದ ಜಯಪ್ರಕಾಶ್ ಕೂಜುಗೋಡು, ಹರೀಶ್ ಕಲ್ಲುಗುಂಡಿ, ಶೇಖರಪ್ಪ, ಅಚ್ಯುತ ಗೌಡ ಸುಬ್ರಹ್ಮಣ್ಯ, ಗಿರೀಶ್ ಪೈಲಾಜೆ, ಶ್ರೀಕಾಂತ್.ಎನ್, ಸಂತೋಷ್.ಎಂ, ಚಿದಾನಂದ ಗೌಡ ದೇವ್ಪಾಲು, ದಿಲೀಪ್ ಉಪ್ಪಳಿಕೆ, ಗುತ್ತಿಗಾರು ಚರ್ಚ್ ನ ಗುರುಗಳಾದ ಆದರ್ಶ ಜೊಸೆಫ್ ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)
- Thursday
- November 21st, 2024