ಸುಳ್ಯ ಕಂದಾಯ ನಿರೀಕ್ಷಕರ ಕಛೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಆಡಳಿತಾಧಿಕಾರಿ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಆ. 19 ರಂದು ನಡೆದಿದೆ. ಅರಂತೋಡು, ತೊಡಿಕಾನ ಹಾಗೂ ಸಂಪಾಜೆ ಗ್ರಾಮದ ಗ್ರಾಮ ಆಡಳಿತಾಧಿಕಾರಿಯಾಗಿರುವ ಮಿಯಾಸಾಬ್ ಮುಲ್ಲಾ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಲೋಕಾಯುಕ್ತ ಎಸ್ ಪಿ ಸೈಮನ್ ಆಗಮಿಸಿ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ಹಿನ್ನಲೆ.
ಅರಂತೋಡು ಗ್ರಾಮದ ಹರಿಪ್ರಸಾದ್ ಅಡ್ತಲೆ ತಮ್ಮ ಸ್ಥಳದ ಖಾತೆ ಬದಲಾವಣೆ ಅರ್ಜಿ ಸಲ್ಲಿಸಿದ್ದರು. ಇದನ್ನು ಸರಿಮಾಡಿಕೊಡಲು ಹಣ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದ್ದು, ಆ.19 ರಂದು ಆ ಕಡತಗಳನ್ನು ಕಂದಾಯ ನಿರೀಕ್ಷಕರ ಕಛೇರಿಗೆ ತಂದು ಅಲ್ಲಿ ಭೇಟಿ ಮಾಡಲು ಗ್ರಾಮ ಆಡಳಿತಾಧಿಕಾರಿ ತಿಳಿಸಿದ್ದರು.
ಈ ಮಧ್ಯೆ ಲೋಕಾಯುಕ್ತ ಅಧಿಕಾರಿಗಳನ್ನು ಭೇಟಿ ಮಾಡಿದ್ದ ಹರಿಪ್ರಸಾದ್ ಅಡ್ತಲೆ ತಮ್ಮ ಸ್ಥಳದ ಖಾತೆ ಬದಲಾವಣೆ ಮಾಡಲು ಗ್ರಾಮ ಆಡಳಿತಾಧಿಕಾರಿ ಹಣ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದರು. ದೂರಿಗೆ ಸ್ಪಂದಿಸಿದ ಲೋಕಾಯುಕ್ತ ಅಧಿಕಾರಿಗಳು ಕೇಸು ದಾಖಲಿಸಿ, ದಾಳಿಗೆ ಬೇಕಾದ ಸಿದ್ಧತೆ ಮಾಡಿದ್ದರು. ಗ್ರಾಮ ಆಡಳಿತಾಧಿಕಾರಿ ಹೇಳಿದಂತೆ ಕಂದಾಯ ನಿರೀಕ್ಷರ ಕಛೇರಿಗೆ ಹರಿಪ್ರಸಾದ್ ಅವರು ಲೋಕಾಯುಕ್ತರು ನೀಡಿದ ಹಣ ಸಹಿತ ಆಗಮಿಸಿದ್ದರು. ಅಲ್ಲಿ ಈ ಹಣವನ್ನು ಮಿಯಾಸಾಬ್ ಮುಲ್ಲಾ ಇವರಿಗೆ ನೀಡಲಾಯಿತು. ಈ ಸಮಯಕ್ಕಾಗಿ ಕಾದಿದ್ದ ಅಧಿಕಾರಿಗಳು ತಕ್ಷಣವೇ ವಶಕ್ಕೆ ಪಡೆದರು. ಈ ದಾಳಿ ಸಂದರ್ಭದಲ್ಲಿ ಡಿವೈಎಸ್ ಪಿಗಳಾದ ಕಲಾವತಿ , ಚೆಲುವರಾಜ್ , ಅಮಾನುಲ್ಲಾ ಇನ್ಪೆಕ್ಟರ್ , ಅಧಿಕಾರಿಗಳಾದ ಮಹೇಶ್ , ವಿನಾಯಕ್ , ವೈಶಾಲಿ,ರಾಜಪ್ಪ, ರಾಧಾಕೃಷ್ಣ , ಬಾಲರಾಜ್ , ವಿವೇಕ್ , ಯತೀಶ್ , ಪ್ರವೀಣ್ , ಶರತ್ ಸಿಂಗ್ , ಸುರೇಂದ್ರ , ಪಂಪಣ್ಣ , ರಾಜಶೇಖರ್ , ನವೀನ್ ದುಂಡಪ್ಪ ಮತ್ತಿತರರು ಬಾಗಿಯಾಗಿದ್ದರು.