ಸುಳ್ಯ ನಗರದ ತ್ಯಾಜ್ಯವನ್ನು ಕಲ್ಚರ್ಪೆಯ ತ್ಯಾಜ್ಯ ನಿರ್ವಹಣಾ ಘಟಕದ ಹೊರಗೆ ಜನವಸತಿ ಪ್ತದೇಶದ ಸಮೀಪದ ಅರಣ್ಯದಲ್ಲಿ ಹಾಕಲಾಗಿದ್ದು ಈ ತ್ಯಾಜ್ಯವನ್ನು ಎರಡು ದಿನಗಲ್ಲಿ ತೆರವು ಮಾಡದಿದ್ದರೇ ಕಸವನ್ನು ನಾವೇ ತಂದು ನಗರ ಪಂಚಾಯತ್‌ನ ಮುಂಭಾಗದಲ್ಲಿ ಹಾಕಿ ಪ್ರತಿಭಟನೆ ನಡೆಸುವುತ್ತೇವೆ ಎಂದು ಕಲ್ಚರ್ಪೆ ಪರಿಸರ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯ ಅಶೋಕ್ ಪೀಚೆ 2007 ರಲ್ಲಿ ಕಲ್ಬರ್ಪೆಯಲ್ಲಿ ಸುಳ್ಯ ನಗರ ಪಂಚಾಯತ್‌ನ ತ್ಯಾಜ್ಯ ಘಟಕ ಸ್ಥಾಪಿಸಲು ಮುಂದಾದಾಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಕಾನೂನು ಹೋರಾಟವನ್ನೂ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಅಲ್ಲಿ ವೈಜ್ಞಾನಿಕವಾದ ಮತ್ತು ವ್ಯವಸ್ಥಿತವಾದ ಕಸ ವಿಲೇವಾರಿ ಆಗಲಿಲ್ಲ. ಇತ್ತೀಚೆಗೆ ಮೆಷಿನರಿ ಅಳವಡಿಸಿದರೂ ಅಲ್ಲಿ ಎಲ್ಲಾ ಕಸಗಳು ವಿಲೇವಾರಿ ಆಗುತ್ತಿಲ್ಲ.ಇದೀಗ ತ್ಯಾಜ್ಯವನ್ನು ತಂದು ಕಂಪೌಂಡ್‌ನ ಹೊರಗೆ ಅರಣ್ಯದಲ್ಲಿ ಸುರಿಯಲಾಗಿದೆ. ಇದರಿಂದ ಪರಿಸರದಲ್ಲಿ ವಿಪರೀತ ವಾಸನೆ, ಸೊಳ್ಳೆಗಳ ಕಾಟ ಆರಂಭವಾಗಿದೆ. ಇದನ್ನು ತೆರವು ಮಾಡಲು ಕ್ರಮ ಕೈಗೊಳ್ಳುವುದಾಗಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಹಾಗೂ ನಗರ ಪಂಚಾಯತ್ ಮಾಜಿ ಅಧ್ಯಕ್ಷರು ಭರವಸೆ ನೀಡಿದ್ದರೂ ತೆರವು ಮಾಡಿಲ್ಲ , ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಲ್ಲಿ ಒಂದು ದಿನದ ವಾಸ್ತವ್ಯ ಕಾರ್ಯಮಾಡಲಿ ಅವರ ವಾಸ್ತವ್ಯದ ಖರ್ಚು ನಾವೇ ವಹಿಸುತ್ತೇವೆ. ಆಗ ಅವರಿಗೆ ನಮ್ಮ ಕಷ್ಟ, ನೋವು ಅರ್ಥವಾಗುತ್ತದೆ ಎಂದು ಅವರು ಹೇಳಿದರು.
ಹೋರಾಟ ಸಮಿತಿಯ ಅಧ್ಯಕ್ಷ ಯೂಸೂಫ್ ಅಂಜಿಕಾರ್ ಮಾತನಾಡಿ ಕಲ್ಬರ್ಪೆಯಲ್ಲಿ ತ್ಯಾಜ್ಯ ಘಟಕದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಹಾಗೂ ನಿರ್ವಹಣೆ ಆಗದ ಕಾರಣ ನಿರಂತರ ಸಮಸ್ಯೆ ಉಂಟಾಗುತಿದೆ.ತ್ಯಾಜ್ಯದಿಂದ ಕಲುಷಿತ ನೀರು ಪರಿಸರದ ನೀರಿನ ಮೂಲಗಳಿಗೆ ಸೇರಿ ಪಯಸ್ವಿನಿ ನದಿ ಸೇರಿ ನೀರು ಕಲುಷಿತ ಆಗುತಿದೆ. ಅದನ್ನೇ ಸುಳ್ಯದ ಜನತೆ ಕುಡಿಯುವ ಸ್ಥಿತಿ ಉಂಟಾಗಿದೆ ಎಂದು ಹೇಳಿದರು. ಈಗ ಅಲ್ಲಿ ಹಾಕಿದ ತ್ಯಾಜ್ಯವನ್ನು ತೆರವು ಮಾಡದೇ ಇದ್ದರೆ ಕಲ್ಚರ್ಪೆಯ ಎಲ್ಲಾ ಜನರು ಸೇರಿ ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಅಧಿಕಾರಿಗಳು, ಜನಪ್ರತಿನಿಧಿಗಳು ವಾಸ್ತವ್ಯ ಮಾಡಲಿ:
ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಸಮಿತಿಯ ಉಪಾಧ್ಯಕ್ಷರಾದ ಕೆ.ಗೋಕುಲ್‌ದಾಸ್ ಮಾತನಾಡಿ ‘ಅಧಿಕಾರಿಗಳು, ಜನಪ್ರತಿನಿಧಿಗಳು, ಕಲ್ಪರ್ಪೆಗೆ ಬಂದು ವಾಸ್ತವ್ಯ ಮಾಡಿ ಅಲ್ಲಿನ ಜನರ ಸಮಸ್ಯೆಯನ್ನು ಅರಿಯಲಿ ಎಂದು ಆಗ್ರಹಿಸಿದರು. ಕಲ್ಪರ್ಪೆಯ ತ್ಯಾಜ್ಯ ಘಟಕದಿಂದ ಜನರಿಗೆ ಆಗುವ ಸಮಸ್ಯೆಯನ್ನು ಸರಿಪಡಿಸದೇ ಇದ್ದರೆ ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಹೇಳಿದರು.ಇಲ್ಲಿ ಬರ್ನಿಂಗ್ ಮೆಷಿನ್ ಅಳವಡಿಸಲಾಗಿದ್ದರೂ ನಗರದ ತ್ಯಾಜ್ಯವನ್ನು ಪೂರ್ತಿಯಾಗಿ ಬರ್ನ್ ಮಾಡಲಾಗುತ್ತಿಲ್ಲ. ಕಸವನ್ನು ತಂದು ಸುರಿದ ಕಾರಣ ಕಲ್ಚರ್ಪೆಯ ಸುಮಾರು 60ಕ್ಕೂ ಹೆಚ್ಚು ಮನೆಯವರಿಗೆ ಸಮಸ್ಯೆ ಆಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸ್ಥಳೀಯರಾದ ವೆಂಕಟೇಶ್ ಕಲ್ಚರ್ಪೆ, ತವೀದ್ ಕಲ್ಚರ್ಪೆ ಮತ್ತಿತರರು ಉಪಸ್ಥಿತರಿದ್ದರು.