ಇತ್ತೀಚೆಗೆ ಸುಳ್ಯ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ,ಇದೀಗ ಸುಳ್ಯ ತಾಲೂಕಿನ ಸಂಪಾಜೆಯಲ್ಲೂ ತಡರಾತ್ರಿ ಹೊಟೇಲ್ವೊಂದಕ್ಕೆ ಕಳ್ಳರು ನುಗ್ಗಿರುವ ಘಟನೆ ವರದಿಯಾಗಿದೆ.
ಸಂಪಾಜೆ ಚೆಕ್ ಪೋಸ್ಟ್ ಬಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಚೆಕ್ ಪೋಸ್ಟ್ ಬಳಿ ಇರುವ ಹೊಟೇಲ್ ಸ್ವಾಗತ್ ಗೆ ಕಳ್ಳರು ನುಗ್ಗಿ ಕೈಚಳಕ ತೋರಲು ಪ್ರಯತ್ನ ಪಟ್ಟಿದ್ದಾರೆ. ಹೊಟೇಲ್ ಮಾಲೀಕ ಚೆನ್ನಪ್ಪ ಅನಾರೋಗ್ಯದಿಂದ ಒಂದು ವಾರಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಯಾರು ಇಲ್ಲದ ಸಂದರ್ಭದಲ್ಲಿ ಹಿಂಬದಿ ಬಾಗಿಲಿನಿಂದ ಬೀಗ ಒಡೆದು ಕಳ್ಳರು ನುಗ್ಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ವೇಳೆ ಶಬ್ದ ಕೇಳಿದ ಪಕ್ಕದ ಮನೆಯವರು ತಕ್ಷಣ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಕೂಡಲೇ ಕೊಡಗು-ಸಂಪಾಜೆ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದರು. ಆದರೆ ಅವರು ಬರುವುದರೊಳಗೆ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.