✍️ಉಲ್ಲಾಸ್ ಕಜ್ಜೋಡಿ
ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಹಾನಿಗಳು ಸಂಭವಿಸಿದಾಗ, ಮೂರ್ನಾಲ್ಕು ಗ್ರಾಮಗಳು ಆ ಜಲಪ್ರಳಯಕ್ಕೆ ಸಿಲುಕಿ ಅಪಾರ ಹಾನಿ ಸಂಭವಿಸಿದರೆ ಎಷ್ಟೇ ವರ್ಷಗಳು ಕಳೆದರೂ ಆ ಕರಾಳ ನೆನಪುಗಳು ಜನರ ಮನಸ್ಸಿನಿಂದ ಎಂದಿಗೂ ಮರೆಯಾಗುವುದಿಲ್ಲ.
ಕಳೆದ ಒಂದು ವರ್ಷದ ಹಿಂದೆ ಅಂದರೆ 2022ರ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ಹರಿಹರ ಪಲ್ಲತ್ತಡ್ಕ ಹಾಗೂ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿ ಅಕ್ಷರಶಃ ನಲುಗಿ ಹೋಗಿತ್ತು. ಏಕೆಂದರೆ ಅಂದು ಸುರಿದ ಭಾರೀ ಮಳೆಗೆ ಹಲವು ಕಡೆಗಳಲ್ಲಿ ಭೂಕುಸಿತಗಳು ಸಂಭವಿಸುವುದರ ಜೊತೆಗೆ ಹೊಳೆಗಳಲ್ಲಿ ನೀರು ಉಕ್ಕಿ ಹರಿದಿತ್ತು. ಕಡಮಕಲ್ಲು ಎಸ್ಟೇಟ್ ಮೇಲ್ಬಾಗದಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸುವುದರ ಜೊತೆಗೆ ಭಾರೀ ಪ್ರಮಾಣದ ಮಣ್ಣು ಹಾಗೂ ಮರಗಳು ನೀರಿನಲ್ಲಿ ಕೊಚ್ಚಿ ಬಂದಿದ್ದವು. ಹರಿಹರ ಪಲ್ಲತ್ತಡ್ಕ ಸೇತುವೆಯ ಕೆಳಗೆ ಮರಗಳು ಸಿಲುಕಿ ಪೇಟೆ ಜಲಾವೃತಗೊಂಡು 2 ಅಂಗಡಿಗಳು ಕೊಚ್ಚಿ ಹೋಗಿದ್ದವು. ಹಲವು ಮನೆಗಳಿಗೆ, ಅಂಗಡಿಗಳಿಗೆ, ಕೃಷಿಭೂಮಿಗಳಿಗೆ ನೀರು ನುಗ್ಗಿ ಅಪಾರ ಹಾನಿ ಹಾಗೂ ನಷ್ಟ ಸಂಭವಿಸಿತ್ತು. ನೀರಿನ ರಭಸಕ್ಕೆ ಕಲ್ಮಕಾರು ಎಂಬಲ್ಲಿ ಸೇತುವೆ ಮುರಿಯಿತು. ಹಾಗೂ ಹಲವು ಕಡೆಗಳಲ್ಲಿ ಚಿಕ್ಕಪುಟ್ಟ ಪಾಲಗಳು ನೀರಿನಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಕಂಡು ಕೇಳರಿಯದ ಈ ಭೀಕರ ಜಲಪ್ರಳಯದಿಂದಾಗಿ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಐನೆಕಿದು, ಬಾಳುಗೋಡು, ಕಲ್ಮಕಾರು ಭಾಗಗಳಲ್ಲಿ ಹಾನಿಗಳು ಸಂಭವಿಸಿದ್ದು, ಹರಿಹರ ಪಲ್ಲತ್ತಡ್ಕ ಪೇಟೆಯಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಹಾಗೂ ಉಪ್ಪುಕಳ ಎಂಬಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಇನ್ನೂ ಹೆಚ್ಚಿನ ಕಡೆಗಳಲ್ಲಿ ಪರಿಹಾರ ಕಾರ್ಯಗಳು ಪೂರ್ಣಗೊಂಡಿಲ್ಲ. ಕಲ್ಮಕಾರು ಪೇಟೆಯ ಸೇತುವೆ ಕಡಿತಗೊಂಡಿದ್ದು, ತಾತ್ಕಾಲಿಕವಾಗಿ ಗೋಣಿಚೀಲ ಇರಿಸಲಾಗಿದೆ. ಈ ಭಾಗದ ಬಹುತೇಕ ಸೇತುವೆಗಳಿಗೆ ಹಾನಿಯಾಗಿದ್ದು, ಉಪ್ಪುಕಳ, ಶೆಟ್ಟಿಕಟ್ಟ, ಬೆಂಡೋಡಿ, ಕಲ್ಮಕಾರು, ಪದಕ, ಹರಿಹರ ಪಲ್ಲತ್ತಡ್ಕ, ದೋಲನಮನೆ ಭಾಗದಲ್ಲಿ ಶಾಶ್ವತ ಪರಿಹಾರ ಕಾರ್ಯಗಳು ನಡೆಯಬೇಕಿದೆ.
ಭೀಕರ ಮಳೆಯಿಂದಾಗಿ ಹಲವು ಕೃಷಿಭೂಮಿಗಳಿಗೆ ನೀರು ನುಗ್ಗಿ ಅಪಾರ ಹಾನಿ ಹಾಗೂ ನಷ್ಟ ಸಂಭವಿಸಿದ್ದು, ಪರಿಹಾರದ ಹಣ ಇನ್ನೂ ರೈತರ ಕೈ ಸೇರಿಲ್ಲ.
ಕಲ್ಮಕಾರಿನ ಗುಳಿಕ್ಕಾನ ಎಂಬಲ್ಲಿ ಭೂಕುಸಿತದ ಭೀತಿಯಲ್ಲಿರುವ ಸಂತ್ರಸ್ತರಿಗೆ ಬದಲಿ ನಿವೇಶನ ಇನ್ನೂ ದೊರಕದೇ ಇರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಅಲ್ಲಿನ ಜನರು ಭಯದಿಂದ ಜೀವನ ನಡೆಸಬೇಕಾಗಿದೆ. ಅದ್ದರಿಂದ ಸಂಪರ್ಕ ಸೇತುವೆ, ರಸ್ತೆ ದುರಸ್ತಿ ಮುಂತಾದ ಪರಿಹಾರ ಕಾರ್ಯಗಳಿಗೆ ಸರಕಾರದ ಮಟ್ಟದಿಂದಲೇ ವಿಶೇಷ ಅನುದಾನದ ಅಗತ್ಯವಿದೆ.
✍️ಉಲ್ಲಾಸ್ ಕಜ್ಜೋಡಿ