
ಕೊರೋನ ವೈರಸ್ ಮಹಾಮಾರಿಯ ಹಿನ್ನೆಲೆಯಲ್ಲಿ ಹಲವಾರು ತಿಂಗಳುಗಳಿಂದ ಮಸೀದಿ ಸಾಮೂಹಿಕ ಪ್ರಾರ್ಥನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಲಾಕ್ಡೌನ್ ಸಡಿಲಿಕೆಯ ನಂತರ ಕೆಲವೇ ಕೆಲವು ಮಸೀದಿಗಳಲ್ಲಿ ಸರಕಾರದ ಆದೇಶವನ್ನು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿ ಪ್ರಾರ್ಥನೆಯನ್ನು ನಿರ್ವಹಿಸಲು ಪ್ರಾರಂಭಿಸಿದರು. ಇದರ ನಡುವೆ ಮುಸಲ್ಮಾನ ಬಾಂಧವರ ಬಕ್ರಿದ್ ಹಬ್ಬ ಆ.1ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಮತ್ತು ಮುಸ್ಲಿಂ ಮುಖಂಡರ ಸಭೆ ಜು.28 ರಂದು ನಡೆಯಿತು.
ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಈ ಸಂದರ್ಭದಲ್ಲಿ ಮಾತನಾಡಿ ಧಾರ್ಮಿಕ ಆಚರಣೆಗಳಿಗೆ ಯಾವುದೇ ತೊಂದರೆಯಿಲ್ಲ ಆದರೆ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಆದೇಶಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಕೇವಲ 50 ಜನರು ಸೇರಿಕೊಂಡು ನಮಾಜ್ ಕಾರ್ಯ ನಿರ್ವಹಿಸಬೇಕು. ಸಾಮಾಜಿಕ ಅಂತರ, ಮಸೀದಿಯನ್ನು ಸ್ಯಾನಿಟೈಸ್ ಮಾಡುವುದು, ಹೆಚ್ಚಿನ ಸಮಯ ಮಸೀದಿ ಆವರಣದಲ್ಲಿ ಜನ ಸೇರದೇ ಇರುವ ಹಾಗೆ ನೋಡಿಕೊಳ್ಳುವುದು, ಪರಸ್ಪರ ಹಬ್ಬ ಆಲಿಂಗನ ಮಾಡಿಕೊಳ್ಳದೆ ಇರುವುದು ಇವುಗಳನ್ನು ಅನುಸರಿಸಿ ಸಮಾಜದ ಮತ್ತು ತಮ್ಮ ಆರೋಗ್ಯದ ರಕ್ಷಣೆಯೊಂದಿಗೆ ಹಬ್ಬವನ್ನು ಆಚರಿಸಿಕೊಳ್ಳುವಂತೆ ಹೇಳಿದರು. ಇದಕ್ಕೆ ಒಪ್ಪಿದ ಮುಖಂಡರು ಈಗಾಗಲೇ ನಮ್ಮನಮ್ಮ ಜಮಾಅತ್ ಗಳಲ್ಲಿ ನಮಾಜ್ ನಿರ್ವಹಿಸಲು ಒಂದು ಮನೆಯಿಂದ ಒಬ್ಬ ವ್ಯಕ್ತಿಗೆ ಮಾತ್ರ ಪಾಸ್ ನೀಡಲಾಗಿದ್ದು, ಸಣ್ಣ ಮಕ್ಕಳು ಹಾಗೂ ವಯೋವೃದ್ಧರಿಗೆ ಮಸೀದಿಗೆ ಬಾರದಂತೆ ನಿರ್ದೇಶನ ನೀಡಲಾಗಿದ್ದು, ಸೂಚಿಸಿರುವ ಎಲ್ಲಾ ರೀತಿ ನಿಯಮಗಳನ್ನು ಪಾಲಿಸಿ ಶಾಂತಿಯುತ ಹಬ್ಬ ಆಚರಿಸುವುದಾಗಿ ಹೇಳಿದರು. ಠಾಣಾಧಿಕಾರಿ ಹರೀಶ ಮಾತನಾಡಿ ಸುಳ್ಯ ಶಾಂತಿಯುತ ಊರಾಗಿದ್ದು ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಿ ಊರಿನ ಹಿತ ಕಾಪಾಡುವಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯನ್ನು ತೆಗೆದುಕೊಂಡು ಶಾಂತಿಯುತ ಮತ್ತು ಆರೋಗ್ಯಕರ ಹಬ್ಬವನ್ನು ಆಚರಿಸುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಪ್ರೊಬೆಷನರಿ ಎಸ್. ಐ ಸಂದೀಪ್ ಕುಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಮುಖಂಡರಾದ ಹಾಜಿ ಮುಸ್ತಾಫ ಜನತಾ, ಹಾಜಿ ಅಬ್ದುಲ್ ಸಮದ್ ಮೊಗರ್ಪಣೆ, ನ.ಪಂ ಸದಸ್ಯ ಕೆ.ಎಸ್ ಉಮ್ಮರ್, ಎಂ.ಕೆ ಮುಸ್ತಾಫ ದರ್ಜಿ, ಬಶೀರ್ ಆರ್.ಬಿ, ಮುಜೀಬ್ ಪೈಚಾರ್, ರಶೀದ್ ಜಟ್ಟಿಪಳ್ಳ, ಹಾಜಿ ಇಬ್ರಾಹಿಂ ಪೈಚಾರ್ ಮೊದಲಾದವರು ಉಪಸ್ಥಿತರಿದ್ದರು.