
ಧರ್ಮ ಧರ್ಮವೆಂದು ಪರಸ್ಪರ ವೈಮನಸ್ಸನ್ನು ಹೊಂದಿಕೊಂಡು ಸಮಾಜದ ಹಿತವನ್ನು ಆಂತಕದತ್ತ ಕೊಂಡೊಯ್ಯಲು ಮುನ್ನುಗ್ಗುತ್ತಿರುವ ಕೆಲವು ಸಮಾಜದ ವೈರಿಗಳು ಇರುವ ಈ ಸಂದರ್ಭದಲ್ಲಿ ಜಾತಿಧರ್ಮಕ್ಕೆ ಯಾವುದೇ ಅವಕಾಶವಿಲ್ಲ. ಕೇವಲ ಮಾನವೀಯತೆಗೆ ಮಾತ್ರ ನಮ್ಮಲ್ಲಿ ಮೌಲ್ಯವೆಂದು ತೋರಿಸಿಕೊಟ್ಟ ಸೋಣಂಗೇರಿ ಹೊಸಗದ್ದೆ ಮೂಲದ ಬಾಲಶೇಖರ ಹೊಸಗದ್ದೆ, ಅಬ್ದುಲ್ ರಹಿಮಾನ್ ಹಾಗೂ ಜೋಸೆಫ್ ಎಂಬ ನಿಜವಾದ ಅಮರ್, ಅಕ್ಬರ್, ಅಂಥೋಣಿಯವರ ಸೌಹಾರ್ಧತೆಯ ಜೀವನದ ಘಟನೆ ಇದಾಗಿದೆ.

ಸೋಣಂಗೇರಿ ಕುಕ್ಕಜೆಕಾನ ರಸ್ತೆಯ ಹೊಸಗದ್ದೆ ಪರಿಸರದಲ್ಲಿ ಸುಮಾರು ೫ ಮನೆಗಳು ಮುಖ್ಯರಸ್ತೆಯಿಂದ ೧೦೦ ಮೀ. ಅಂದಾಜು ದೂರದಲ್ಲಿದ್ದು, ಈ ಪ್ರದೇಶಕ್ಕೆ ಸಾಗಿ ಬರಲು ಕಳೆದ ೩೦ ವರ್ಷಗಳಿಂದ ಕಾಲುದಾರಿಯನ್ನು ಬಳಸಿಕೊಳ್ಳಲಾಗುತ್ತಿತ್ತು. ೩೦ ವರ್ಷಗಳ ಹಿಂದೆ ಈ ಭಾಗಕ್ಕೆ ಬರಲು ಅಟೋರಿಕ್ಷಾ ಬರುವ ರಸ್ತೆ ಇದ್ದವು. ಕಾಲಕ್ರಮೇಣ ಸ್ಥಳೀಯರೊಬ್ಬರು ನಿರ್ಮಿಸಿರುವ ಬೇಲಿಯಿಂದ ಈ ಸ್ಥಳವು ಮಾಯವಾಗುತ್ತ ಕಾಲುದಾರಿಯಾಗಿ ಮಾರ್ಪಟ್ಟಿತು. ಈ ಭಾಗದ ಜನತೆ ಕಳೆದ ೩೦ ವರ್ಷಗಳಿಂದ ತಮ್ಮ ಮನೆಗಳಿಗೆ ಮೂಲಭೂತ ಸೌಕಾರ್ಯಗಳನ್ನು, ಆಹಾರ ಸಾಮಾಗ್ರಿಗಳನ್ನು, ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ವಾಹನಗಳನ್ನು ತರಿಸಿಕೊಳ್ಳಲು ವ್ಯವಸ್ಥೆಗಳಿಲ್ಲದೆ ಪಟ್ಟಂತಹ ನೋವುಗಳು ಅಷ್ಟಿಷ್ಟಲ್ಲ ಎಂದು ಸ್ಥಳೀಯರಾದ ಜೋಸೆಫ್‌ರವರು ನೋವಿನಿಂದ ಹೇಳುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇವರು ಅಲೆದಾಡದ ಇಲಾಖೆಗಳು ಇಲ್ಲ. ಅಧಿಕಾರಿಗಳು ಇಲ್ಲ. ರಸ್ತೆಗಾಗಿ ಖರ್ಚುಮಾಡಿದ ಹಣಕ್ಕೆ ಲೆಕ್ಕವೂ ಇಲ್ಲ. ಕಳೆದ ಮೂರು ದಶಕಗಳಿಂದ ತನ್ನ ಮನೆಯತ್ತ ಒಂದು ಅಟೋರಿಕ್ಷಾ ಬರುವ ರಸ್ತೆಯನ್ನು ನಿರ್ಮಿಸಿಕೊಡುವಂತೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕಾಡಿಬೇಡಿದರೂ ಯಾವುದೇ ಫಲ ಲಭಿಸಿರಲಿಲ್ಲ. ಹಲವಾರು ಬಾರಿ ಸ್ಥಳೀಯ ಮುಖಂಡರ ಜೊತೆ ಸಭೆಯನ್ನು ನಡೆಸಿ ಚರ್ಚಿಸಿದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಮನೆಯೆಷ್ಟೇ ದೊಡ್ಡದಿದ್ದರೂ, ಚಿಕ್ಕದಿದ್ದರೂ ಆ ಮನೆಗೆ ಬರಲು ರಸ್ತೆಯೊಂದು ಸಮರ್ಪಕ ರೀತಿಯಲ್ಲಿ ಬೇಕಾದುದ್ದೂ ಅತ್ಯಂತ ಮುಖ್ಯ ಆದರೆ ಈ ವ್ಯವಸ್ಥೆ ಇಲ್ಲದೆ ಸಂಕಷ್ಟದಲ್ಲಿ ಇರುವ ಸಂದರ್ಭ ಇವರ ಹಲವಾರು ವರ್ಷದ ಕನಸಿಗೆ ಫಲ ಸಿಕ್ಕಂತಹ ಘಟನೆ ಜು.೨೬ರಂದು ನಡೆಯಿತು. ಸ್ಥಳೀಯ ಮುಖಂಡರುಗಳಾದ ಆರ್.ಬಿ ಬಶೀರ್, ಪ್ರಭಾಕರ್ ಎನ್.ಎನ್ ಸೋಣಂಗೇರಿ ಹಾಗೂ ಉದ್ಯಮಿ ಜಾರ್ಚ್ ಕಣಚೆಲ್ ಅವರ ನೇತೃತ್ವದಲ್ಲಿ ಮಾತುಕತೆಯಲ್ಲಿ ನಡೆದ ಸಭೆಯು ಫಲಪ್ರದವಾಯಿತು. ಈ ಸಭೆಯಲ್ಲಿ ಸ್ಥಳೀಯರಾದ ಬಾಲಶೇಖರ ಹೊಸಗದ್ದೆ ಹಾಗೂ ಅಬ್ದುಲ್ ರಹಿಮಾನ್ ಎಂಬವರು ಮಾನವೀಯತೆಯನ್ನು ಮೆರೆದು ತಮ್ಮತಮ್ಮ ಜಾಗದಿಂದ ಸುಮಾರು ೨-೩ ಅಡಿಗಳಷ್ಟು ಜಾಗವನ್ನು ರಸ್ತೆಗಾಗಿ ನೀಡುವ ತೀರ್ಮಾನವನ್ನು ತಿಳಿಸಿದರು. ಇದರೊಂದಿಗೆ ಸಮಾಜದಲ್ಲಿ ಜಾತಿ ಧರ್ಮ ಮುಖ್ಯವಲ್ಲ ಮಾನವೀಯತೆ ಮುಖ್ಯ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಮೂಲತಃ ಬಾಲಶೇಖರರವರು ಕೃಷಿಕರಾಗಿದ್ದು, ಜಾಲ್ಸೂರು ಗ್ರಾಮ ಪಂಚಾಯತ್‌ನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ರಸ್ತೆಗಾಗಿ ತಮ್ಮ ಮನೆಯ ಮುಖ್ಯಗೇಟನ್ನು ಮತ್ತು ಹಲವಾರು ವರ್ಷಗಳಿಂದ ಸಂರಕ್ಷಿಸಿಕೊಂಡು ಬರುತ್ತಿದ್ದ ಹೂತೋಟವನ್ನು ತೆರವುಗೊಳಿಸಿ ತಮ್ಮ ಜಾಗದಿಂದ ಸುಮಾರು ೩ ಅಡಿಗಳಷ್ಟು ಸ್ಥಳವನ್ನು ತಮ್ಮ ಮನೆಯ ಸುತ್ತಳತೆಯಿಂದ ಸುಮಾರು ೪೦ ಮೀಟರ್ ದೂರದವರೆಗೆ ರಸ್ತೆ ನಿರ್ಮಾಣಕ್ಕೆ ಜಾಗವನ್ನು ಬಿಟ್ಟುಕೊಟ್ಟಿರುವುದು ಇವರ ಮಾನವೀಯತೆಯ ಪ್ರತೀಕವಾಗಿದೆ. ಅದಲ್ಲದೇ ತಾನು ಕೂಡಾ ರಸ್ತೆ ನಿರ್ಮಾಣದಲ್ಲಿ ಸೇರಿಕೊಂಡು ಕೆಲಸಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅದೇ ರೀತಿ ಅಬ್ದುಲ್ ರಹಿಮಾನ್‌ರವರು ತಮ್ಮ ಮನೆಗೆ ನಿರ್ಮಿಸಿರುವ ಆರು ಅಡಿ ಎತ್ತರದ ತಡೆಗೋಡೆಯನ್ನು ತೆರವುಗೊಳಿಸಿ ತಾನು ಕೂಡಾ ಸೌಹಾರ್ದತೆಯಲ್ಲಿ ಕಡಿಮೆಯಿಲ್ಲವೆಂಬಂತೆ ತಮ್ಮ ಜಾಗದಿಂದ ಸುಮಾರು ೨೫ ಮೀಟರ್ ದೂರದಷ್ಟು ಎರಡು ಅಡಿಗಳ ಅಗಲದ ಸ್ಥಳವನ್ನು ರಸ್ತೆಗಾಗಿ ನೀಡಿ ತಾನು ಕೂಡಾ ರಸ್ತೆ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ನಿಜವಾದ ಅಮರ್ , ಅಕ್ಬರ್, ಅಂಥೋಣಿಯವರ ಸೌಹರ್ಧತೆಯ ಬದುಕು ಮೂಡಿ ಬಂದಿದೆ. ಇವರ ಈ ಪ್ರೀತಿ ವಿಶ್ವಾಸ ಬದುಕು ಸದಾ ಇರಲಿ ಹಾಗೂ ಇವರ ಈ ಬದುಕು ಇತರರಿಗೂ ಮಾದರಿಯಾಗಲಿ ಎಂದು ಆಶಿಸೋಣ.
-ಹಸೈನಾರ್ ಜಯನಗರ