
ಮಹಿಳಾ ಕಾನ್ಸ್ಟೇಬಲ್ ಒಬ್ಬರು ಪತಿಯೆಂದು ಸುಳ್ಳು ಹೇಳಿ ತನ್ನ ಪ್ರಿಯಕರನೊಂದಿಗೆ ಕ್ವಾರಂಟೈನ್ ಆದ ಘಟನೆ ನಾಗ್ಪುರ ದಲ್ಲಿ ನಡೆದಿದೆ. ಕೊರೋನಾ ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಕಾರಣ ಮಹಿಳಾ ಕಾನ್ಸ್ಟೇಬಲ್ ನನ್ನು ಕ್ವಾರಂಟೈನ್ ಆಗಲು ಆರೋಗ್ಯ ಅಧಿಕಾರಿಗಳು ಸೂಚಿಸಿದ್ದರು. ಈ ವೇಳೆ ನನ್ನ ಜೊತೆ ನನ್ನ ಪತಿಯನ್ನು ಕ್ವಾರಂಟೈನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಮಹಿಳಾ ಕಾನ್ಸ್ಟೇಬಲ್ ತಿಳಿಸಿದ ಹಿನ್ನೆಲೆ ಇಬ್ಬರನ್ನು ಕ್ವಾರಂಟೈನ್ ಮಾಡಲಾಯಿತು. ಆದರೆ ನಂತರ ಆತ ಈಕೆಯ ಪತಿಯಲ್ಲ ಪ್ರಿಯಕರ ಎನ್ನುವುದು ಗೊತ್ತಾಗಿದೆ. ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮತ್ತು ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಕೆಯ ಪತಿ ಎಂದು ನಮೂದಿಸಿದ ವ್ಯಕ್ತಿಯನ್ನು ನಾಗ್ಪುರದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದಲ್ಲಿ ಅಧಿಕಾರಿಗಳು ಕ್ವಾರಂಟೈನ್ ಮಾಡಿದರು. ಅದಾದ ಮೂರು ದಿನಗಳ ಬಳಿಕ ಪೊಲೀಸ್ ತರಬೇತಿ ಕೇಂದ್ರದ ಬಳಿ ಪ್ರಿಯಕರನ ಪತ್ನಿ ತನ್ನ ಪತಿಯನ್ನು ಹುಡುಕಿಕೊಂಡು ಬಂದಿರುತ್ತಾರೆ. ಈ ಸಂದರ್ಭದಲ್ಲಿ ಮಹಿಳಾ ಕಾನ್ಸ್ಟೇಬಲ್ ನ ಪ್ರೇಮ ಪುರಾಣ ಬಹಿರಂಗಗೊಂಡಿದೆ. ವಿಷಯ ತಿಳಿದ ಮಹಿಳೆ ಬಜಾಜ್ ನಗರದ ಪೊಲೀಸ್ ಠಾಣೆಯಲ್ಲಿ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.