ನವದೆಹಲಿ : ಕೊರೊನಾ ವೈರಸ್ ಸೋಂಕಿನ ಕುರಿತು ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಮಹಾಮಾರಿಯ ಕುರಿತ ಸಂಶೋಧನೆಗಳು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಒದಗಿಸುತ್ತಿವೆ. ಅದ್ರಲ್ಲೂ ಕೊರೊನಾ ವೈರಸ್ ಗಾಳಿಯಿಂದಲೂ ಹರಡುತ್ತೆ ಅನ್ನುವ ಆಘಾತಕಾರಿ ಮಾಹಿತಿಯನ್ನು ವೈದ್ಯಕೀಯ ತಜ್ಞರು ಬಾಯ್ಬಿಟ್ಟಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಕೋವಿಡ್ -19 ಅನ್ನೋ ಹೆಮ್ಮಾರಿ ಇಂದು ಜಾಗತಿತ ಪಿಡುಗಾಗಿ ಮಾರ್ಪಟ್ಟಿದೆ. ಕೊರೊನಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತೆ ಅನ್ನುವ ಮಾಹಿತಿ ಬಹಿರಂಗವಾಗಿತ್ತು. ಈ ನಿಟ್ಟಿನಲ್ಲಿ ಮಾಸ್ಕ್, ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಲಾಗುತ್ತಿದೆ. ಇದೀಗ ಕೊರೊನಾ ವೈರಸ್ ಸೋಂಕು ಗಾಳಿಯಿಂದಲೂ ಹರಡುತ್ತೆ ಅಂತಾ ವಿವಿಧ ದೇಶಗಳ ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವ್ಯಕ್ತಿಯೊಬ್ಬರು ಸೀನಿದ ನಂತರ ಗಾಳಿಯ ಮೂಲಕ ವೈರಸ್ ಕಣಗಳು ಬೇರೆಡೆಗೆ ಹರಡುತ್ತವೆ. ಗಾಳಿಯಲ್ಲಿರುವ ಕಣಗಳು ಉಸಿರಾಟದ ಮೂಲಕ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತವೆ ಅನ್ನವುದು ತಜ್ಞರು ಸಂಶೋಧನೆಯಲ್ಲಿ ಕಂಡುಕೊಂಡ ಸತ್ಯ. ವಿಶ್ವದ ಸುಮಾರು 32 ದೇಶಗಳ 239 ವೈದ್ಯಕೀಯ ತಜ್ಞರು ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದು ಕೊರೋನಾ ರೋಗದ ಸೋಂಕು ಗಾಳಿಯ ಮುಖಾಂತರವೂ ಹರಡಲಿದೆ. ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ. ಗಾಳಿಯ ಮುಖಾಂತರವೂ ಹರಡಲಿದೆ ಎಂದು ತಿಳಿದು ಬರುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿ ಪರಿಣಮಿಸಿದೆ. ಈ ಕುರಿತು ಸಂಶೋಧನಾ ವರದಿ ಸೈನ್ಸ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾಗಲಿದೆ. ಈ ಕುರಿತು ವೈದ್ಯಕೀಯ ಕ್ಷೇತ್ರದ ತಜ್ಞರು ಸಂಶೋಧನೆಯ ಸಾರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಕೂಡ ಗಾಳಿಯ ಮೂಲಕ ಕೊರೊನಾ ಹರಡುವಿಕೆಯ ಕುರಿತು ಅನುಮಾನವನ್ನು ವ್ಯಕ್ತಪಡಿಸಿತ್ತು. ಅಧಿಕೃತ ಆಧಾರಗಳು ವಿಶ್ವ ಆರೋಗ್ಯ ಸಂಸ್ಥೆಗೆ ಲಭ್ಯವಾಗಿರಲಿಲ್ಲ. ಇದೀಗ ವೈದ್ಯಕೀಯ ತಜ್ಞರು ನಡೆಸಿರುವ ಸಂಶೋಧನೆಯಿಂದ ಹಲವು ಪುರಾವೆಗಳು ಲಭ್ಯವಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇನ್ನಷ್ಟು ಸಂಶೋಧನೆಯನ್ನು ನಡೆಸುವ ಸಾಧ್ಯತೆಯಿದೆ.