ಉತ್ತರಪ್ರದೇಶ: ಅಪರಾಧಿಯನ್ನು ಬಂಧಿಸಲು ತೆರಳಿದ ಪೊಲೀಸರ ತಂಡದ ಮೇಲೆ ಕ್ರಿಮಿನಲ್ ಗಳು ಗುಂಡಿನ ದಾಳಿ ನಡೆಸಿದ್ದು, ಡಿವೈಎಸ್ಪಿ ಸೇರಿ 8 ಪೊಲೀಸ್ ಸಿಬ್ಬಂದಿಗಳು ಹತ್ಯೆ ಯಾಗಿದ್ದಾರೆ. 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ಮುಂಜಾನೆ 1 ಗಂಟೆ ಸುಮಾರಿಗೆ ಪೊಲೀಸ್ ತಂಡ ರೌಡಿಶೀಟರ್ ವಿಕಾಸ್ ದುಬೆ ಅವರ ಮನೆಯ ಮೇಲೆ ದಾಳಿ ನಡೆಸಲು ಹೋದಾಗ, ಪೊಲೀಸರ ತಂಡದ ಮೇಲೆ ಕನಿಷ್ಠ ಎಂಟರಿಂದ ಹತ್ತು ಅಪರಾಧಿಗಳು ಮನೆಯ ಮೇಲ್ಛಾವಣಿಯಿಂದ ಗುಂಡು ಹಾರಿಸಿದ್ದಾರೆ.
ವಿಕಾಸ್ ದುಬೆ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. 2001 ರಲ್ಲಿ ಯುಪಿ ಮಾಜಿ ಸಚಿವ ಸಂತೋಷ್ ಶುಕ್ಲಾ ಅವರನ್ನು ಪೊಲೀಸ್ ಠಾಣೆಯೊಳಗೆ ಕೊಲೆ ಮಾಡಿದ ಆರೋಪವೂ ದುಬೆಯ ಮೇಲಿದೆ.
ಹಿರಿಯ ಪೊಲೀಸ್ ಅಧೀಕ್ಷಕರು (ಎಸ್ಎಸ್ಪಿ) ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಸ್ಥಳಕ್ಕೆ ತಲುಪಿದ್ದಾರೆ ಮತ್ತು ವಿಧಿವಿಜ್ಞಾನ ತಂಡಗಳು ಪ್ರದೇಶದಲ್ಲಿ ಪರೀಕ್ಷೆಯನ್ನು ನಡೆಸುತ್ತಿವೆ.
ಪ್ರಾಣ ಕಳೆದುಕೊಂಡ 8 ಪೊಲೀಸರ ಕುಟುಂಬಗಳಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಘಟನೆಯ ವರದಿಯನ್ನು ಕೋರಿದ್ದಾರೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡಿಜಿಪಿ ಎಚ್ಸಿ ಅವಸ್ಥಿಗೆ ನಿರ್ದೇಶನ ನೀಡಿದ್ದಾರೆ.