ದಕ್ಷಿಣ ಕನ್ನಡದ ಸಹಕಾರಿ ಸಂಸ್ಥೆಗಳು ನಷ್ಟ ಕಾಣದೆ ಮಾದರಿಯಾಗಿ ಬೆಳೆದಿವೆ: ಡಾ. ಕೆ.ವಿ. ಚಿದಾನಂದ – ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ‘ರಜತ ಸಂಭ್ರಮ’ ಉದ್ಘಾಟನೆ

ವರದಿ : ಸುದೀಪ್ ರಾಜ್ ಮುಳ್ಯ
ಸುಳ್ಯ: ಪಂಚವಾರ್ಷಿಕ ಯೋಜನೆಗಳ ಬಳಿಕ ದೇಶದಲ್ಲಿ ಸಹಕಾರಿ ಕ್ಷೇತ್ರ ವ್ಯಾಪಕವಾಗಿ ಅಭಿವೃದ್ಧಿ ಹೊಂದಿದ್ದು, ಕೃಷಿ, ಹೈನುಗಾರಿಕೆ ಹಾಗೂ ಉದ್ಯಮ ಕ್ಷೇತ್ರಗಳ ಪ್ರಗತಿಗೆ ಸಹಕಾರಿ ಸಂಘಗಳು ಪ್ರಮುಖ ಕಾರಣವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಸರ್ಕಾರದ ಹಸ್ತಕ್ಷೇಪವಿಲ್ಲದೆ, ನಷ್ಟ ಕಾಣದೆ ಅತ್ಯುತ್ತಮವಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹೇಳಿದರು.

. . . . . . . . .


ಪುತ್ತೂರಿನ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ರಜತ ಮಹೋತ್ಸವದ ಪ್ರಯುಕ್ತ ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರ ಕೇರ್ಪಳದಲ್ಲಿ ಆಯೋಜಿಸಲಾಗಿದ್ದ ‘ರಜತ ಸಂಭ್ರಮ-2026’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಸಪ್ತಾಹದಂತಹ ಕಾರ್ಯಕ್ರಮಗಳ ಮೂಲಕ ಸಂಘಗಳ ಸಾಧನೆಗಳ ವಿಚಾರ ವಿನಿಮಯ ನಡೆಯಬೇಕು. 2003ರಲ್ಲಿ ಡಾ. ಕುರುಂಜಿ ವೆಂಕಟ್ರಮಣ ಗೌಡರು ಈ ಸಂಘದ ಸುಳ್ಯ ಶಾಖೆಯನ್ನು ಉದ್ಘಾಟಿಸಿದ್ದರು. ಇಂದು ಸಂಸ್ಥೆ ಹೆಮ್ಮರವಾಗಿ ಬೆಳೆದಿರುವುದು ಸಂತಸ ತಂದಿದ್ದು, ಮುಂದೆಯೂ ಬಡವರ ಆರ್ಥಿಕ ಸಬಲೀಕರಣಕ್ಕೆ ಸಂಸ್ಥೆ ಸಹಕಾರಿಯಾಗಲಿ ಎಂದು ಹಾರೈಸಿದರು.
ಅಗತ್ಯಕ್ಕೆ ತಕ್ಕಂತೆ ಸಾಲ ಪಡೆದು ಮರುಪಾವತಿಸಿ: ಶಾಸಕಿ ಭಾಗೀರಥಿ ಮುರುಳ್ಯ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಕಡಿಮೆ ಸದಸ್ಯರೊಂದಿಗೆ ಆರಂಭವಾದ ಈ ಸಂಸ್ಥೆ ಇಂದು ಸಾವಿರಾರು ಮಂದಿಯನ್ನು ಆರ್ಥಿಕವಾಗಿ ಸದೃಢಗೊಳಿಸುತ್ತಿದೆ ಎಂದರು. ತಾ.ಪಂ. ಸದಸ್ಯೆಯಾಗಿ 25 ವರ್ಷಗಳ ರಾಜಕೀಯ ಸೇವೆಯೊಂದಿಗೆ ತಾವೂ ಸಹಕಾರಿ ಕ್ಷೇತ್ರದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವುದನ್ನು ಸ್ಮರಿಸಿದ ಅವರು, ಸಂಸ್ಥೆಗಳು ಅರ್ಹ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿದೆ. ಗ್ರಾಹಕರು ಅನಗತ್ಯ ಸಾಲ ಮಾಡದೆ, ತಮ್ಮ ಅಗತ್ಯ ಹಾಗೂ ಅಭಿವೃದ್ಧಿಗಾಗಿ ಮಾತ್ರ ಸಾಲ ಪಡೆದು ಸಕಾಲದಲ್ಲಿ ಮರುಪಾವತಿಸುವ ಮೂಲಕ ಸಂಸ್ಥೆಯ ಪ್ರಗತಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ವಹಿಸಿದ್ದರು.
₹890 ಕೋಟಿ ವ್ಯವಹಾರದ ಮೈಲಿಗಲ್ಲು:
ಸಂಘದ ಉಪಾಧ್ಯಕ್ಷ ಉಮೇಶ್ ಪ್ರಭು ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, 2001ರ ಸೆಪ್ಟೆಂಬರ್ 1ರಂದು 600 ಸದಸ್ಯರು ಹಾಗೂ ₹10 ಲಕ್ಷ ಪಾಲು ಬಂಡವಾಳದೊಂದಿಗೆ ಆರಂಭವಾದ ಸಂಸ್ಥೆ ಇಂದು 23 ಶಾಖೆಗಳನ್ನು ಹೊಂದಿದ್ದು, 54 ಸಾವಿರ ಸದಸ್ಯರೊಂದಿಗೆ ₹890 ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿದೆ. ಅಲ್ಲದೆ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮೂಲಕ ನಿರಂತರ ಸಾಮಾಜಿಕ ಸೇವಾ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಸಾಧಕರಿಗೆ ಸನ್ಮಾನ
ಸಾಧಕರಾದ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ಸುಳ್ಯದ ಮಾಲಕ ಸುರೇಶ್ ಚಂದ್ರ ಕೆ.ವಿ, ಡಾ. ಉಮಾಶಂಕರ್ ಬೋರ್ಕರ್, ಡಾ. ರಘುರಾಂ , ನಿಸರ್ಗ ಮಸಾಲದ ಮಾಲಕರಾದ ಕಸ್ತೂರಿ ಶಂಕರ್, ನಿವೃತ್ತ ಯೋಧ ದೇರಣ್ಣ ಗೌಡ ಅಡ್ಡಂತಡ್ಕ, ಕೃಷಿ ಕಾರ್ಮಿಕರಾಗಿ ಅಚ್ಚುತ್ತ ನಾಯಕ್ ಕಿಲಂಗೋಡಿ, ನಿವೃತ್ತ ಅಧ್ಯಾಪಕ ವೈಕುಂಠ ಪ್ರಭು ಸುಳ್ಯ, ಪ್ರಗತಿಪರ ಕೃಷಿಕ ಸುರೇಶ್ ಚಂದ್ರ ಭಟ್ ಕಲ್ಮಡ್ಕ, ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿ ಹಾಗೂಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ನಾಯಕ್, ಉದ್ಯಮಿ ಗೋಪಾಲಕೃಷ್ಣ ಕರೋಡಿ, ನಿವೃತ್ತ ಅಧ್ಯಾಪಕ ಕೆ. ಆರ್. ಗೋಪಾಲೃಷ್ಣ, ಅಂತರಾಷ್ಟ್ರೀಯ ಕ್ರೀಡಾಪಟು ಸರಸ್ವತಿ ಕಾಮತ್ ಅವರನ್ನು ಸನ್ಮಾನಿಸಲಾಯಿತು.

. . . . . . .

ಮುಖ್ಯ ಅತಿಥಿಗಳಾಗಿ ಹಿರಿಯ ಸಹಕಾರಿ ರಾಧಾಕೃಷ್ಣ ಕೋಟೆ, ಕರ್ನಾಟಕ ಫ್ಲೈವುಡ್ ಇಂಡಸ್ಟ್ರೀಸ್ ಮಾಲೀಕ ಕೃಷ್ಣ ಕಾಮತ್, ಮಂಗಳೂರು ಎ.ಜೆ. ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ರಾಘವೇಂದ್ರ ಪ್ರಸಾದ್ ಕೆ.ವಿ., ಸುಳ್ಯ ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸಮಾಜದ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಪಾಲ್ಗೊಂಡಿದ್ದರು.
​ವಿಶೇಷ ಆಹ್ವಾನಿತರಾಗಿ ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಜಯಪ್ರಕಾಶ್ ರೈ, ಉದ್ಯಮಿ ಗೋಪಾಲಕೃಷ್ಣ ಪೊಸವಳಿಕೆ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್, ಸ್ನೇಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಉಪಸ್ಥಿತರಿದ್ದರು.
​ವೈಷ್ಣವಿ ಎಸ್. ನಾಯಕ್ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ., ಆಡಳಿತ ಮಂಡಳಿ ಸದಸ್ಯರು, ಸುಳ್ಯ ಶಾಖಾ ವ್ಯವಸ್ಥಾಪಕ ರಾಜೇಶ್ ಬಿ.ಎಸ್., ಬೆಳ್ಳಾರೆ ಶಾಖಾ ವ್ಯವಸ್ಥಾಪಕ ಸುಪ್ರೀತ್ ಕುಮಾರ್ ಎಂ., ಕಡಬ ಶಾಖಾ ವ್ಯವಸ್ಥಾಪಕ ಜಯೇಶ್ ಪ್ರಭು ಕೆ. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸೀನಿಯರ್ ಮ್ಯಾನೇಜರ್ ದೇವಿಪ್ರಸಾದ್ ಹಾಗೂ ಮ್ಯಾನೇಜರ್ ಶಿವಪ್ರಸಾದ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading