“ಶಿಷ್ಟಾಚಾರ ಪಾಲನೆ ಶಾಸಕರಿಗೂ ಅನ್ವಯಿಸುತ್ತದೆ; ಆತ್ಮಾವಲೋಕನ ಮಾಡಿಕೊಳ್ಳಲಿ” : ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸವಾಲು

ಸುಳ್ಯ: “ಚುನಾಯಿತರಲ್ಲದವರು ಗುದ್ದಲಿಪೂಜೆ ಮಾಡಬಾರದು, ಅದು ಶಾಸಕರ ಹಕ್ಕು ಎಂಬುದಾದರೆ ಶಾಸಕರು ಗುದ್ದಲಿಪೂಜೆ ನಡೆಸುವಾಗ ಸರ್ಕಾರಿ ಶಿಷ್ಟಾಚಾರವನ್ನು ಕಡ್ಡಾಯವಾಗಿ ಪಾಲಿಸಬೇಕು” ಎಂದು ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸವಾಲು ಹಾಕಿದ್ದಾರೆ.

. . . . . . . . .

“ಕಾಮಗಾರಿಗೆ ಸಂಬಂಧಪಟ್ಟ ಇಲಾಖೆಯ ಅಭಿಯಂತರರು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್‌ನ ಆಡಳಿತಾಧಿಕಾರಿಗಳು ಶಂಕುಸ್ಥಾಪನೆ ಮತ್ತು ಗುದ್ದಲಿಪೂಜೆ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಶಂಕುಸ್ಥಾಪನೆ, ಉದ್ಘಾಟನೆ ಮುಂತಾದ ಕಾರ್ಯಕ್ರಮಗಳ ಶಿಲಾನ್ಯಾಸ ಫಲಕ, ಉದ್ಘಾಟನಾ ಫಲಕ ಹಾಗೂ ಆಮಂತ್ರಣ ಪತ್ರಿಕೆಗಳನ್ನು ಸರ್ಕಾರಿ ಶಿಷ್ಟಾಚಾರದ ಪ್ರಕಾರವೇ ಸಿದ್ಧಪಡಿಸಬೇಕು” ಎಂದು ಅವರು ತಿಳಿಸಿದ್ದಾರೆ.

. . . . . . .

“ಇತ್ತೀಚೆಗೆ ಸುಳ್ಯ ಶಾಸಕರು ನಡೆಸಿದ ವಿವಿಧ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರವನ್ನು ಮರೆಮಾಚಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ನಡೆಸಿದ ಗುದ್ದಲಿಪೂಜೆಯನ್ನು ಅನಧಿಕೃತ ಎಂದು ಘೋಷಿಸುವುದು ಹಾಗೂ ಅದರ ಬೆನ್ನಲ್ಲೇ ಸುಳ್ಯ ಬಿಜೆಪಿ ಮಂಡಲದ ಕೋಶಾಧಿಕಾರಿಗಳು ಪ್ರತಿಭಟನೆಯ ಎಚ್ಚರಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ” ಎಂದು ಅವರು ಟೀಕಿಸಿದ್ದಾರೆ.

“ಅಷ್ಟಕ್ಕೂ ಬಿಜೆಪಿ ಮಂಡಲದ ಕೋಶಾಧಿಕಾರಿಗಳು ಯಾವ ಶಿಷ್ಟಾಚಾರದ ಅಡಿಯಲ್ಲಿ, ಯಾರ ವಿರುದ್ಧ ಮತ್ತು ಯಾವ ಮಾನದಂಡದ ಆಧಾರದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ? ಶಿಷ್ಟಾಚಾರವನ್ನು ಮರೆತಿರುವ ಶಾಸಕರು ಈ ವಿಚಾರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಸಮಯಾವಕಾಶ ಸಿಗಬಹುದೇ” ಎಂದು ಚೇತನ್ ಕಜೆಗದ್ದೆ ಪ್ರಶ್ನಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading