ಅಮರ ಸುದ್ದಿ ವಿಶೇಷ ವರದಿ – ಸುಳ್ಯದ “ಸರ್ಕಾರಿ ಶಾಲೆ”ಯೊಂದರಲ್ಲಿ ವಿನೂತನ ರೀತಿಯ ಶ್ರಮದಾನ ; ವಿದ್ಯುತ್ ದೀಪದ ಬೆಳಕಿನಲ್ಲಿ ಬದಲಾಯಿತು ಶಾಲಾ ಪರಿಸರದ ನೋಟ..!! – ಬರಹ : ಉಲ್ಲಾಸ್ ಕಜ್ಜೋಡಿ

ಬರಹ : ಉಲ್ಲಾಸ್ ಕಜ್ಜೋಡಿ
ನಿಸ್ವಾರ್ಥ ಭಾವದಿಂದ ಯಾವುದೇ ಪ್ರತಿಫಲವನ್ನು ಬಯಸದೇ ನಾವು-ನಮ್ಮವರು, ನಮ್ಮದು-ನಮ್ಮೆಲ್ಲರದು ಎನ್ನುವ ವಿಶಾಲ ಮನೋಭಾವದೊಂದಿಗೆ ಮಾಡುವಂತಹ ಪ್ರತಿಯೊಂದು ಕೆಲಸಗಳೂ ಕೂಡ ಕೇವಲ ಕೆಲಸಗಳಾಗಿ ಉಳಿಯುವುದಿಲ್ಲ, ಅವುಗಳು ಸೇವೆಗಳಾಗಿ ರೂಪುಗೊಳ್ಳುತ್ತವೆ, ಹಾಗೂ ಆ ಸೇವೆಗಳು ಮುಂದೆ ನೂರಾರು ಜನರಿಗೆ ಮಾದರಿಯಾಗುತ್ತವೆ..!! ಅಂತಹುದೇ ಒಂದು ಮಾದರಿ ಸೇವಾ ಕಾರ್ಯದ ಕುರಿತು ಈ ವಿಶೇಷ ವರದಿಯಲ್ಲಿ ತಿಳಿದುಕೊಳ್ಳೋಣ ಬನ್ನಿ…
ಅದು ಸುಳ್ಯದ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್, ಅಲ್ಲಿ ನವೆಂಬರ್ 19 ಗುರುವಾರದ ಸಂಜೆ ಎಂದಿನಂತಿರಲಿಲ್ಲ, ಏನೋ ವಿಶೇಷವಾಗಿತ್ತು. ಸಂಜೆ ಶಾಲೆ ಬಿಟ್ಟು ಮನೆಯತ್ತ ಹೆಜ್ಜೆ ಹಾಕಬೇಕಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯಲ್ಲೇ ಉಳಿದಿದ್ದರು. ಮನೆಯಲ್ಲಿ ತಮ್ಮ ಮಕ್ಕಳ ಆಗಮನಕ್ಕಾಗಿ ಕಾಯಬೇಕಿದ್ದ ಪೋಷಕರು ಶಾಲೆಯ ಅಂಗಳಕ್ಕೆ ಆಗಮಿಸಿದ್ದರು. “ಒಂದಿಷ್ಟು ಸಮಾಜಕ್ಕಾಗಿ” ಎನ್ನುವಂತೆ ಕಳೆದ ಹಲವು ವರ್ಷಗಳಿಂದ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ನೀಡುತ್ತಾ ಬಂದಿರುವ ‘ಟೀಂ ಯುವ ವಿವೇಕ ಫೋರ್ಸ್’ ತಂಡದ ಸದಸ್ಯರು ಅಲ್ಲಿ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳ ಜೊತೆಗೆ ನಿಂತಿದ್ದರು. ಎಲ್ಲರೂ ಜೊತೆಯಾಗಿ ಸೇರಿ ಒಗ್ಗಟ್ಟಿನಿಂದ ಶಾಲೆಯ ಪರಿಸರದಲ್ಲಿ ಹೊಸತೊಂದು ಬದಲಾವಣೆಯನ್ನು ತರಲು ತಯಾರಾಗಿದ್ದರು. ಅದಾಗಲೇ ಸಂಜೆ ಗಂಟೆ ಐದಾಗಿತ್ತು, ಈ ಹಿಂದೆ ನವೆಂಬರ್ 15ರಂದು ನಡೆದಿದ್ದ ಶ್ರಮದಾನವನ್ನು ಪೂರ್ಣಗೊಳಿಸುವ ಸಲುವಾಗಿ ಸಂಜೆಯ ವೇಳೆಗೆ ಶಾಲೆಯ ಆವರಣದಲ್ಲಿ ಜೊತೆ ಸೇರಿದ ಇವರೆಲ್ಲರೂ ವಿದ್ಯಾರ್ಥಿಗಳ ಪ್ರತಿದಿನದ ಮದ್ಯಾಹ್ನದ ಬಿಸಿಯೂಟಕ್ಕೆ ಸಹಕಾರಿಯಾಗುವಂತೆ ಒಂದು ಪುಟ್ಟ ತರಕಾರಿ ತೋಟ ಹಾಗೂ ಶಾಲೆಯ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಹೂವು ಹಾಗೂ ಹಣ್ಣಿನ ಗಿಡಗಳನ್ನು ನೆಡಲು ತಯಾರಾಗಿದ್ದರು. ಹಾರೆ, ಗುದ್ದಲಿ ಹಾಗೂ ಬುಟ್ಟಿಗಳನ್ನು ಕೈಯಲ್ಲಿ ಹಿಡಿದ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ತಂಡದ ಯುವಕರು ಹೂವು-ಹಣ್ಣುಗಳ ಗಿಡಗಳನ್ನು ನೆಡುವುದು ಹಾಗೂ ತರಕಾರಿ ತೋಟದ ನಿರ್ಮಾಣದಲ್ಲಿ ನಿರತರಾದರೆ ವಿದ್ಯಾರ್ಥಿಗಳು ಅವರಿಗೆ ತಮ್ಮಿಂದಾದ ಸಹಕಾರವನ್ನು ನೀಡಲು ತಯಾರಾದರು. ಹೊತ್ತು ಮುಳುಗುತ್ತಿತ್ತು, ಕೆಲಸ ನಿರಂತರವಾಗಿ ಸಾಗುತ್ತಿತ್ತು. ಗಂಟೆ ಏಳು ದಾಟಿತ್ತು, ಸುತ್ತಲೂ ಕತ್ತಲು ಆವರಿಸಿತ್ತು. ಆದರೆ ಆ ಕತ್ತಲು ಇವರ ಶ್ರಮದಾನಕ್ಕೆ ಅಡ್ಡಿಯಾಗಲಿಲ್ಲ, ವಿದ್ಯುತ್ ದೀಪಗಳ-ಮೊಬೈಲ್ ಟಾರ್ಚುಗಳ ಬೆಳಕಿನಲ್ಲೇ ಇವರು ತಮ್ಮ ಕೆಲಸವನ್ನು ಮುಂದುವರಿಸಿದರು. ತರಕಾರಿ ಬೀಜಗಳ ಬಿತ್ತನೆ ಕಾರ್ಯ ಹಾಗೂ ಫಲ-ಪುಷ್ಪಗಳ ಗಿಡಗಳನ್ನು ನೆಡುವ ಕಾರ್ಯ ನಿರಂತರವಾಗಿ ನಡೆಯುತ್ತಿತ್ತು. ನೋಡುನೋಡುತ್ತಲೇ ಗಂಟೆ ಹತ್ತಾಗಿತ್ತು, ನಾಲ್ಕೈದು ಗಂಟೆಗಳ ಸತತ ಪರಿಶ್ರಮದಿಂದ ಹಾಗೂ ಎಲ್ಲರ ಒಗ್ಗಟ್ಟಿನ ಬಲದಿಂದ ಶಾಲೆಯ ಅಂಗಳದಲ್ಲಿ ಆ ರಾತ್ರಿಯಲ್ಲಿ ಒಂದು ಸುಂದರವಾದ ತರಕಾರಿ ತೋಟವೂ ನಿರ್ಮಾಣವಾಗಿತ್ತು, ಹೂವು-ಹಣ್ಣುಗಳ ಗಿಡಗಳನ್ನು ನೆಟ್ಟಾಗಿತ್ತು. ಕೊನೆಯಲ್ಲಿ ಶಾಲೆಗೊಂದು ಸುಂದರವಾದ ನಾಮಫಲಕದ ಅಳವಡಿಕೆಯೊಂದಿಗೆ ಈ ಶ್ರಮದಾನದ ಕಾರ್ಯ ಪೂರ್ಣಗೊಂಡಿತ್ತು. ಈ ಕುರಿತು ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಪಾರೆಪ್ಪಾಡಿ ರವರು “ನ.15 ರಂದು ಟೀಂ ಯುವ ವಿವೇಕ ಫೋರ್ಸ್ ನ ಸದಸ್ಯರು, ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರುಗಳ ಸಹಕಾರದೊಂದಿಗೆ ಶ್ರಮದಾನವನ್ನು ನಡೆಸಲಾಗಿತ್ತು. ಅಂದು ಅಪೂರ್ಣಗೊಂಡ ಕೆಲಸಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ನ.19ರಂದು ಮತ್ತೆ ಶ್ರಮದಾನ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಸಂಜೆ 5:00 ಗಂಟೆಯಿಂದ ರಾತ್ರಿ ಸುಮಾರು 10:00 ಗಂಟೆಯವರೆಗೆ ಕೆಲಸ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಿದ ಟೀಂ ಯುವ ವಿವೇಕ ಫೋರ್ಸ್ ನ ಸದಸ್ಯರಿಗೆ, ಪೋಷಕರಿಗೆ, ಎಸ್.ಡಿ.ಎಂ.ಸಿ ಸದಸ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಧನ್ಯವಾದಗಳನ್ನು ಸಮರ್ಪಿಸುತ್ತೇನೆ” ಎಂದು ಹೇಳಿದರು.
ಒಟ್ಟಿನಲ್ಲಿ ಇವರೆಲ್ಲರ ಒಗ್ಗೂಡುವಿಕೆಯಿಂದ ಸಂಜೆಯಿಂದ ರಾತ್ರಿಯವರೆಗೂ ನಡೆದಂತಹ ಈ ಶ್ರಮದಾನವು ಅವರ ಪಾಲಿಗೆ ಒಂದು ಸಾಮಾನ್ಯ ಕೆಲಸವಾಗಿರಬಹುದು. ಆದರೆ ತಮ್ಮೂರಿನ ಶಾಲೆಯ ಅಭಿವೃದ್ಧಿಗಾಗಿ ಒಂದು ಯೋಜನೆಯನ್ನು ರೂಪುಗೊಳಿಸಿ ಆ ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ಸಮಯದ ಯೋಚನೆಯೇ ಇಲ್ಲದೇ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದ ಇವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ..!

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading