ಕೊಲ್ಲಮೊಗ್ರು : ಗ್ರಾಮಸಭೆಯಲ್ಲಿ ಜಲಜೀವನ್ ಯೋಜನೆಯ ಬಗ್ಗೆ ಬಿಸಿಬಿಸಿ ಚರ್ಚೆ – ಪಂಚಾಯತ್ ಅನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ; ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟ ಗ್ರಾಮಸ್ಥರು

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಗ್ರಾಮ ಸಭೆಯು ಆ‌.03 ರಂದು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.

. . . . . . . . .

ಸಭೆಯ ನೊಡೆಲ್ ಅಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಪೂವಯ್ಯ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪಿ.ಡಿ.ಒ ಚೆನ್ನಪ್ಪ ನಾಯ್ಕ ಉಪಸ್ಥಿತರಿದ್ದರು.

. . . . . . .

ಮೆಸ್ಕಾಂ ನ ಚಿದಾನಂದ, ಶಿಕ್ಷಣ ಇಲಾಖೆಯ ಕುಶಾಲಪ್ಪ ತುಂಬತ್ತಾಜೆ, ಅರಣ್ಯ ಇಲಾಖೆಯ ಅಪೂರ್ವ ಅಚ್ರಪ್ಪಾಡಿ, ಗ್ರಾಮ ಲೆಕ್ಕಾಧಿಕಾರಿ ಮಧು ಕೆ.ಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಜಯ, ಪಶು ಇಲಾಖೆಯ ಡಾ. ವೆಂಕಟಾಚಲಪತಿ, ಆರೋಗ್ಯ ಇಲಾಖೆಯ ಸುರಕ್ಷಾಧಿಕಾರಿ ರಾಜೇಶ್, ಡಾ‌. ಸೌರವ್, ಉದ್ಯೋಗ ಖಾತ್ರಿಯ ರಶ್ಮಿ, ನಮಿತಾ, ತೋಟಗಾರಿಕೆ ಇಲಾಖೆಯ ವಿಜಿತ್ ಇಲಾಖಾ ಮಾಹಿತಿ ನೀಡಿದರು. ಪಿಡಿಒ ಸ್ವಾಗತಿಸಿ, ಪಂಚಾಯತ್ ಸಿಬ್ಬಂದಿ ವಸಂತ್ ವರದಿ ವಾಚಿಸಿದರು.

ಗ್ರಾಮ ಸಭೆಯಲ್ಲಿ ಜಲಜೀವನ್ ಯೋಜನೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆದು ಕೆಲಸ ಪೂರ್ಣಗೊಳ್ಳದೆ ಪಂಚಾಯತ್ ಹ್ಯಾಂಡ್ ಓವರ್ ತೆಗೆದುಕೊಂಡ ಬಗ್ಗೆ ಗ್ರಾಮಸ್ಥರು ಪಂಚಾಯತ್ ಅನ್ನು ತರಾಟೆಗೆ ತೆಗೆದುಕೊಂಡರು.

“ಬೆಂಡೋಡಿ ಭಾಗಕ್ಕೆ ಈಗಾಗಲೇ ಸೇತುವೆ ಇದ್ದು, ಇನ್ನೊಂದು ಸೇತುವೆಯನ್ನು ಅದೇ ಹೊಳೆಯ ಗುಳಿಕ್ಕಾನ ಎಂಬಲ್ಲಿ ಮತ್ತೊಂದು ಸೇತುವೆ ನಿರ್ಮಿಸಲು ಹೊರಟಿಸುವುದು ಯಾಕೆ ಇದರಿಂದ ಸರ್ಕಾರದ ಅನುದಾನ ದುರುಪಯೋಗ ಆದಂತಾಗುತ್ತದೆ” ಎಂದು ಸತ್ಯನಾರಾಯಣ ಕೋಲ್ಚಾರು ಹೇಳಿದರು. ಇದರ ಮಧ್ಯೆ ಮಧ್ಯಪ್ರವೇಶಿಸಿದ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಾಧವ ಚಾಂತಾಳ ಅವರು ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು, ಈ ಮಧ್ಯೆ ಅವರಿಬ್ಬರ ನಡುವೆ ಮಾತಿನ ವಾಗ್ವಾದ ನಡೆಯಿತು.

“ಸಂಧ್ಯಾ ಸುರಕ್ಷಾ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಎಲ್ಲವೂ ಕೂಡ ಇತ್ತೀಚಿನ ದಿನಗಳಲ್ಲಿ ಬರ್ತಾ ಇಲ್ಲ” ಎಂಬುದಾಗಿ ಕಲ್ಮಕಾರು ಗ್ರಾಮದ ಯಶೋಧರ ಬಾಕಿಲ ವಿ.ಎ ಅವರನ್ನು ಕೇಳಿದರು ಅದಕ್ಕೆ ಉತ್ತರಿಸಿದ ವಿ.ಎ ಅವರು “ಇದು ಸರಕಾರ ಮಟ್ಟದಲ್ಲಿ ಆ ರೀತಿ ಆಗುತ್ತಿರುವುದರಿಂದ ರೇಷನ್ ಕಾರ್ಡ್‌ನಲ್ಲಿ ಫೋಟೋ ಹೊಂದಿರುವವರು ಆದಾಯ ತೆರಿಗೆ ಕಟ್ಟುತ್ತಿದ್ದರೆ ಅಂತವರಿಗೆ ಈ ಸವಲತ್ತು ಸಿಗುವುದಿಲ್ಲ” ಎಂಬುದಾಗಿ ಹೇಳಿದರು.

ಯುವಜನ ಸಂಯುಕ್ತ ಮಂಡಳಿಯಿಂದ ನೋಂದಾವಣೆಗೊಂಡ ಗ್ರಾಮದಲ್ಲಿರುವ ಯುವಕ ಹಾಗೂ ಯುವತಿ ಮಂಡಲಗಳಿಗೆ ಗ್ರಾಮ ಪಂಚಾಯತ್ ನಲ್ಲಿ ಮೀಸಲಾತಿ ಇಟ್ಟ ಅನುದಾನವನ್ನು ಅವರಿಗೆ ನೀಡಬೇಕೆಂದು ಮಂಡಳಿಯ ಉಸ್ತುವಾರಿ ನಿರ್ದೇಶಕ ದಿನೇಶ್ ಹಾಲೆಮಜಲು ಒತ್ತಾಯಿಸಿದರು.

ಗ್ರಾಮಸಭೆಯಲ್ಲಿ ಮುಖ್ಯವಾಗಿ ಅರಣ್ಯ ಹಕ್ಕು, ಕುಡಿಯುವ ನೀರು, ಸೇತುವೆ, ರಸ್ತೆ ದುರಸ್ತಿ ಹಾಗೂ ಪದೇಪದೇ ಕೈಕೊಡುತ್ತಿರುವ ವಿದ್ಯುತ್ ಇವುಗಳ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದವು.

“ಐದು ವರ್ಷಗಳ ಹಿಂದೆ ಶಿವಾಲ-ಪಡ್ಪು ಎಂಬಲ್ಲಿ ಜನಜೀವನ್ ಮಿಷನ್ ಯೋಜನೆಯಡಿ ಬೋರ್ ತೆರೆಯಲಾಗಿತ್ತು. ಅದರಲ್ಲಿ ನೀರು ಸಿಗದೇ ಇದ್ದು, ಹಾಗೂ ಯಾರೊಬ್ಬರ ಮನೆಗೂ ಪೈಪ್ ಸಂಪರ್ಕ ಆಗದೇ ಇರುವ ಕಾರಣ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಹಾಗೂ ಈ ವಿಷಯವನ್ನು ಹಿಂದಿನ ಗ್ರಾಮ ಸಭೆಗಳಲ್ಲಿ ಪ್ರಸ್ತಾಪ ಆಗಿತ್ತು. ಆ ಸಂದರ್ಭದಲ್ಲಿ ಇಂಜಿನಿಯರ್ ಹಾಗೂ ಸಮಿತಿಯವರ ಉಪಸ್ಥಿತಿಯಲ್ಲಿ ಬೋರ್ ವೆಲ್ ಅನ್ನು ಯಾವುದೇ ಕಾರಣಕ್ಕೂ ಪಂಚಾಯತ್ ಗೆ ಹಸ್ತಾಂತರ ಮಾಡಬಾರದು ಎಂದು ಎಲ್ಲರೂ ಸಹಿ ಮಾಡಿದ್ದರು, ಹಾಗೂ ಗ್ರಾಮ ಸಭೆಯಲ್ಲಿ ನಿರ್ಣಯವೂ ಆಗಿತ್ತು. ಆದರೆ ನಂತರ ಆ ನಿರ್ಣಯವನ್ನು ಲೆಕ್ಕಿಸದೇ ಪಿಡಿಒ ಅನುಪಸ್ಥಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಬೋರ್ ವೆಲ್ ಅನ್ನು ಪಂಚಾಯತ್ ಗೆ ತೆಗೆದುಕೊಂಡಿದ್ದಾರೆ.” ಎಂದು ಪಿ.ಡಿ.ಒ ಅವರು ಗ್ರಾಮ ಸಭೆಯಲ್ಲಿ ಮಾಹಿತಿ ನೀಡಿದರು. ಆ ಸಂದರ್ಭದಲ್ಲಿ ಗ್ರಾಮ ಸಭೆ ಕೋಲಾಹಲ ಸಂಭವಿಸಿ ಸ್ಥಗಿತಗೊಂಡಿದ್ದು, “ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿ ಯಾರೇ ಆದರೂ ಗ್ರಾಮ ಸಭೆಯಲ್ಲಿ ನಿರ್ಣಾಯವನ್ನು ಗಾಳಿಗೆ ತೂರಿ ಪಂಚಾಯತ್ ಅವರು ವಹಿಸಿಕೊಂಡ ಬಗ್ಗೆ ಉದಯ ಶಿವಾಲ ಅವರು ಪಿ.ಡಿ.ಒ ಅವರನ್ನು ಪ್ರಶ್ನಿಸಿದಾಗ ಪಿ.ಡಿ.ಒ ಅವರು ನೊಡೇಲ್ ಅಧಿಕಾರಿ ಹಾಗೂ ಇಂಜಿನಿಯರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸಂಪರ್ಕಕ್ಕೆ ಲಭ್ಯರಾಗಿಲ್ಲ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಉದಯ ಶಿವಾಲ ಅವರು “ಗ್ರಾಮಸಭೆಯು ನಿರ್ಣಾಯಕ್ಕೆ ಬೆಲೆ ಇಲ್ಲದೆ ನೀರು ಇಲ್ಲದ ಬೋರ್ ತೆಗೆಸಿದ್ದು ಹಾಗೂ ಕಾಮಗಾರಿ ಪೂರ್ತಿಗೊಳ್ಳದ ಕಾಮಾಗಾರಿಯನ್ನು ಪಂಚಾಯತ್ ಯಾವ ರೀತಿಯಿಂದ ವಹಿಸಿಕೊಂಡಿದೆ ಎನ್ನುವುದು ನಮಗೆ ತಿಳಿದಿಲ್ಲ, ಹಾಗೂ ಇದು ತೀರ ನಾಚಿಕೆಗೇಡಿನ ಸಂಗತಿ. ಈ ವಿಷಯವನ್ನು ಪ್ರಧಾನಮಂತ್ರಿ ಅವರಿಗೆ ಪತ್ರದ ಮೂಲಕ ಗಮನಕ್ಕೆ ತರುತ್ತೇವೆ ಹಾಗೂ ನಾವು ಮುಂದೆ ಈ ಬಗ್ಗೆ ನ್ಯಾಯ ಪಡೆಯುವ ಸಲುವಾಗಿ ಕೋರ್ಟ್ ಗೆ ತೆರಳುವ ಬಗ್ಗೆ ಚರ್ಚಿಸುತ್ತೇವೆ” ಎಂದು ಹೇಳಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading