ಸುಬ್ರಹ್ಮಣ್ಯ : ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಬ್ರಹ್ಮಣ್ಯ, ಕಲ್ಲಾಜೆ ಮತ್ತು ಕುಲ್ಕುಂದ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದಿನಾಂಕ ಆ.02 ರಂದು ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ವಿಮಲಾ ರಂಗಯ್ಯರವರ ಅಧ್ಯಕ್ಷತೆಯಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು.

. . . . . . . . .

ಈ ಕಾರ್ಯಕ್ರಮವನ್ನು ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ ಸ್ಕಂದರವರು ದೀಪ ಪ್ರಜ್ವಲಿಸಿ ಶುಭಕೋರಿದರು.

. . . . . . .

ಈ ಸಮಾರಂಭದಲ್ಲಿ ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಮಾಡಿ ಮಾತನಾಡುತ್ತಾ, “ಇಂದು ನಾವು ಸಂಭ್ರಮಿಸುತ್ತಿರುವ ಈ ಪದಗ್ರಹಣ ಸಮಾರಂಭದ ಹಿಂದಿರುವ ಆಶಯ ಮತ್ತು ಶಕ್ತಿ ನಿಜಕ್ಕೂ ಅಪಾರವಾದದು. ಪರಮಾಪೂಜ್ಯ ಡಾ | ಡಿ. ವೀರೇಂದ್ರ ಹೆಗ್ಗಡೆಯವರಿಂದ ಆರಂಭವಾದ ಈ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ಕೋಟ್ಯಂತರ ಗ್ರಾಮೀಣ ಕುಟುಂಬಗಳ ಬದುಕಿಗೆ ಬೆಳಕಾಗಿದೆ. ಪ್ರಗತಿ ಬಂಧು ಎಂಬುದು ಶ್ರಮದಾನ ಮತ್ತು ಪರಸ್ಪರ ಸಹಕಾರದ ಮೂಲಕ ಕೃಷಿಕರ ಶ್ರಮವನ್ನು ಹಸನುಗೊಳಿಸಿದ ಅಪೂರ್ವ ಮಾದರಿಯಾಗಿದೆ. ಸಣ್ಣ ಉಳಿತಾಯದಿಂದ ತೊಡಗಿ ಇಂದಿನ ಜ್ಞಾನ ವಿಕಾಸದವರೆಗೆ ಗ್ರಾಮೀಣ ಮಹಿಳೆಯಾರಿಗೆ ಆತ್ಮವಿಶ್ವಾಸ ಹಾಗೂ ಆರ್ಥಿಕ ಭದ್ರತೆಯನ್ನು ನೀಡಿದೆ. ಗ್ರಾಮ ಮಟ್ಟದ ಸ್ವಸಹಾಯ ಸಂಘಗಳು ಒಕ್ಕೂಟಗಳಾಗಿ ರೂಪುಗೊಂಡು ಇಂದು ನಾಯಕತ್ವ ಬೆಳೆಸುವ ದೊಡ್ಡ ವೇದಿಕೆಯಾಗಿ ರೂಪುಗೊಂಡಿದೆ. ಇಂತಹ ಪವಿತ್ರ ಸಂಸ್ಥೆಯಲ್ಲಿ ಸೇವೆಯನ್ನು ಒಕ್ಕೂಟದ ಪದಾಧಿಕಾರಿಗಳು ಜವಾಬ್ದಾರಿಯುತ್ತವಾಗಿ ಮುಂದುವರಿಸಿ ಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ಹೇಳಿದರು.

ಈ ಸಮಾರಂಭದಲ್ಲಿ ಸುಬ್ರಹ್ಮಣ್ಯ ವಲಯದ ತಾಲೂಕು ಭಜನೋತ್ಸವ ಸಮಿತಿ 2026 ರ ಅಧ್ಯಕ್ಷರಾದ ಡಾ| ರವಿ ಕಕ್ಕೆಪದವು, ಸುಬ್ರಹ್ಮಣ್ಯ ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಸತೀಶ್ ಟಿ.ಎನ್, ಸುಬ್ರಹ್ಮಣ್ಯ ವಲಯದ ಭಜನಾ ಪರಿಷತ್ ನ ವಲಯ ಅಧ್ಯಕ್ಷರಾದ ಚಂದ್ರಶೇಖರ ಕೊಂದಳ, ಸುಬ್ರಹ್ಮಣ್ಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ದಿನೇಶ್, ಕಲ್ಲಾಜೆ ಒಕ್ಕೂಟದ ಅಧ್ಯಕ್ಷರಾದ ಮೋನಪ್ಪ ಗೌಡ, ಕುಲ್ಕುಂದ ಒಕ್ಕೂಟದ ಅಧ್ಯಕ್ಷರಾದ ಹರಿಪ್ರಸಾದ್, ಸುಬ್ರಹ್ಮಣ್ಯ ಒಕ್ಕೂಟದ ನೂತನ ಅಧ್ಯಕ್ಷರಾದ ಶ್ರೀಮತಿ ರತ್ನಾವತಿ ಹಾಗೂ ಕುಲ್ಕುಂದ ಒಕ್ಕೂಟದ ನೂತನ ಒಕ್ಕೂಟದ ಅಧ್ಯಕ್ಷರಾದ ರವಿಚಂದ್ರ ಉಪಸ್ಥಿತರಿದ್ದರು.

ಕುಲ್ಕುಂದ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಹರಿಣಾಕ್ಷಿ ಸಾಧನೆಯ ವರದಿ ಮಂಡನೆ ಮಾಡಿದರು. ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರವನ್ನು ಮತ್ತು ನೂತನ ಒಕ್ಕೂಟದ ಕಾರ್ಯದರ್ಶಿಗಳಿಗೆ ದಾಖಲಾತಿ ಹಸ್ತಾಂತರ ಮಾಡಲಾಯಿತು. ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರನ್ನು, ವಲಯದ ಭಜನಾ ಪರಿಷತ್ ನ ಪದಾಧಿಕಾರಿಗಳನ್ನು, ನವಜೀವನ ಸಮಿತಿಯ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟಗಳ ನಿಕಟ ಪೂರ್ವ ಪದಾಧಿಕಾರಿಗಳು, ನೂತನ ಪದಾಧಿಕಾರಿಗಳು, ಸುಬ್ರಹ್ಮಣ್ಯ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಶೈಲಜಾ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಎಲ್ಲಾ ಸದಸ್ಯರುಗಳು, ನವಜೀವನ ಸಮಿತಿಯ ಸದಸ್ಯರುಗಳು, ಯೋಜನೆಯ ಎಲ್ಲಾ ಹಿತೈಷಿ ಬಂಧುಗಳು ಭಾಗವಹಿಸಿದರು.

ಈ ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ.ಕೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಒಕ್ಕೂಟದ ನಿಕಟ ಪೂರ್ವ ಉಪಾಧ್ಯಕ್ಷರಾದ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು. ಶ್ರದ್ದಾ ಸಂಘದ ಸದಸ್ಯರಾದ ಶ್ರೀಮತಿ ಜಯಶ್ರೀ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading