ನಾರಿ ಸುಂದರವಾಗಿ ಕಾಣಲು ಕೇಶರಾಶಿ ಕೂಡಾ ತುಂಬಾ ಮುಖ್ಯ. ಆದರೆ ಸೌಂದರ್ಯದ ಸಂಕೇತವಾದ ಕೂದಲನ್ನು ದಾನ ಮಾಡುವುದೆಂದರೆ, ಹೆಣ್ಮಕ್ಕಳಿಗೆ ಅದೊಂದು ಸಂಕಟವೇ ಸರಿ. ಅಂಥದ್ದರಲ್ಲಿ ಇಲ್ಲೊಬ್ಬಾಕೆ ಹೆಣ್ಣುಮಗಳು ತನ್ನ ಸುಂದರ ಕೇಶವನ್ನು ಕ್ಯಾನ್ಸರ್ ಪೀಡಿತ ಸ್ನೇಹಿತೆಗೆ ದಾನವಿತ್ತಿದ್ದಾರೆ. ಸುಳ್ಯ ಮೂಲದ ಸದ್ಯ ಮಂಗಳೂರು ನಿವಾಸಿಯಾಗಿರುವ ರೇಶ್ಮಾ ರಾಮದಾಸ್ ಈ ಮಹತ್ಕಾರ್ಯ ಮಾಡಿರುವವರು.
ಈಗ ಮಂಗಳೂರಿನ ಶಕ್ತಿನಗರ ನಿವಾಸಿಯಾಗಿರುವ ರೇಷ್ಮಾ ರಾಮದಾಸ್ ಅವರು ಕ್ಯಾನ್ಸರ್ ಪೀಡಿತ ಹುಡುಗಿ ಅಥವಾ ಮಹಿಳೆಯ ಮುಖದಲ್ಲಿ ಮಂದಹಾಸ ಮೂಡಿಸಲು ತನ್ನ ಸುಂದರವಾದ ಕೂದಲನ್ನು ದಾನ ಮಾಡಿದ್ದಾರೆ.
”ಎರಡು ವರ್ಷಗಳ ಹಿಂದೆ, ನನ್ನ ಸ್ನೇಹಿತೆ ತನ್ನ ಕೂದಲನ್ನು ದಾನ ಮಾಡಿದ್ದಳು, ಆಕೆಯನ್ನು ನೋಡಿ ಪ್ರೇರಣೆಗೊಂಡು ನಾನು ಕೂಡ ಕೂದಲು ದಾನ ಮಾಡಿದ್ದೇನೆ. ಕೂದಲನ್ನು ಹೇಗೆ ದಾನ ಮಾಡಬಹುದು ಮತ್ತು ಯಾರನ್ನು ಸಂಪರ್ಕಿಸಬೇಕು ಎಂದು ನನಗೆ ತಿಳಿದಿರಲಿಲ್ಲ. ನನ್ನ ಕೂದಲು ಉದ್ದ ಇರುವುದರಿಂದ ದಾನ ಮಾಡಲು ಬಯಸುತ್ತಿದ್ದೆ. ನನ್ನ ಪತಿ ರಾಮದಾಸ್ ಅವರು ಹೇರ್ ಬ್ಯಾಂಕ್ ಅನ್ನು ಶಿಫಾರಸು ಮಾಡಿದರು, ಇದು ನನ್ನ ಕೂದಲನ್ನು ದಾನ ಮಾಡಲು ಒಂದು ಸುವರ್ಣಾವಕಾಶವಾಗಿತ್ತು, ಇದಕ್ಕಾಗಿ ನಾನು ಸಂತೋಷದಿಂದ ಒಪ್ಪಿಕೊಂಡೆ. ಕ್ಯಾನ್ಸರ್ ರೋಗಿಗಳಿಗೆ ನಾವು ಏನನ್ನಾದರೂ ನೀಡಿದಾಗ ಅವರು ಹೇಗೆ ಸಂತೋಷ ಪಡುತ್ತಾರೆ ಎಂಬ ವೀಡಿಯೊಗಳನ್ನು ನಾನು ನೋಡಿದ್ದೆ. ಹೀಗಾಗಿ ನನ್ನ ಕೂದಲನ್ನು ತ್ರಿಶೂರ್‌ನಲ್ಲಿರುವ ಹೇರ್ ಬ್ಯಾಂಕ್‌ಗೆ ದಾನ ಮಾಡಲು ನಿರ್ಧರಿಸಿದೆ. ಈ ನಿರ್ಧಾರದಲ್ಲಿ ನನ್ನ ಪತಿ ನನ್ನನ್ನು ಬೆಂಬಲಿಸಿದರು. ಕ್ಯಾನ್ಸರ್ ರೋಗಿಯ ಮುಖದಲ್ಲಿ ಮಂದಹಾಸವನ್ನು ತರುವುದಕ್ಕಾಗಿ ನನ್ನ ಕೂದಲನ್ನು ದಾನ ಮಾಡಿರುವುದರಿಂದ ನಾನು ತುಂಬಾ ಖುಷಿಪಟ್ಟಿದ್ದೇನೆ ಎಂದು ರೇಷ್ಮಾ ತಿಳಿಸಿದ್ದಾರೆ.
ರೇಷ್ಮಾ ತನ್ನ ಉದ್ದವಾದ ಕೇಶರಾಶಿಯ ಮುಕ್ಕಾಲು ಭಾಗವನ್ನು ಕತ್ತರಿಸಿ ನೀಡಿದ್ದಾರೆ. ಅವರ ಈ ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಕಾರಣವಾಗುತ್ತಿದೆ.
ರೇಷ್ಮಾ ಅವರು ಸುಳ್ಯದ ರಥಬೀದಿಯಲ್ಲಿ ಮಂಜುನಾಥ ಆಯಿಲ್ ಮಿಲ್ ನಡೆಸುತ್ತಿರುವ ಕೇರ್ಪಳ ನಿವಾಸಿ ರಾಮ ಪಾಟಾಳಿಯವರ ಪುತ್ರಿ. ಪತಿ ರಾಮದಾಸ್ ಅವರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.
- Saturday
- November 23rd, 2024