ಕುಕ್ಕೆಯಲ್ಲೊಂದು ಕುಮಾರಧಾರೆ

ಪ್ರಕೃತಿದತ್ತವಾದ ಕುಮಾರ ಪರ್ವತದ ತಪ್ಪಲಿನಿಂದ ಸುಬ್ರಹ್ಮಣ್ಯನ ಮಡಿಲಲ್ಲಿ ಧಾರೆಯಾಗುವ ನದಿಯೇ ಕುಮಾರಧಾರೆ. ಮೇಲಿನಿಂದ ಹರಿದು ಬರುವುದರಿಂದ ಧಾರೆ ಎಂದಾಗಿದ್ದು ಜನರ ಬಾಯಲ್ಲಿ ಕುಮಾರಧಾರವಾಗಿದೆ. ಈ ನದಿಯು ಪುಣ್ಯತೀರ್ಥವಾಗಿ ಸದಾ ಹರಿಯುತ್ತಿದೆ. ಕುಮಾರ ಧಾರೆಯಲ್ಲಿ ಮಿಂದು, ಕುಕ್ಕೆಯಲ್ಲಿ ಉಂಡು ಜೀವನ ಪಾವನಗೊಳಿಸಿಕೊಂಡೆವು ಎಂಬುದು ಭಕ್ತಾದಿಗಳ ಮಾತಾಗಿದೆ. ಈ ನದಿಗೆ ಅದರದೇ ಆದ ಮಹತ್ವವಿದೆ. ಸುಬ್ರಹ್ಮಣ್ಯನು ತಾರಕಾಸುರನನ್ನು ನಿಗ್ರಹಿಸಿ ತನ್ನ ಆಯುಧವನ್ನು ಈ ತೀರ್ಥದಲ್ಲಿ ತೊಳೆದನು ಎಂಬ ಪುರಾಣ ಕಥೆ, ಈ ತೀರ್ಥದಲ್ಲಿ ಸ್ನಾನ ಮಾಡಿದರೆ ರೋಗ ರುಜಿನ ನಿವಾರಣೆಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದ್ದರೆ, ಅಗಣಿತ ಗಿಡಮೂಲಿಕೆಗಳಿರುವ ಪರ್ವತದ ಮೂಲದಿಂದ ಇಳಿದು ಬರುವ ನೀರಿನಲ್ಲಿ ಔಷಧಿಯ ಗುಣ ಹೊಂದಿರುವುದರಿಂದ ಚರ್ಮರೋಗವು ನಿವಾರಣೆಯಾಗುತ್ತದೆ ಎಂಬ ವೈಜ್ಞಾನಿಕ ಕಾರಣಗಳು ಇವೆ ಇಂತಹ ಕುಮಾರ ಧಾರೆಯ ನದಿ ಪುಣ್ಯತೀರ್ಥದ ಬದಲಾಗಿ ಮಾಲಿನ್ಯದ ಆತಂಕದಲ್ಲಿದೆ. ನದಿಗಳನ್ನು ನಾವುಳಿಸಿದರೆ, ಭವಿಷ್ಯದಲ್ಲಿ ನದಿಗಳು ನಮ್ಮನ್ನು ಉಳಿಸುತ್ತದೆ ಎಂಬ ಮಾತಿದೆ. ಈ ನದಿ ಕೇವಲ ನೀರಲ್ಲ ಮೂಲಗಳಲ್ಲಿ ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿ, ಹಲವು ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂತಹ ನದಿಯಲ್ಲಿ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ತೀರ್ಥ ಸ್ನಾನ ಮಾಡಲು ಧರಿಸಿಕೊಂಡ ಬಟ್ಟೆಗಳೊಂದಿಗೆ ಒಳ ಉಡುಪು ಸಮೇತ ಮಹಿಳೆ ಪುರುಷರೆನ್ನದೇ ನದಿಯೊಳಗೆ ಎಸೆಯುತ್ತಾರೆ ಇದು ಎಷ್ಟರ ಮಟ್ಟಿಗೆ ಸಮಂಜಸವೊ ತಿಳಿಯದು? ಇದಲ್ಲದೆ ಪ್ಲಾಸ್ಟಿಕ್,ತ್ಯಾಜ್ಯಗಳನ್ನು ನೀರಿನಲ್ಲಿ ಬಿಸಾಡಿ ನಿರ್ಲಕ್ಷವನ್ನು ತೋರುವುದರಿಂದ ಕಲುಷಿತಗೊಳ್ಳುವ ಸ್ಥಿತಿಯಲ್ಲಿದೆ. ಜನರ ಅನುಕೂಲಕ್ಕಾಗಿ ದೇವಾಲಯ ಮತ್ತು ಗ್ರಾಮ ಪಂಚಾಯತ್ ಭಕ್ತರು ಬಳಸಿದ ವಸ್ತುಗಳನ್ನು ಎಸೆಯಲು ಕಸದ ತೊಟ್ಟಿ ವ್ಯವಸ್ಥೆಯನ್ನು ಮಾಡಿರುತ್ತದೆ ಇವುಗಳನ್ನು ಬಳಸಿಕೊಳ್ಳದೆ ಮನುಷ್ಯರು ಅಲಕ್ಷ್ಯತನ ತೋರಿಸುತ್ತಿದ್ದಾರೆ. ಹೀಗಾದರೆ ಮುಂದೊಂದು ದಿನ ಪವಿತ್ರಧಾರೆಯಾ ಅಪವಿತ್ರ ಕಥೆಯಾಗಬಹುದು. ನದಿ ನಮ್ಮದಾದರೆ ಸ್ವಚ್ಛತೆ ನಮ್ಮ ಕರ್ತವ್ಯ ಹೌದು ಆದರೆ ಅದು ಹದಗೆಡದೆ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದರ ಸಂರಕ್ಷಣೆ ಕೇವಲ ಒಬ್ಬರಿಬ್ಬರಿಂದ ಸಾಧ್ಯವಿಲ್ಲ. ಸುಬ್ರಹ್ಮಣ್ಯ ಪರಿಸರದ ಹಲವಾರು ಸಂಘ ಸಂಸ್ಥೆಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಕೊಳ್ಳುತ್ತಾರೆ ಆದರೆ ಸಾವಿರಾರು ಭಕ್ತರು ಪ್ರತಿನಿತ್ಯ ಕ್ಷೇತ್ರಕ್ಕೆ ಬರುವುದರಿಂದ ಇದು ಕಷ್ಟ ಸಾಧ್ಯವಾದ ಕೆಲಸವಾಗಿದೆ ಇದಲ್ಲದೆ ಕೇವಲ ಸಂಘ-ಸಂಸ್ಥೆಗಳು ಸ್ವಚ್ಛಗೊಳಿಸುವುದೇ ಇದಕ್ಕೆ ಪರಿಹಾರವಲ್ಲ. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತಾದಿಗಳು ಷಣ್ಮುಖನಿಗೆ ಸಲ್ಲಿಸುವ ಪೂಜೆ ಶ್ರೇಷ್ಠವಾದಂತೆ ಪುಣ್ಯತೀರ್ಥವು ಮಹತ್ವದಾಗಿದೆ ಎಂಬುದರೊಂದಿಗೆ ನಂಬಿಕೆ ಮತ್ತು ನೈರ್ಮಲ್ಯ ಪ್ರಜ್ಞೆ ಜನರಲ್ಲಿ ಮೂಡಬೇಕು ಹೊರತು ಸ್ವಚ್ಛತಾ ಕಾರ್ಯಕ್ರಮ ಮಾಡುವುದಲ್ಲ, ಇದಕ್ಕಾಗಿ ಪರ ಊರಿಂದ ಬರುವ ಭಕ್ತಾದಿಗಳಿಗೆ ಶ್ರೀ ಕ್ಷೇತ್ರದ ಸ್ವಚ್ಛತೆಯ ಬಗ್ಗೆ ಗಮನ ಸೆಳೆಯುವಂತಹ ಫಲಕಗಳನ್ನು ಅಗತ್ಯ ಸ್ಥಳಗಳಲ್ಲಿ ನೆಡುವ ಮತ್ತು ನದಿಯ ವಿಶೇಷತೆಯನ್ನು ಸಮೂಹ ಮಾಧ್ಯಮಗಳ ಮೂಲಕ ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಬೇಕು. ಕ್ಷೇತ್ರದ ಪವಿತ್ರತೆ ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ನೀರು ಪವಿತ್ರ, ನದಿ ಅಮೂಲ್ಯ ಹಾಗಾಗಿ ನಾವೆಲ್ಲರೂ ಸೇರಿ ಪುಣ್ಯತೀರ್ಥವನ್ನು ಸಂರಕ್ಷಿಸೋಣ.

ಸುಮಿತ್ರ ಅರಂಪಾಡಿ
ಕನ್ನಡ ಉಪನ್ಯಾಸಕಿ
ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading