ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ವತಿಯಿಂದ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಇವರ ಮಾತೃಶ್ರೀ ವನಜಾಕ್ಷಿ ಜಯರಾಮ ಇವರ ಸ್ಮರಣಾರ್ಥ ನೀಡುವ 7ನೇ ವರ್ಷದ ವನಜ ರಂಗಮನೆ ಪ್ರಶಸ್ತಿಗೆ ಯಕ್ಷಗಾನದ ಹಿರಿಯ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯನ್ನು ಅಗಸ್ತ್ 28 ರಂದು ಪ್ರಸ್ತುತ ಅವರು ವಾಸವಿರುವ,ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆ ಮನೆಯಲ್ಲಿ ನೀಡಲು ಪ್ರಶಸ್ತಿ ಆಯ್ಕೆ ಸಮಿತಿ ತೀರ್ಮಾನಿಸಿದೆ. ಪ್ರಶಸ್ತಿಯು ಯಕ್ಷ ಸ್ಮರಣಿಕೆ,ಪ್ರಶಸ್ತಿ ಫಲಕ ಹಾಗೂ 10,000 ನಗದು ಒಳಗೊಂಡಿರುತ್ತದೆ ಎಂದು ರಂಗಮನೆ ಅಧ್ಯಕ್ಷ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ
ಯಕ್ಷಗಾನ ತಾಳಮದ್ದಲೆಯ ಪಂಡಿತ ಪರಂಪರೆಯ ಹಿರಿಯ ಅರ್ಥಧಾರಿ, ಪೌರಾಣಿಕ ವೈಚಾರಿಕತೆಯ ಮೇರು ಚಿಂತಕ , ಪ್ರವಚನಕಾರ, ವಾಗ್ಮಿ ,ಅತ್ಯುತ್ತಮ ಬರಹಗಾರ,ನಿವೃತ್ತ ಮುಖ್ಯೋಪಧ್ಯಾಯ ಹೀಗೆ ಬಹುಮುಖಿ ವ್ಯಕ್ತಿತ್ವದ ಮೇರು ಪ್ರತಿಭೆ, ವಿದ್ವಾಂಸ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು.
ಆಟ ಕೂಟಗಳ ವಿಕಾಸ ಪಲ್ಲಟಗಳನ್ನು ನೇರ ಕಂಡುಂಡು, ಅದರ ಜತೆಯಲ್ಲೇ ಪಳಗಿ ಬೆಳೆದ ಇವರಿಗೀಗ 84ರ ಹರೆಯ. ಕಳೆದ 65 ವರ್ಷಗಳಿಂದ ಯಕ್ಷಗಾನದ ಅರ್ಥದಾರಿಯಾಗಿ ಪುರಾಣದ ಪಾತ್ರಗಳಿಗೆ ತನ್ನ ಅಧ್ಯಯನಶೀಲ ಪಾಂಡಿತ್ಯದ ಮೂಲಕ ಹೊಸ ದೃಷ್ಟಿಯ ಆಯಾಮ ನೀಡಿದವರು. ಖಚಿತವಾದ ಪೌರಾಣಿಕ ಮಾಹಿತಿಗಳಿಂದ ಸಮೃದ್ಧವಾದ ತುಂಬು ಶ್ರೀಮಂತ ಅರ್ಥಗಾರಿಕೆ ಇವರದ್ದು. ಸಾಮಗ, ಶೇಣಿ, ಪೆರ್ಲ ಪಂಡಿತರೇ ಮೊದಲಾದ ವಿದ್ವತ್ ಪರಂಪರೆಯ ಅರ್ಥಧಾರಿಗಳೊಂದಿಗೆ ಬೆಳೆದವರು. ಕಿರಿಯ ಅರ್ಥಧಾರಿಗಳೆಲ್ಲರಿಗೆ ಇವರೊಬ್ಬ ಮಾಹಿತಿಕೋಶ,ಮಾರ್ಗದರ್ಶಕ. ಯಕ್ಷಲೋಕದ ಸ್ತ್ರೀ ಪಾತ್ರಗಳಿಗೆ ತಾಳಮದ್ದಳೆಯಲ್ಲಿ ಮಹಿಳಾ ಸಂವೇದನೆಯ ಧ್ವನಿಯಾದವರು. ಸ್ತ್ರೀತ್ವದ ಒಳ ತುಮುಲಗಳಿಗೆ ಭಾವದ ಜೀವ ಕೊಟ್ಟವರಲ್ಲಿ ಇವರು ಪ್ರಮುಖರು. ಮಹಾಭಾರತ ಕೋಶ,ರಾಮಾಯಣ ಕೋಶ, ಅರ್ಥ ಸಹಿತ ಕುಮಾರ ವಿಜಯ,ದಶಾವತಾರ ಪ್ರವಚನ,ಭದ್ರಾಂಗದ ನಾಟಕ,ಶೇಣಿಯವರ ಜೀವನ ಚರಿತ್ರೆ, ಶ್ರೀಮದ್ ಭಾಗವತ ಕೋಶ ಮುಂತಾದವು ಇವರು ಬರೆದ ಮಹತ್ವದ ಗ್ರಂಥಗಳು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ,ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ,ಪೊಳಲಿ ಶಂಕರನಾರಾಯಣ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಸನ್ಮಾನಗಳು ಇವರಿಗೆ ಲಭಿಸಿವೆ. ಈ ಎಲ್ಲಾ ಕಾರಣಗಳಿಂದ ಈ ಭಾರಿಯ ವನಜ ರಂಗಮನೆ ಪ್ರಶಸ್ತಿ ಮೂಡಂಬೈಲು ಶಾಸ್ತ್ರಿಗಳಿಗೆ ಗೌರವಾದರಗಳೊಂದಿಗೆ ಸಲ್ಲುತ್ತಿದೆ.