ಗುತ್ತಿಗಾರಿನ ಬಾಕಿಲ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಸ್ಕೂಟಿ ನಡುವೆ ಫೆ.11ರಂದು ಅಪಘಾತ ನಡೆದಿತ್ತುಮ. ಸ್ಕೂಡಿ ಚಲಾಯಿಸುತ್ತಿದ್ದ ಶಿವರಾಮ ಗೌಡ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಸಹಸವಾರೆಯಾಗಿದ್ದ ಅವರ ಪುತ್ರಿ ತೀವ್ರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವರಾಮ ಗೌಡರು ಮೃತಪಟ್ಟಿದ್ದರಿಂದ ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ ಖಾಸಗಿ ಡೈರಿ ಪತ್ತೆಯಾಗಿತ್ತು. ಅದನ್ನು ತೆರೆದು ನೋಡಿದಾಗ 2015 ರಲ್ಲಿ ಬರೆದಿಟ್ಟಿದ್ದ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿತ್ತು. ತಾನು ಮೃತಪಟ್ಟರೆ ತನ್ನ ಅಂತ್ಯಸಂಸ್ಕಾರವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರದಲ್ಲಿರುವ ಮಡಿವಾಳಕಟ್ಟೆ ಸ್ಮಶಾನದಲ್ಲಿ ನೆರವೇರಿಸುವಂತೆ ಮತ್ತು ಚಿತಾ ಭಸ್ಮವನ್ನು ನೇತ್ರಾವತಿ, ಕಾವೇರಿ, ಗಂಗಾ ನದಿಯಲ್ಲಿ ಬಿಡುವಂತೆಯೂ, ಸ್ವಲ್ಪ ಚಿತಾ ಭಸ್ಮವನ್ನು ಮನೆಯ ಬಳಿ ಗುಂಡಿ ತೆಗೆದು ಹಾಕಿ ಅದರ ಮೇಲೆ ಕಲ್ಪವೃಕ್ಷವನ್ನು ನೆಡುಬೇಕು, ಅಲ್ಲದೆ ಪ್ರತಿ ವರ್ಷ ತನ್ನ ನಿಧನದ ದಿನದಂದು ಅನ್ನಸಂತರ್ಪಣೆ ನಡೆಸಬೇಕೆಂದು ಅಂತಿಮ ಇಚ್ಚೆಯನ್ನು ಬರೆದಿಟ್ಟಿದ್ದರು. ಮೃತರ ಇಚ್ಚೆಯಂತೆ ಪುತ್ತೂರಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಮನೆಯವರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.