Ad Widget

ಜಮ್ಮುಕಾಶ್ಮೀರದಲ್ಲಿ ಮೊದಲ ಬಾರಿಗೆ ಅದ್ದೂರಿ ನವರಾತ್ರಿ ಉತ್ಸವ – ಮನಸೂರೆಗೊಂಡ ಕಳಂಜದ ನಿನಾದ ಸಾಂಸ್ಕೃತಿಕ ಕೇಂದ್ರದ ಭರತನಾಟ್ಯ

ಜಮ್ಮುಕಾಶ್ಮೀರದ ಕಟ್ರಾ  ಶ್ರೀ ಮಾತಾ ವೈಷ್ನೋದೇವಿ ಶ್ರೈನ್ ಬೋರ್ಡ್  ನವರಾತ್ರಿ ಅಂಗವಾಗಿ ಒಂಭತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರೀಯ ಭಕ್ತಿ ಗೀತೆಗಳ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಿತ್ತು. ಇದರ ಉದ್ಘಾಟನಾ ಸಮಾರಂಭದಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಷನ್ ನೇತೃತ್ವದ ದೇವಿಮಹಾತ್ಮೆ ಯಕ್ಷಗಾನ ಮತ್ತು ಕಳಂಜದ ನಿನಾದ ಸಾಂಸ್ಕೃತಿಕ ಕೇಂದ್ರದ ಭರತನಾಟ್ಯ ಕಾರ್ಯಕ್ರಮ ನೆರದವರ ಮನಸೂರೆಗೊಂಡಿತು.   ವೈಷ್ನೋದೇವಿಯ ಪದತಳ ಜಮ್ಮುವಿನ ಕಟ್ರಾದಲ್ಲಿ ಮೊದಲ ಬಾರಿಗೆ ನವರಾತ್ರಿ ಉತ್ಸವ ಅದ್ದೂರಿಯಾಗಿ ಆರಂಭಗೊಂಡಿದ್ದು, ಪ್ರಥಮ ದಿನ ಜಮ್ಮುವಿನ ಸಾಂಸ್ಕೃತಿಕ ಸಚಿವಾಲಯದ ಸಹಯೋಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರಿನ ವತಿಯಿಂದ ಪಾವಂಜೆ ಮೇಳದ ಕಲಾವಿದರಿಂದ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಜಮ್ಮುವಿನ ವಿದ್ಯುತ್ ಸಚಿವಾಲಯದ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಒಕ್ಟೋಬರ್ 2ರಂದು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಕಂಡು ಪುಳಕಿತರಾದ ಗವರ್ನರ್ ಮನೋಜ್ ಸಿನ್ಹಾ ಅವರು ವೈಶ್ನೋದೇವಿ ಸನ್ನಿಧಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆಸಿಕೊಡುವಂತೆ ಒತ್ತಾಯಿಸಿದ್ದರು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಕಲಾವಿದರ ತಂಡ ಹಿಂದಿಯಲ್ಲಿ ದೇವಿ ಮಹಾತ್ಮೆ ಪ್ರದರ್ಶನ ನೀಡಿ ಕಟ್ರಾದ 2000 ಕ್ಕೂ ಮಿಗಿಲಾಗಿ ಸೇರಿದ ಜನಸ್ತೋಮಕ್ಕೆ ರಸದೌತಣ ಉಣಬಡಿಸಿ ಮಹಿಷಾಸುರ ವಧೆಯ ಕಥೆಯನ್ನು ಸೊಗಸಾಗಿ ವರ್ಣಿಸಿದರು. ಟೂರಿಸಂ ಇಲಾಖೆಯ ಮುಖ್ಯ ಕಾರ್ಯದರ್ಶಿ ಅರುಣ್ ಮೆಹ್ತಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನವರಾತ್ರಿಯ ದುರ್ಗೆಯ ವೈಭವವನ್ನು ವರ್ಣಿಸಿ ನಮ್ಮ ನಿತ್ಯ ಜೀವನದಲ್ಲೂ ದುಷ್ಟ ಶಿಕ್ಷೆ ಶಿಷ್ಟ ರಕ್ಷೆಯ ಕುರಿತಾಗಿ ನೆರೆದ ಸಭಿಕರನ್ನುದ್ದೇಶಿಸಿ ಮಾತನಾಡಿದರು. 

. . . . .

ತದನಂತರ  ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ, ಸುಳ್ಯದ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದ ಮುಖ್ಯ ರೂವಾರಿ ವಸಂತ ಶೆಟ್ಟಿ ಬೆಳ್ಳಾರೆ ಅವರ ತಂಡದ ವಿದ್ಯಾರ್ಥಿಗಳು ತುಳು-ಕನ್ನಡ ಶಾಸ್ತ್ರೀಯ ಸಂಗೀತದ ಪದಗಳಿಗೆ ಭರತನಾಟ್ಯ ಪ್ರದರ್ಶನ ನೀಡಿ ನೆರೆದ ಕಲಾ ರಸಿಕರ ಮನ ಗೆದ್ದರು.  ದೆಹಲಿ ಯಕ್ಷಧ್ರುವ ಪಟ್ಲ ಘಟಕದ ಕಾರ್ಯದರ್ಶಿ ಪೃಥ್ವಿ ಕಾರಿಂಜೆ ಕಾರ್ಯಕ್ರಮ ನಿರೂಪಿಸಿದರು. ಈ ಮೂಲಕ ಕರ್ನಾಟಕದ ಗ್ರಾಮೀಣ ಕಲೆಯ ಪ್ರಕಾರಗಳು ಮೊದಲ ಬಾರಿಗೆ ದೇಶದ ಮುಕುಟವಾದ ಜಮ್ಮುವಿನ ವೈಷ್ನೋದೇವಿಯ ಪದಕಮಲಗಳಿಗೆ ಸಮರ್ಪಿತಗೊಂಡಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!