Ad Widget

ಹಳದಿ ರೋಗ ಮತ್ತು ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಶೀಘ್ರ ಕ್ರಮ – ಸುಬ್ರಹ್ಮಣ್ಯದಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿಕೆ


ಸುಬ್ರಹ್ಮಣ್ಯ: ಶಿವಮೊಗ್ಗ, ಮಂಗಳೂರು ಉಡುಪಿ ಭಾಗದಲ್ಲಿ ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕಿ ರೋಗ ಮತ್ತು ಹಳದಿ ರೋಗ ನಿಯಂತ್ರಣಕ್ಕೆ ಸರಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ.ಈ ರೋಗಗಳಿಂದ ಈ ಭಾಗದ ರೈತರು ಹೆಚ್ಚು ತೊಂದರೆಗೀಡಾಗಿದ್ದಾರೆ ಎಂದು ತಿಳಿದಿದೆ.ಆದುದರಿಂದ ಈ ರೋಗಗಳ ನಿಯಂತ್ರಣಕ್ಕೆ ಸರಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಶಿವಮೊಗ್ಗದ ಕೃಷಿ ವಿಶ್ವ ವಿದ್ಯಾನಿಲಯದ ಉಪಕುಲಪತಿ ಮತ್ತು ಕೃಷಿ ವಿಜ್ಞಾನಿ ಡಾ.ಜಗದೀಶ್ ಅವರಿಗೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದ ಬಗ್ಗೆ ಅಧ್ಯಾಯನ ನಡೆಸಿ 10 ದಿನಗಳ ಒಳಗೆ ವರದಿ ಸಲ್ಲಿಸಲು ತಿಳಿಸಲಾಗಿದೆ.ಈಗಾಗಲೇ ಡಾ.ಜಗದೀಶ್ ನೇತೃತ್ವದ ನಿಯೋಗ ಈ ಬಗ್ಗೆ ಕಾರ್ಯಪ್ರವೃತ್ತವಾಗಿದೆ.ಅವರ ವರದಿ ಬಂದ ತಕ್ಷಣ ರೈತರಿಗೆ ಅನುಕೂಲವಾಗುವ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ ಹೇಳಿದರು.
ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆದಿತ್ಯವಾರ ಭೇಟಿ ನೀಡಿ ಶ್ರೀ ದೇವರ ದರುಶನದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ರೋಗಗಳನ್ನು ನಿಯಂತ್ರಣ ಮಾಡಲು ಕೃಷಿ ವಿಜ್ಞಾನಿಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು.ಈ ಬಗ್ಗೆ ವೈಜ್ಞಾನಿಕವಾಗಿ ಅಧ್ಯಾಯನ ಮಾಡಿ ರೋಗ ನಿಯಂತ್ರಣದ ಸೂತ್ರಗಳನ್ನು ಕಂಡು ಹಿಡಿಯಲಾಗುವುದು.ಈ ಮೂಲಕ ಬೆಳೆಗಳಿಗೆ ಭಾದಿಸುವ ರೋಗಗಳಿಂದ ರೈತರು ಪಡುವ ಸಂಕಷ್ಟವನ್ನು ಹೋಗಲಾಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.
ರೈತರ ವಿಶೇಷ ಅನುಕೂಲತೆಗಾಗಿ ಕೃಷಿ ಭಾಗ್ಯ ಯೋಜನೆಯನ್ನು ಸ್ಥಾಪನೆ ಮಾಡಲಾಗಿದೆ.ಈ ಮೂಲಕ ರೈತರಗೆ ವಿಶೇಷ ಅನುಕೂಲತೆಗಳನ್ನು ಒದಗಿಸಲಾಗಿದೆ. ಹಾರ್ವೆಸ್ಟ್ ಹೈಟೆಕ್ ಹಬ್ ಅನ್ನುವ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ.ಇದಕ್ಕೆ 100 ಕೋಟಿ ರೂ ಅನುದಾನ ಬಿಡುಗಡೆಗೊಳಿಸಲಾಗಿದೆ.ಇದರ ಮೂಲಕ ಕಬ್ಬು, ಭತ್ತ ಇತ್ಯಾದಿ ಬೆಳೆಯುವ ರೈತರಿಗೆ ಯಂತ್ರ ಖರೀದಿಗೆ ಅನುಕೂಲತೆ ಒದಗಿಸಲಾಗಿದೆ ರೈತರಿಗೆ ಹೆಚ್ಚಿನ ಆದ್ಯತೆಯನ್ನು ಸರಕಾರ ನೀಡುತ್ತಿದೆ.ಈಗಾಗಲೇ ರೈತರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.ಕಾಂಗ್ರೆಸ್ ಸರಕಾರ ಬಂದ ನಂತರ ರೈತರ ಆತ್ಮಹತ್ಯೆಗಳಂತಹ ಪ್ರಕರಣಗಳು ಕಡಿಮೆಯಾಗಿದೆ. ಅನೇಕ ವಿನೂತನ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಬಂದ ನಂತರ ರೈತರ ಅನುಕೂಲತೆಗೆ ಮಾಡಲಾಗಿದೆ.ರೈತರ ಹಿತಕ್ಕಾಗಿ ಇನ್ನಷ್ಟು ವಿಶೇಷ ಯೋಜನೆಗಳನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಕೊರತೆ ಇಲ್ಲ.ಇವುಗಳು ಹೇರಳವಾಗಿ ಸಂಗ್ರಹವಾಗಿದೆ. ರಾಜ್ಯದ ರೈತರಿಗೆ ಬೇಕಾದಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲಾಗಿದೆ.ಕಳಪೆ ಬಿತ್ತನೆ ಬೀಜ ವಿತರಣೆಗೆ ಕಡಿವಾಣ ಹಾಕಲಾಗಿದೆ. ಗುಲ್ಬರ್ಗ ವ್ಯಾಪ್ತಿಯಲ್ಲಿ ನಿಟ್ಟೆ ರೋಗದಿಂದಾಗಿ ಬೆಳೆ ನಷ್ಟ ಉಂಟಾಗಿತ್ತು.ಈ ಹಿಂದಿನ ಸರಕಾರ ಪರಿಹಾರ ಘೋಷಣೆ ಮಾಡಿದ್ದರೂ ನೀಡಿರಲಿಲ್ಲ.ನಮ್ಮ ಸರಕಾರ ಬಂದ ತಕ್ಷಣ ಈ ಭಾಗದ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ರೂ.150 ಕೋಟಿ ಬಿಡುಗಡೆಗೊಳಿಸಿ ನೀಡಲಾಗಿದೆ ಎಂದು ಕೃಷಿ ಸಚಿವರು ಹೇಳಿದರು.
ಸಾವಯವ ಕೃಷಿ ಯೋಜನೆಯಡಿಯಲ್ಲಿ ರೈತರಿಗೆ ಒಂದು ಹೆಕ್ಟೇರ್‌ಗೆ 10ಸಾವಿರ ರೂ ಸಹಾಯಧನ ನೀಡಲಾಗುತ್ತಿದೆ.1 ಅಥವಾ 2 ಹೆಕ್ಟೇರ್ ಭೂಮಿ ಹೊಂದಿದ ರೈತರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.ರೈತರಿಗೆ ರೂ.20 ಲಕ್ಷ ನೀಡುತ್ತಿದ್ದ ಸಾಲದ ಮೊತ್ತವನ್ನು 50ಲಕ್ಷ ರೂಗೆ ಏರಿಸಲಾಗಿದೆ.ಈ ಸಾಲದ ಮೇಲೆ 4% ಬಡ್ಡಿ ರಿಯಾಯಿತಿಯನ್ನು ನೀಡಲಾಗಿದೆ.ರೈತರು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿಯಲ್ಲಿ 4%ನ್ನು ಸರಕಾರ ಭರಿಸಲಿದೆ ಎಂದು ಅವರು ಹೇಳಿದರು.
ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂಬುದಾಗಿ ಗುರುತಿಸಲಾಗಿದೆ.ಹೆಚ್ಚುವರಿಯಾಗಿ ಮತ್ತೆ 21 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗುತ್ತದೆ. ಈ ತಾಲೂಕುಗಳಿಗೆ ಸರಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಲಾಗುವುದು.ಇಲ್ಲಿನ ರೈತರಿಗೆ ರೂ.5 ಲಕ್ಷ ಬಡ್ಡಿ ರಹಿತ ಸಾಲ ನೀಡಲು ತೀರ್ಮಾನಿಸಲಾಗಿದೆ.ಈಗಾಗಲೇ ರಾಜ್ಯದ 90% ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ.ಇನ್ನು ಕೇವಲ 20 ತಾಲೂಕುಗಳನ್ನು ಮಾತ್ರ ಬರ ಪೀಡಿತ ಎಂದು ಘೋಷಿಸಲಾಗಿಲ್ಲ.ಅಲ್ಲೂ ಬರದ ಛಾಯೆ ಇದೆ ಎಂದು ತಿಳಿದು ಬಂದಲ್ಲಿ ಮುಂದಿನ ಹಂತದಲ್ಲಿ ಈ ತಾಲೂಕುಗಳನ್ನು ಕೂಡಾ ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗುತ್ತದೆ.ಈ ತಾಲೂಕುಗಳಲ್ಲಿ ರೈತರ ಸಂಕಷ್ಟ ನಿವಾರಣೆಗೆ ಬೇಕಾದ ಸೂಕ್ತ ಕ್ರಮವನ್ನು ಸರಕಾರ ತೆಗೆದುಕೊಳ್ಳಲಿದೆ ಎಂದು ಎನ್.ಚೆಲುವರಾಯ ಸ್ವಾಮಿ ನುಡಿದರು.
ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ.ಹಾಲಿಗೆ ಲೀಟರ್‌ಗೆ 3 ರೂ ಅನ್ನು ಹೆಚ್ಚುವರಿಯಾಗಿ ಹೈನುಗಾರರಿಗೆ ನೀಡಲು ತೀರ್ಮಾನಿಸಲಾಗಿದೆ.ಈ ಮೂಲಕ ಹೈನುಗಾರಿಕೆಯ ಅಭಿವೃದ್ದಿಗೆ ವಿಶೇಷ ಕಾಳಜಿ ವಹಿಸಲಾಗಿದೆ.ಹೈನುಗಾರಿಕೆಯು ನಮ್ಮ ರಾಜ್ಯದ ವಿಶೇಷ ಸ್ವ ಉದ್ಯೋಗವಾಗಿದ್ದು ಇದರ ಪ್ರಗತಿಗೆ ಇನ್ನಷ್ಟು ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದ ಜನತೆಯ ಸಮಗ್ರ ಅಭಿವೃದ್ದಿಗೆ ಬೇಕಾದ ಯೋಜನೆಗಳನ್ನು ನೆರವೇರಿಸಲಾಗುತ್ತಿದೆ.ಈಗಾಗಲೇ ಅನೇಕ ಅಭಿವೃದ್ದಿ ಕಾರ್ಯಗಳು ನೆರವೇರಿದೆ. ಇದರಲ್ಲಿ ಪ್ರಮುಖವಾಗಿ ಜನತೆಯ ಅನುಕೂಲತೆಗೆ 5 ಗ್ಯಾರಂಟಿಗಳನ್ನು ಘೋಷಿಸಲಾಗಿದೆ.ಇದರಲ್ಲಿ 4 ಗ್ಯಾರಂಟಿಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಯುವನಿಧಿ ಗ್ಯಾರಂಟಿ ಯೋಜನೆಯು ಶೀಘ್ರವೇ ಅನುಷ್ಠಾನಗೊಳ್ಳಲಿದೆ.ಈ 4 ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ 6 ಸಾವಿರ ರೂ ದೊರಕುವಂತ ವ್ಯವಸ್ಥೆ ಆಗಿದೆ.ನಮ್ಮ ಗ್ಯಾರಂಟಿ ಯೋಜನೆಗಳು ಈಗಾಗಲೇ ಗ್ರಾಮೀಣ ಭಾಗ ಸೇರಿದಂತೆ ರಾಜ್ಯದ 99% ಜನತೆಗೆ ತಲುಪಿದೆ ಮತ್ತು ಇದರ ಅನುಕೂಲತೆಗಳನ್ನು ಜನತೆ ಪಡೆದುಕೊಳ್ಳುತ್ತಿದ್ದಾರೆ.ಕಾಂಗ್ರೆಸ್ ಸರಕಾರ ಬಂದ ಬಳಿಕ ಸಾಮಾನ್ಯ ಜನತೆಯ ಅನುಕೂಲತೆಗೆ ಬೇಕಾದ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಅದು ಗ್ರಾಮ ಗ್ರಾಮಗಳ ಜನತೆಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ನಿಕಟಪೂರ್ವ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಾಂಗ್ರೆಸ್ ಯುವ ಮುಖಂಡರಾದ ಶೇಷಕುಮಾರ್ ಶೆಟ್ಟಿ, ಮನೋಜ್ ಕೈಕಂಬ, ಶ್ರೀ ದೇವಳದ ಎಇಒ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!