ಸುಳ್ಯದ ಪ್ರತಿಷ್ಠಿತ ಕೆವಿಜಿ ಶಿಕ್ಷಣ ಸಂಸ್ಥೆಗಳಲ್ಲಿ ಓರ್ವರಾದ ಕೆ ವಿ ರೇಣುಕಾ ಪ್ರಸಾದ್ ರವರಿಗೆ ನಿನ್ನೆ ಕರ್ನಾಟಕ ಹೈ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ ಬೆನ್ನಲ್ಲೆ ಆಂತರಿಕ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಇಂದು ಡಾ.ರೇಣುಕಾ ಪ್ರಸಾದ್ ರವರ ಪತ್ನಿ ಡಾ. ಜ್ಯೋತಿ ಆರ್. ಪ್ರಸಾದ್ ರವರು ಪತ್ರಿಕಾಗೋಷ್ಠಿ ಕರೆದು ನೋವು ಹಂಚಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ಇಂದು ಮುಂಜಾನೆ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕೆ ವಿ ಚಿದಾನಂದ ಮತ್ತು ಅವರ ಪುತ್ರ ಅಕ್ಷಯ್ ಕೆ ಸಿ ರವರು ನಮ್ಮ ಸಂಸ್ಥೆಯ ಪ್ರಾಂಶುಪಾಲರ ಕಛೇರಿಗೆ ಆಗಮಿಸಿ ನಾವು ಇದನ್ನು ವಶಕ್ಕೆ ಪಡೆದುಕೊಂಡು ಮುಂದೆ ನಡೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ. ಇದರಿಂದ ವಿಧ್ಯಾರ್ಥಿಗಳು ಮತ್ತು ಸಂಸ್ಥೆಯ ಉದ್ಯೋಗಿಗಳಿಗೆ ಈಗ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು. 2009 ರಲ್ಲಿ ನಮ್ಮ ಮಾವನವರು ಇರುವ ಸಂದರ್ಭದಲ್ಲಿ ನಮಗೆ ನೋಡಿಕೊಳ್ಳಲು ಜವಾಬ್ದಾರಿಗಳನ್ನು ಹಂಚಿಕೊಂಡಿದ್ದರು. ಅದರಂತೆ ಇಲ್ಲಿಯ ತನಕ ಮಾಡಲಾಗಿದೆ. ಇದೀಗ ನ್ಯಾಯಾಲಯದ ಆದೇಶ ಮತ್ತು ಇಂತಹ ನೋವಿನ ಸಂದರ್ಭದಲ್ಲಿ ಈ ರೀತಿಯ ಧೋರಣೆ ತೋರುವುದು ಸರಿಯಲ್ಲ ಎಂದು ಹೇಳಿದರು . ಅಲ್ಲದೇ ಈ ಹಿಂದೆ ಆಡಳಿತ ನಡೆಸಿದ ಅನುಭವ ನನಗಿದೆ. ಮುಂದೆಯು ಆಡಳಿತ ಮಾಡಿಕೊಂಡು ಹೋಗುತ್ತೇನೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ.ರೇಣುಕಾ ಪ್ರಸಾದ್ ರವರ ಪುತ್ರಿ ಅಭಿಜ್ಞಾ ಹಾಗೂ ಸಂಸ್ಥೆಯ ಉದ್ಯೋಗಿಗಳು ಉಪಸ್ಥಿತರಿದ್ದರು.