ಸಂಘಟನೆಗಳು, ಜನಪ್ರತಿನಿಧಿಗಳು ಸರ್ವರ ಹಿತಕ್ಕೆ ಪೂರಕವಾಗಿ ಜನಪರ ಚಿಂತನೆಯ ಕಾರ್ಯಕ್ರಮ ಅನುಷ್ಠಾನಿಸಿದಾಗ ಅದರಿಂದ ಊರಿಗೆ ಒಳಿತಾಗುತ್ತದೆ. ಉದ್ಯೋಗ ಖಾತರಿ ನೋಂದಣಿ ಮೂಲಕ ಅಂತಹ ಪ್ರಯತ್ನ ಇಲ್ಲಿ ಸಾಕಾರಗೊಂಡಿರುವುದು ಶ್ಲಾಘನೀಯ ಸಂಗತಿ ಎಂದು ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಹೇಳಿದರು.
*ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಪೆರುವಾಜೆ ಗ್ರಾ.ಪಂ. ಜಂಟಿ ಆಶ್ರಯದಲ್ಲಿ ಮಾ.28 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ಉದ್ಯೋಗ ಖಾತರಿ ಯೋಜನೆಯ ನೋಂದಣಿ ಹಾಗೂ ಅರ್ಜಿ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.*
ಯಾವುದೇ ಕಾರ್ಯಕ್ರಮಗಳು ಪಕ್ಷಾತೀತ ನೆಲೆಯಲ್ಲಿ ಅನುಷ್ಠಾನಗೊಂಡಲ್ಲಿ ಅದಕ್ಕೆ ಹೆಚ್ಚು ಮೌಲ್ಯ ದೊರೆಯಲು ಸಾಧ್ಯ. ನಾವು ರಾಜಕೀಯ ರಹಿತವಾಗಿ ಕಾರ್ಯಕ್ರಮ ಅನುಷ್ಠಾನಿಸಬೇಕು. ಅಂತಹ ಪ್ರಯತ್ನ ನೇಸರ ಯುವಕ ಮಂಡಲ ಮೂಲಕ ಆಗುತ್ತಿದೆ ಎಂದ ಅವರು ಉದ್ಯೋಗ ಖಾತರಿಯ ಪ್ರಯೋಜನ ಎಲ್ಲರಿಗೆ ದೊರೆಯಲಿ ಎಂದರು.
*ಸಭಾಧ್ಯಕ್ಷತೆ ವಹಿಸಿದ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ,* ಯುವಕ ಮಂಡಲದ ಮೂಲಕ ಈಗಾಗಲೇ ಹತ್ತಾರು ಸಮಾಜಮುಖಿ ಚಟುವಟಿಕೆ ಹಮ್ಮಿಕೊಂಡಿದೆ. ಗ್ರಾ.ಪಂ.ಮೂಲಕ ದೊರೆಯುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನೋಂದಣಿ ಮತ್ತು ಅರ್ಜಿ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದಕ್ಕೆ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆಯೂ ಇಂತಹ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದರು.
*ಉದ್ಯೋಗ ಖಾತರಿ ಯೋಜನೆಯ ಸಂಯೋಜಕಿ ನಮಿತಾ ಸಿ ಮಾತನಾಡಿ,* ಗ್ರಾಮಗಳಲ್ಲಿ ಜನರು ಸ್ವ ಆಸಕ್ತಿಯಿಂದ ಸರಕಾರದ ಸವಲತ್ತುಗಳನ್ನು ಬಳಸಿಕೊಳ್ಳಲು ಮುಂದಡಿ ಇಡಬೇಕು. ಆ ನಿಟ್ಟಿನಲ್ಲಿ ಗ್ರಾಮದಲ್ಲೆ ಸಂಘಟನೆ ಆಸಕ್ತಿ ವಹಿಸಿ ಕಾರ್ಯಕ್ರಮ ಅನುಷ್ಟಾನಿಸುವ ಈ ವಿಶಿಷ್ಟ ಪ್ರಯತ್ನ ಮಾದರಿಯಾದದು ಎಂದರು.
ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಸಂಯೋಜಕ ಆತೀಶ್ ಯೋಜನೆಯ ಕುರಿತು ವಿವರಿಸಿದರು.
*ಗ್ರಾ.ಪಂ.ಪಿಡಿಓ ಜಯಪ್ರಕಾಶ್ ಅಲೆಕ್ಕಾಡಿ* “ದುಡಿಯೋಣ ಬಾ” ಚಟುವಟಿಕೆ ಬಗ್ಗೆ ವಿವರಿಸಿದರು.
*ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಚಂದ್ರಾವತಿ ಇಟ್ರಾಡಿ, ಸದಸ್ಯರಾದ ಗುಲಾಬಿ ಬೊಮ್ಮೆಮಾರು, ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮಂಡಳಿ ಸದಸ್ಯೆ ಸುಜಾತ ವಿ ರಾಜ್ ಉಪಸ್ಥಿತರಿದ್ದರು. ನೇಸರ ಯುವಕ ಮಂಡಲ ಕಾರ್ಯದರ್ಶಿ ಶಶಿಕುಮಾರ್ ಸ್ವಾಗತಿಸಿ ಅಭಿನಂದನಾ ಮಾತುಗಳನ್ನಾಡಿದರು. ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು. ರಕ್ಷಿತಾ ಅಡ್ಯತಕಂಡ ನಿರೂಪಿಸಿದರು.*
*ಸಮ್ಮಾನ ಕಾರ್ಯಕ್ರಮ*
ಈ ಸಂದರ್ಭದಲ್ಲಿ ನೇಸರ ಯುವಕ ಮಂಡಲದ ಗೌರವಾಧ್ಯಕ್ಷರಾಗಿರುವ, ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಉಪಾಧ್ಯಕ್ಷೆ ಚಂದ್ರಾವತಿ ಇಟ್ರಾಡಿ, ಸದಸ್ಯೆ ಗುಲಾಬಿ ಬೊಮ್ಮೆಮಾರು ಅವರನ್ನು ಸನ್ಮಾನಿಸಲಾಯಿತು.