ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಯ ಅಂಗವಾಗಿ ರಂಗ ಗೀತೆ ಗಾಯನ ನಡೆಯಿತು.
ಕಾರ್ಯಕ್ರಮವನ್ನು ರಂಗಮನೆ ನಾಟಕ ಶಾಲೆಯ ಹಿರಿಯ ವಿದ್ಯಾರ್ಥಿನಿ, ಪ್ರಸ್ತುತ ಜಯಪುರದಲ್ಲಿ ಬುಡಕಟ್ಟು ಜನಾಂಗ ಸಂಸ್ಕೃತಿಯ ವಿಶೇಷ ಅಧ್ಯಯನ ನಡೆಸುತ್ತಿರುವ ಪ್ರಿಯಾಂಶು ಕೆ. ಅವರು ಡೋಲು ಬಾರಿಸಿ ಉದ್ಘಾಟಿಸಿದರು. ಬಳಿಕ’ ನನ್ನ ಈಗಿನ ಅಧ್ಯಯನಕ್ಕೆ ರಂಗಭೂಮಿಯಿಂದ ನಾನು ಪಡೆದ ಅನುಭವಗಳು ಬಹಳ ಪೂರಕವಾಗಿವೆ. ರಂಗಭೂಮಿಯಲ್ಲಿ ನಾನು ತೊಡಗಿಸಿಕೊಂಡದ್ದರಿಂದ
ಭಾಷೆ,ಜೀವನ ಶೈಲಿ,ಆಹಾರ ಕ್ರಮ ಎಲ್ಲವೂ ಭಿನ್ನವಾಗಿರುವ ರಾಜಸ್ಥಾನದಲ್ಲಿ ನಾನು ಧೈರ್ಯವಾಗಿ ಬದುಕಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ರಂಗಮನೆಗೆ ನಾನು ಯಾವತ್ತೂ ಆಭಾರಿ’ ಎಂದರು. ಅತಿಥಿಗಳಾಗಿ ಡಾ. ವಿದ್ಯಾ ಶಾರದ, ಲತಾ ಮಧುಸೂದನ್ ಮತ್ತು ನ್ಯಾಯವಾದಿ ಕೃಷ್ಣಮೂರ್ತಿ ಕೆ. ಭಾಗವಹಿಸಿದ್ದರು.
ಯುನೈಟೆಡ್ ಕಿಂಗ್ ಡಂನ ಪ್ರಸಿದ್ಧ ರಂಗನಟಿ ಹೆಲೆನ್ ಮಿರ್ರೇನ್ ಅವರು ನೀಡಿದ ಈ ವರ್ಷದ ವಿಶ್ವ ರಂಗಭೂಮಿ ದಿನದ ಸಂದೇಶವನ್ನು ಕಲಾವಿದ ವಿನೋದ್ ಮೂಡಗದ್ದೆ ವಾಚಿಸಿದರು.
ನಂತರ ರಂಗಮನೆಯ ರೂವಾರಿಯಾದ ಜೀವನ್ ರಾಂ ಸುಳ್ಯ ಅವರು ‘ ವರ್ತಮಾನ ಮತ್ತು ರಂಗಭೂಮಿಯ ಅನಿವಾರ್ಯತೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
‘ ನಟನೆ ಮಾಡದೆ ಇರುವ ವ್ಯಕ್ತಿಯೇ ಇಲ್ಲ. ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ರೀತಿಯಲ್ಲಿ ನಟರೇ ಆಗಿದ್ದಾರೆ. ಅಭಿನಯ ಇಲ್ಲದೇ ಜೀವನವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನಮ್ಮ ಬದುಕಿನಲ್ಲಿ ಅದು ಹಾಸು ಹೊಕ್ಕಾಗಿದೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡವನು ಜೀವನದಲ್ಲಿ ಎಂದೂ ಸೋಲಲಾರ.’ ಎಂದರು.
‘ ವೃತ್ತಿರಂಗ ಕಲಾವಿದರ ಬದುಕು ಇಂದು ಅನೇಕ ಸವಾಲುಗಳ ಮಧ್ಯೆ ನಿಂತಿದೆ.ಉಳಿದ ಸಾಂಸ್ಕೃತಿಕ ಸಂಗತಿಗಳಿಗೆ ಹೋಲಿಸಿದರೆ ವೃತ್ತಿ ರಂಗಕಲಾವಿದರಿಗೆ ಸಿಗುವ ಮಾನ್ಯತೆ ಬಹಳ ಕಡಿಮೆ. ಸರಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕಲಾವಿದರು ಸಮಾಜದ ಆಸ್ತಿ ಎಂದು ಪರಿಗಣಿಸುವಂತಾಗಬೇಕು’ ಎಂದರು.
ಬಳಿಕ ರಂಗಮನೆ ನಾಟಕ ಶಾಲೆ ಮತ್ತು ರಂಗಮಯೂರಿ ಕಲಾ ಶಾಲೆಯ ಕಲಾವಿರಿಂದ ವಿವಿಧ ನಾಟಕಗಳ ರಂಗಗೀತೆ ಗಾಯನ ಕಾರ್ಯಕ್ರಮ ನಡೆಯಿತು.ಗಾಯಕರಾಗಿ ಜೀವನ್ ರಾಂ ಸುಳ್ಯ,ಪ್ರಿಯಂಶು ಕೆ., ಶುಭದ, ಲೋಕೇಶ್ ಊರುಬೈಲ್, ಮಮತ ಕಲ್ಮಕಾರು, ಸುಶ್ಮಿತ, ವಿನೋದ್ ಸಾಗರ,ರಾಜ್ ಮುಖೇಶ್,ಮೇಘ ರಂಗಗೀತೆಗಳನ್ನು ಹಾಡಿದರು.
ಭರತ್ ಬೆಂಗಳೂರು ಮತ್ತು ಶುಭಕರ ಪುತ್ತೂರು ವಾದ್ಯ ನುಡಿಸಿ ಸಹಕರಿಸಿದರು. ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024